Advertisement

ನಮ್ಮ-ನಿಮ್ಮ ಸಂಬಂಧ ಕುಟುಂಬದಂತೆ; ಲಖನ್‌ ಜಾರಕಿಹೊಳಿ

06:05 PM Dec 07, 2021 | Team Udayavani |

ರಾಯಬಾಗ: ಮೊದಲಿನಿಂದಲೂ ಎಲ್ಲರೂ ನಮ್ಮೊಂದಿಗೆ ಪ್ರೀತಿ, ವಿಶ್ವಾಸದಿಂದ ಇದ್ದೀರಿ. ಈ ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಮುಂದೆಯೂ ಇರಲಿ. ನಿಮ್ಮ ಏನೇ ಸಮಸ್ಯೆಗಳಿದ್ದರೂ ಎಲ್ಲ ಕೆಲಸ ಮಾಡಿಕೊಳ್ಳಲು ನಾನು ಬದ್ಧನಿದ್ದೇನೆ. ನಮ್ಮ-ನಿಮ್ಮ ಸಂಬಂಧ ಕುಟುಂಬ ಸಂಬಂಧವಿದ್ದಂತೆ ಎಂದು ವಿಧಾನ ಪರಿಷತ್‌ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಹೇಳಿದರು.

Advertisement

ರಾಯಬಾಗ ಪಟ್ಟಣದಲ್ಲಿ ಸೋಮವಾರ ನಡೆದ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಗೋಕಾಕ, ಅರಭಾವಿ, ರಾಮದುರ್ಗ, ಸವದತ್ತಿ, ಖಾನಾಪುರ, ಬೆಳಗಾವಿ ಸೇರಿದಂತೆ ಜಿಲ್ಲಾದ್ಯಂತ ತೆರಳಿ ಪ್ರಚಾರ ಮಾಡಿದ ವೇಳೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಹಿಂದೆಯೂ ಮುಂದಿನ ದಿನಗಳಲ್ಲಿ ಗ್ರಾಪಂ, ಪಪಂ, ಪುರಸಭೆಗೆ ಹಂತ ಹಂತವಾಗಿ ಭೇಟಿ ನೀಡುತ್ತೇವೆ. ನಿಮ್ಮೆಲ್ಲರ ಕೆಲಸ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರಿನಿಂದ ಬಂದವರು ಭಾಷಣ ಮಾಡಿ ಹೋಗುತ್ತಾರೆ. ಚುನಾವಣೆ ಬಂದಾಗ ಮಾತ್ರ ಬರುವ ಆ ನಾಯಕರ ಭಾಷಣಕ್ಕೆ ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ ನಾಯಕರ ಮಾತಿಗೆ ಯಾರೂ ಮರುಳಾಗಬಾರದು. ವಿವೇಕರಾವ್‌ ಪಾಟೀಲ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೆ ನಾನು ಈ ಚುನಾವಣೆಗೆ ಸ್ಪರ್ಧೆ ಮಾಡುತ್ತಿರಲಿಲ್ಲ ಎಂದರು.

ರಾಯಬಾಗ, ಕುಡಚಿ ತಾಲೂಕಿನ ಸ್ಥಳೀಯ ಸಂಸ್ಥೆಗಳ ಸದಸ್ಯರು ಮೊದಲ ಪ್ರಾಶಸ್ತ್ಯದ ಮತ ನೀಡಿ ಪ್ರಚಂಡ ಬಹುಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಬೇಕು. ನಾನು ಪರಿಷತ್ತಿಗೆ ಆಯ್ಕೆಯಾದರೆ ವಿವೇಕರಾವ್‌ ಪಾಟೀಲ ಅವರೇ ಎಂಎಲ್‌ಸಿ ಇದ್ದಂತೆ. ಮುಂದಿನ ದಿನಗಳಲ್ಲಿ ವಿವೇಕರಾವ್‌ ಅವರಿಗೆ ಉನ್ನತ ಹುದ್ದೆ ಸಿಗುವುದು ಗ್ಯಾರಂಟಿ. ನೀವು ಇನ್ನು ಕೆಲವೇ ದಿನಗಳಲ್ಲಿ ಅವರನ್ನು ಅಧಿಕಾರದಲ್ಲಿ ಇರುವುದನ್ನು ನೋಡುತ್ತೀರಿ. ಹೀಗಾಗಿ ನಿಮ್ಮೆಲ್ಲರ ಮೊದಲ ಪ್ರಾಶಸ್ತ್ಯದ ಮತದ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಗ್ರಾಪಂ, ಪಪಂ, ಪುರಸಭೆ ಅಧ್ಯಕ್ಷರು, ಸದಸ್ಯರು ಎಲ್ಲರೂ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡೋಣ. ಮತಪತ್ರದಲ್ಲಿರುವ ಕ್ರಮಾಂಕ ಸಂಖ್ಯೆ 5ಕ್ಕೆ ನಿಮ್ಮ ಅಮೂಲ್ಯವಾದ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದವರೇ ಸಿದ್ದರಾಮಯ್ಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೂ ಅವರೇ ಕಾರಣರಾಗಿದ್ದಾರೆ. ತಮ್ಮ ಭಾಷಣದಲ್ಲಿ ಡಾ|  ಬಿ.ಆರ್‌. ಅಂಬೇಡ್ಕರ್‌, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ವಾಸ್ತವ ಅರಿಯದೇ ಯಾರೂ ಸಲಹೆ ಕೇಳಿ ತಮ್ಮ ಮನಸ್ಸಿಗೆ ಬಂದಂತೆ ಭಾಷಣ ಮಾಡುತ್ತಾರೆ. ಕಾಂಗ್ರೆಸ್‌ ಇಂದಿನ ಹೀನಾಯ ಸ್ಥಿತಿಗೆ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರಿಗೆ ತಮ್ಮ ಮತ ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

Advertisement

ಈ ವೇಳೆ ಮುಖಂಡರಾದ ಲಕ್ಷ್ಮೀಕಾಂತ ದೇಸಾಯಿ, ಭೂಪಾಲ ಪುಣೇಕರ, ಜ್ಯೋತೆಪ್ಪ ಪಾಟೀಲ, ರಾಯಬಾಗ ಪಪಂ ಅಧ್ಯಕ್ಷ ಸಂತೋಷ ಮೇತ್ರಿ, ಲಕ್ಷ್ಮೀಭಂತೆ, ಅಶೋಕ ಪಾಟೀಲ, ಮಹಾದೇವ ಪಡೋಲ್ಕರ, ಜಾಕೀರ ತರಡೆ, ಸಿದ್ದಪ್ಪ ಪೂಜೇರಿ ಇತರರು ಇದ್ದರು.

ವಿಧಾನ ಪರಿಷತ್‌ ಸದಸ್ಯ, ರಾಯಬಾಗ ಭಾಗದ ಪ್ರಮುಖ ನಾಯಕ ವಿವೇಕರಾವ್‌ ಪಾಟೀಲ ಅವರಿಗೆ ಟಿಕೆಟ್‌ ತಪ್ಪಿಸಿದವರೇ ನಿನ್ನೆ ಜಿಲ್ಲೆಗೆ ಆಗಮಿಸಿದ್ದವರು. ಇಲ್ಲ ಸಲ್ಲದ ಹೇಳಿಕೆ ನೀಡಿ ಅವರು ಜಗಳ ಹಚ್ಚಿ ಹೋಗುತ್ತಾರೆ. ಮತದಾರರು ಅವರ ಮಾತುಗಳಿಗೆ ಮರುಳಾಗಬಾರದು. ಜಾರಕಿಹೊಳಿ ಸಹೋದರರಿಗೆ ವಿವೇಕರಾವ್‌ ಶಕ್ತಿಯಾಗಿದ್ದಾರೆ.
ಲಖನ್‌ ಜಾರಕಿಹೊಳಿ
ಪಕ್ಷೇತರ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next