ಔರಾದ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕರ್ತವ್ಯ ನಿರ್ವಹಿಸಿ ಎಂದು ಶಾಸಕ ಪ್ರಭು ಚವ್ಹಾಣ ಎಂಟು ಬಾರಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆದರೂ ಸ್ಪಂದನೆ ಮಾತ್ರ ಸಿಗದೇ ಉಲ್ಬಣವಾಗಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ವಾಡಿಕೆಯಂತೆ ಆಗದೆ ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲಬಣವಾಗುತ್ತಿದೆ.ಅಲ್ಲದೆ ತಾಲೂಕಿನಲ್ಲಿನ ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ ಎಂದು ಶಾಸಕ ಚವ್ಹಾಣ ಪತ್ರದ ಮೂಲಕ ಗಮನ ಸೆಳೆದಿದ್ದರು. ಆದರೂ ಯಾವುದೇ ಪರಿಹಾರ ಸಿಕ್ಕಿಲ್ಲ.
ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುತ್ತದೆ ಎಂದು ಶಾಸಕ ಪ್ರಭು ಚವ್ಹಾಣ ಕಳೆದ ನಾಲ್ಕು ತಿಂಗಳಲ್ಲಿ ಸರ್ಕಾರ, ಜಿಲ್ಲಾಡಳಿತ, ಪ್ರದೇಶಿಕ ಆಯುಕ್ತರು ಮತ್ತು ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ. ಆದರೂ ಕೂಡ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಕಾರಂಜಾ ಜಲಾಶಯದಿಂದ ಗಡಿ ತಾಲೂಕಿನ ಮಾಂಜ್ರಾ ನದಿಗೆ ನೀರು ಬಿಡದಿರುವ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ನಿತ್ಯವೂ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲ್ಲದೇ ನೀರಿನ ಕೊರತೆ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಸಹ ಸ್ಥಗಿತಗೊಂಡಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ತಾಲೂಕಿನ ರೈತರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ತಾಲೂಕಿನ ಕೌಠಾ(ಬಿ) ಹಾಗೂ ಕಂದಗೂಳ ಸೇತುವೆ ಮೇಲೆ ಪ್ರತಿಭಟನೆ ನಡೆಸಿದ್ದರು.ಅಲ್ಲದೆ ಬೀದರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗ ಜಿಲ್ಲಾಧಿಕಾರಿಗಳು ವಾರದಲ್ಲಿ ಕಾರಂಜಾ ಜಲಾಶಯದಿಂದ ಮಾಜ್ರಾನದಿಗೆ ನೀರು ಬಿಡಲಾಗುವುದು ಎಂದು ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರಿಗೆ ತಿಳಿಸಿದ್ದರು. ಆದರೆ ನಾಲ್ಕು ತಿಂಗಳು ಕಳೆದರೂ ನಮ್ಮ ತಾಲೂಕಿಗೆ ಹನಿ ನೀರು ಸಹ ಬಂದಿಲ್ಲ ಎಂದು ಮಾಂಜ್ರಾ ನದಿ ದಡದಲ್ಲಿರುವ ಗ್ರಾಮಸ್ಥರ ಹಾಗೂ ರೈತ ಸಂಘದ ಸದಸ್ಯರು ಆರೋಪಿಸಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಸಬ್ಬಂಧಿಸಿದ ಗ್ರಾಪಂ ಹಾಗೂ ಪಪಂ ಅಧಿಕಾರಿಗಳಿಗೆ ಆದೇಶ ನೀಡಲು ಮುಂದಾಗಬೇಕು.ಇಲ್ಲವಾದಲ್ಲಿ ನಮ್ಮ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದರ ತಿಳಿಸಿದ್ದಾರೆ.
ಪಟ್ಟಣಕ್ಕೆ ಸರಬರಾಜು ಮಾಡುವ ಬಾವಿಗಳು ಬತ್ತಿವೆ. ಆದರೆ ಪಟ್ಟಣ ಸೇರಿದಂತೆ ಬಹುತೇಕ ಗ್ರಾಮದ ಖಾಸಗಿ ವ್ಯಕ್ತಿಗಳ ತೆರೆದ ಬಾವಿಯಲ್ಲಿ ನೀರು ಇದೆ. ವ್ಯಾಪಾರಿಗಳು ಮತ್ತು ಟ್ಯಾಂಕರ್ ಮಾಲೀಕರು ಖಾಸಗಿ ವ್ಯಕ್ತಿಗಳ ಹೊಲದ ಬಾವಿ ನೀರು ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕೂಡಲೇ ಖಾಸಗಿ ವ್ಯಕ್ತಿಗಳ ತೆರೆದ ಬಾವಿ ಮತ್ತು ಕೊಳವೆ ಬಾವಿ ವಶಕ್ಕೆ ಪಡೆದು ನೀರು ಪೂರೈಸಲು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಪುರಾತನ ಬಾವಿಗಳಲ್ಲಿ ನೀರು ಇದೆ. ಬಾವಿಯಲ್ಲಿನ ಹೂಳು ತೆಗೆದರೆ ಕನಿಷ್ಠ ಕುಡಿಯಲು ನೀರು ಸಿಗುತ್ತದೆ. ಅಧಿಕಾರಿಗಳು ಬೇಸಿಗೆ ಮುಗಿಯುವ ತನಕ ಸೋಮಾರಿಗಳಾಗದೆ ಜನರಿಗೆ ಉತ್ತಮ ಆಡಳಿತ ನೀಡಲು ಮುಂದಾಗಬೇಕು.
•
ಬಸವಣಪ್ಪ ಅಲ್ಮಾಜೆ,
ಹಿರಿಯ ಮುಖಂಡರು ಔರಾದ
ರವೀಂದ್ರ ಮುಕ್ತೇದಾರ