ಕುಮಟಾ: ಸರ್ಕಾರದಿಂದ ಉತ್ತರಕನ್ನಡ ಜಿಲ್ಲೆಗೆ ಬರುವ ಅನುದಾನಗಳು ಕಡಿಮೆ. ಆದರೆ ನಮ್ಮ ಜಿಲ್ಲೆಯಿಂದ ಸರ್ಕಾರ ಸಾಕಷ್ಟು ಲಾಭ ಪಡೆಯುತ್ತಿದೆ. ನಮ್ಮ ಜಿಲ್ಲೆಯ ಸಂಪತ್ತನ್ನು ಉಳಿಸಿಕೊಳ್ಳುವ ಜವಬ್ದಾರಿ ನಮ್ಮ ಮೇಲಿದೆ. ಶರಾವತಿ ಹಾಗೂ ಅಘನಾಶಿನಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಬಿಡಬಾರದು. ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಡಬೇಕಿದೆ ಎಂದು ಉತ್ತರಕನ್ನಡ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಸರ್ಕಾರ ನಮ್ಮ ಜಿಲ್ಲೆಯ ಶರಾವತಿ ಹಾಗೂ ಅಘನಾಶಿನಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಯತ್ನಿಸುತ್ತಿದೆ. ಈಗಲಾದರೂ ಜಿಲ್ಲೆಯ ಜನತೆ ಎಚ್ಚೆತ್ತು ಅದನ್ನು ಉಳಿಸಿಕೊಳ್ಳಬೇಕಿದೆ. ಈ ಕುರಿತು ಪ್ರತಿ ಗ್ರಾಮಮಟ್ಟದಲ್ಲಿ ಹಾಗೂ ಮೀನುಗಾರರಿಗೆ ಜಾಗೃತಿ ಮೂಡಿಸಬೇಕು. ನಾನೊಬ್ಬ ಶಾಸಕನಾಗಲ್ಲ ಜಿಲ್ಲೆಯ ಪ್ರಜೆಯಾಗಿ ಜಿಲ್ಲೆಯನ್ನು ಉಳಿಸಿಕೊಳ್ಳಲು ಹೋರಾಡುತ್ತೇನೆ. ಈ ಕುರಿತಂತೆ ಶಾಸಕ ಸುನೀಲ ನಾಯ್ಕ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸಂದರ್ಭ ಬಂದಾಗ ಉಗ್ರ ಹೋರಾಟಕ್ಕೂ ನಾವೆಲ್ಲ ಸನ್ನದ್ಧರಾಗೋಣ ಎಂದರು. ಸಮಿತಿಯ ಗೌರವ ಮಾರ್ಗದರ್ಶಕ ಹಾಗೂ ಉದ್ಯಮಿ ಮುರಲೀಧರ ಪ್ರಭು ಮಾತನಾಡಿ, ನದಿಯ ಹರಿವನ್ನು ಬದಲಾಯಿಸಿದರೆ ಜಿಲ್ಲೆಗೆ ಅಪಾರ ನಷ್ಟವುಂಟಾಗಲಿದೆ. ಮೀನುಗಾರಿಕೆಯನ್ನೇ ಅವಲಂಬಿಸಿರುವ ಮೀನುಗಾರರಿಗೆ ಅಪಾರ ತೊಂದರೆ ಯಾಗಲಿದೆ. ಹಾಗಾಗಿ ಹೋರಾಟಕ್ಕೆ ಮೀನುಗಾರರು ಬೆಂಬಲ ಸೂಚಿಸಬೇಕು. ಜಿಲ್ಲೆಯಲ್ಲಿ ಇದೊಂದೆ ಸಮಸ್ಯೆಯಲ್ಲ. ಉತ್ತರಕನ್ನಡವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಹೆಚ್ಚಿನ ಗಮನಹರಿಸಬೇಕು. ಹೈ.ಕಕ್ಕೆ ನೀಡಿದ ಮಹತ್ವವನ್ನು ಉತ್ತರಕನ್ನಡಕ್ಕೂ ನೀಡಬೇಕು. ಈ ಕುರಿತು ಜಿಲ್ಲೆಯ ಶಾಸಕರು ಸರ್ಕಾರದ ಗಮನಸೆಳೆಯಬೇಕು ಎಂದರು.
ಸಮಿತಿ ಅಧ್ಯಕ್ಷ ಎಂ.ಜಿ. ಭಟ್ಟ ಮಾತನಾಡಿ, ಕಳೆದ ಬೇಸಿಗೆಯಲ್ಲಿ ಕುಮಟಾ, ಹೊನ್ನಾವರ ಸೇರಿದಂತೆ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ಅನುಭವಿಸಲಾಗಿದೆ. ಆದರೆ ನದಿಯ ಸಾಂದ್ರತೆ ಕಡಿಮೆಯಾದರೆ ಇರುವ ಸಿಹಿ ನೀರು ಉಪ್ಪಾಗುವುದರಲ್ಲಿ ಸಂಶಯವಿಲ್ಲ. ಈ ಯೋಜನೆಯಿಂದ ಜಲಜೀವಿಗಳ ನಾಶವಾಗುವ ಸಾಧ್ಯತೆಯಿದೆ. ಸರ್ಕಾರ ಈ ಯೋಜನೆ ಕೈಬಿಡಬೇಕು. ಒಂದು ವೇಳೆ ಯೋಜನೆ ಜಾರಿಯಾದರೆ ಪಕ್ಷಾತೀತವಾಗಿ ಉಗ್ರಹೋರಾಟ ನಡೆಸಲಾಗುತ್ತದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯ ಜನತೆ ಜಿಲ್ಲೆಯಲ್ಲಿನ ಭೂಮಿ, ಪರಿಸರ ಸೇರಿದಂತೆ ಹಲವು ಸಂಪತ್ತುಗಳನ್ನು ಸರ್ಕಾರದೊತ್ತಡಕ್ಕೆ ಮಣಿದು ತ್ಯಾಗ ಮಾಡಿದ್ದಾರೆ. ಈಗ ಸರ್ಕಾರ ನೀರನ್ನು ತ್ಯಾಗ ಮಾಡಲು ಆಗ್ರಹಿಸಿದೆ. ಇದು ಸರಿಯಲ್ಲ. ಈ ಯೋಜನೆಯನ್ನು ತಡೆಯಲು ನಾವೆಲ್ಲರೂ ಒಂದಾಗಬೇಕು. ಜನಪ್ರತಿನಿಧಿಗಳು ನಮ್ಮ ಜಿಲ್ಲೆಯ ಜನತೆಯ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ವಿನೋದ ಪ್ರಭು, ಸಮಿತಿ ಹೊನ್ನಾವರ ಹಾಗೂ ಕುಮಟಾ ಭಾಗದ ಸದಸ್ಯರು, ಪದಾಧಿಕಾರಿಗಳು ಇದ್ದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ ಸ್ವಾಗತಿಸಿದರು. ಹೇಮಂತಕುಮಾರ ಗಾಂವಕರ ವಂದಿಸಿದರು.