ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಕೈಗೊಂಡ ಮಹತ್ಕಾರ್ಯವಾದ ಸಮುದಾಯದವರಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡುವ ಅಭಿಯಾನದಲ್ಲಿ ಬಜಪೆ ಕೆಂಜಾರು ಬಳಿಯ 80 ವರ್ಷ ಪ್ರಾಯದ ಹಿರಿಯ ಬಂಟ ಮಹಿಳೆ ಮೋಹಿನಿ ಆಳ್ವ ಅವರ ಹಳೆ ಮನೆ ಸಂಪೂರ್ಣ ಶಿಥಿಲಗೊಂಡು ವಾಸಕ್ಕೆ ಅಸಾಧ್ಯವಾದ ಕಾರಣ ಕಾರ್ಯಪ್ರವೃತರಾಗಿ ನೂತನ ಮನೆ ಮಂಜೂರು ಮಾಡಿ ಇತ್ತೀಚೆಗೆ ಶಿಲಾನ್ಯಾಸವನ್ನು ನೆರವೇರಿಸಿದರು.
ಈ ಸಂದರ್ಭ ಹರೀಶ್ ಶೆಟ್ಟಿ ಮಾತನಾಡಿ, ನಾವು ಈ ಸಮಾಜದ ಜತೆಯಲ್ಲಿ ಹುಟ್ಟಿ-ಬೆಳೆದಿದ್ದೇವೆ. ಅಸಹಾಯಕರಿಗೆ ನೆರವಾಗುವ ಇಂತಹ ಅಪೂರ್ವ ಕೆಲಸಗಳ ಮೂಲಕ ಸಮಾಜದ ಋಣವನ್ನು ತೀರಿಸುವ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅವರು ತನ್ನ ಜೀವಿತಾವಧಿಯ ದಿನಗಳನ್ನು ಅತ್ಯಂತ ಸಂತೋಷದಿಂದ ಹೊಸ ಮನೆಯಲ್ಲಿ ಕಳೆಯುವುದನ್ನು ನಾವು ನೋಡಿ ಆನಂದಿಸಬೇಕು. ನಾವು ಮಾಡುವ ಕೆಲಸ ದೇವರಿಗೆ ಸಮರ್ಪಿತವಾಗಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಎಲ್ಲರಿಗೂ ದೇವರ ಕೃಪೆ ಇರಲಿ. ಇದರಲ್ಲಿ ಭಾಗಿಯಾದ ಮುಂಬಯಿಯ ದಾನಿಗಳು ಸಹಕರಿಸಿದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಿಳಿಸಿ, ಶುಭ ಹಾರೈಸಿದರು.
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಮೋಹಿನಿ ಆಳ್ವರ ಸ್ಥಿತಿಯನ್ನು ಕಂಡಾಗ ನಮಗೆ ಯಾವು ದಾದರೂ ಒಂದು ರೂಪದಲ್ಲಿ ಸಹಾ ಯ ಮಾಡಬೇಕು ಎಂದೆನಿಸಿತು. ಆ ನಿಟ್ಟಿನಲ್ಲಿ ವಾಸಕ್ಕೆ ಸರಿಯಾದ ಮನೆ ಇಲ್ಲದ ಹಿರಿಯ ಜೀವಕ್ಕೆ ಮನೆ, ತಾಯಿಲ್ಲದ ಅವರ ಮೊಮ್ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಿ ಒಕ್ಕೂಟ ಸಹಕರಿಸಿದೆ ಎಂದು ತಿಳಿಸಿ ಶುಭ ಹಾರೈಸಿದರು.
ಇದನ್ನೂ ಓದಿ:ಉಪಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ಸಿದ್ಧ: ರಮೇಶ ಕತ್ತಿ
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಲುಂಡ್ ಬಂಟರ ಸಂಘದ ಅಧ್ಯಕ್ಷ ವಸಂತ್ ಶೆಟ್ಟಿ ಪಲಿಮಾರು, ಮುಲುಂಡ್ ಬಂಟ್ಸ್ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಅಡ್ಯಂತಾಯ, ಕುಶಲ ಶೆಟ್ಟಿ, ಚಂದ್ರಹಾಸ ಎಲ್. ಶೆಟ್ಟಿ, ಪುಣೆ ಬಂಟ್ಸ್ ಮತ್ತು ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಜೀವನ್ ಶೆಟ್ಟಿ, ಅಭಿಲಾಶ್ ಶೆಟ್ಟಿ, ಸೂರಿಂಜೆ ಸುರೇಶ್ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರು, ಪುನೀತ್ ಮಾಡ ಮೊದಲಾದವರು ಉಪಸ್ಥಿತರಿದ್ದರು.