Advertisement

ಗುರುಗಳ ದಾರಿಯಲ್ಲಿ ನಮ್ಮ ನಡಿಗೆ: ಶ್ರೀ ಶ್ವಪ್ರಸನ್ನತೀರ್ಥರು

09:58 AM Jan 06, 2020 | mahesh |

ಉಡುಪಿ ಶ್ರೀ ಪೇಜಾವರ ಮಠದ ಹಿರಿಯ ಯತಿ ರಾಷ್ಟ್ರಸಂತ ಖ್ಯಾತಿಯ ಶ್ರೀ ವಿಶ್ವೇಶತೀರ್ಥರು ಹರಿಪಾದ ಸೇರಿದ ಬಳಿಕ ಅವರ ಪಟ್ಟಶಿಷ್ಯ ನೂತನ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿದ್ದು ಆರಾಧನೋತ್ಸವಗಳ ಸಿದ್ಧತೆಯಲ್ಲಿದ್ದಾರೆ. ಶ್ರೀಗಳು ಅಲ್ಲಿಂದಲೇ “ಉದಯವಾಣಿ’ಯೊಂದಿಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

Advertisement

ಉಡುಪಿ: ಗುರುಗಳು ನಡೆಸಿಕೊಂಡು ಬಂದಿರುವ ಜನ ಸೇವೆ, ಆಧ್ಯಾತ್ಮಿಕ ಸೇವೆಗಳನ್ನು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನಿರ್ವಂಚನೆ ಯಿಂದ ಮಾಡುತ್ತೇವೆ. ಸಾಮಾಜಿಕ ಸಹಬಾಳ್ವೆ, ಶಾಂತಿಗಾಗಿ ಗುರುಗಳು ನಿತ್ಯನಿರಂತರ ಪ್ರಯ ತ್ನಿಸುತ್ತಿದ್ದರು. ಅವರು ನಡೆದ ಮಾರ್ಗದಲ್ಲಿ ನಡೆಯುವುದು ಅವರಿಗೆ ಸಲ್ಲಿಸುವ ಅತಿ ದೊಡ್ಡ ಗೌರವ ಎಂದು ಪೇಜಾವರ ಮಠದ ನೂತನ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

 ಗುರುಗಳ ಆರಾಧನೋತ್ಸವ ಎಂದು? ಏನೇನು ಸಿದ್ಧತೆ ನಡೆದಿವೆ?
ಗುರುಗಳು ವೃಂದಾವನಸ್ಥರಾದ ದಿನದಿಂದ ಚತುರ್ವೇದ, ರಾಮಾಯಣ, ಮಹಾಭಾರತ, ಭಾಗವತ, ಗೀತೆ, ಸರ್ವಮೂಲಗ್ರಂಥಗಳೇ ಮೊದಲಾದ ಪಾರಾಯಣ ಭಜನೆಯನ್ನು ಭಕ್ತರು, ಶಿಷ್ಯರು ನಡೆಸಿಕೊಂಡು ಬರುತ್ತಿದ್ದಾರೆ. ಆರಾಧನೋತ್ಸವ ಜ. 9ರಂದು ನಡೆಯಲಿದ್ದು, ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸ್ಥಳಾವಕಾಶ ಕಡಿಮೆಯಿರುವುದರಿಂದ ಜ. 11ರಂದು ಮಧ್ಯಾಹ್ನ ಬೆಂಗಳೂರಿನ ನ್ಯಾಶನಲ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಉಡುಪಿಯ ಶ್ರೀಕೃಷ್ಣ ಮಠ, ಪೇಜಾವರ ಮಠ, ತಲಪಾಡಿ ಸಮೀಪದ ಕಣ್ವತೀರ್ಥ, ಪೇಜಾವರ ಮೂಲಮಠ, ಪೆರ್ಣಂಕಿಲ- ಮುಚ್ಚಲಕೋಡು ದೇವಸ್ಥಾನಗಳಲ್ಲಿಯೂ ಜ. 9ರಂದು ಅನ್ನಸಂತರ್ಪಣೆ ನಡೆಸ ಲಾಗುತ್ತದೆ. ಮುಂಬಯಿ, ಚೆನ್ನೈ, ದಿಲ್ಲಿ, ಬಳ್ಳಾರಿ, ಹುಬ್ಬಳ್ಳಿ ಮೊದಲಾದೆಡೆ ಶಾಖಾ ಮಠಗಳಲ್ಲಿ ಅಲ್ಲಲ್ಲಿನವರು ಏರ್ಪಾಡು ಮಾಡುತ್ತಿದ್ದಾರೆ.

 ಗುರುಗಳ ವೃಂದಾವನ ಸನ್ನಿಧಿಗೆ ಭಕ್ತರು ಹೆಚ್ಚಿಗೆ ಬರುವ ನಿರೀಕ್ಷೆ ಇದೆ. ಅವರಿಗೆ ಸೇವಾ ಕಾರ್ಯಗಳನ್ನು ಸಲ್ಲಿಸಲು ಅವಕಾಶಗಳಿವೆಯೇ?
ಭಕ್ತರು ಏನು ಸೇವೆ ಮಾಡಿದರೂ ಅದನ್ನು ಸ್ವೀಕರಿಸುವ ವ್ಯವಸ್ಥೆ ಮಾಡುತ್ತೇವೆ. ಶಿಷ್ಯರು ಬಂದು ಪಾರಾಯಣಗಳನ್ನು ಮಾಡಬಹುದು. ಸಾಧನೆ ಮಾಡುವವರಿಗೆ ಅವಕಾಶ ನೀಡುತ್ತೇವೆ. ಗುರುಗಳಿಗೆ ಅತಿ ಪ್ರಿಯವಾದ ಸಮಾಜಸೇವೆ ಮಾಡಬಯಸುವವರಿಗೂ ಸೂಕ್ತ ಅವಕಾಶ ಕಲ್ಪಿಸಲಾಗುವುದು.

 ಶ್ರೀಗಳು ನಡೆಸುತ್ತಿದ್ದ ಸಂಘ-ಸಂಸ್ಥೆಗಳ ಮುಂದಿನ ಹೊಣೆಗಾರಿಕೆ ವಹಿಸಿಕೊಳ್ಳಲು ಯೋಜನೆ ರೂಪಿಸಿದ್ದೀರಾ?
30 ವರ್ಷಗಳಿಂದ ಸಂಚಾರ ಮಾಡಿದ ಅನುಭವವಿದೆ. ಹೀಗಾಗಿ ಸಂಘ-ಸಂಸ್ಥೆಗಳ ಕಲ್ಪನೆಗಳು ಇವೆ. ಆಡಳಿತ ಮಾತ್ರ ನಾವು ನೋಡುತ್ತಿರಲಿಲ್ಲ. ಲೆಕ್ಕಪರಿಶೋಧಕರು, ವ್ಯವಸ್ಥಾಪಕರ ತಂಡಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಈ ತಂಡದ ಮೂಲಕವೇ ಮುಂದಿನ ಕಾರ್ಯನಿರ್ವಹಣೆ ಮಾಡುತ್ತೇವೆ.

Advertisement

 ಶ್ರೀಗಳು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಮಾಡುತ್ತಿದ್ದ ಶಾಸ್ತ್ರ ಪಾಠವನ್ನು ಮುಂದುವರಿಸುತ್ತೀರಾ?
ಹೌದು. ಅದನ್ನು ಮುಂದುವರಿಸುವುದು ನನ್ನ ಹೊಣೆ. ಈ 12 ದಿನ ಬಿಟ್ಟು ಶಾಸ್ತ್ರ ಪಾಠಗಳನ್ನು ವಿದ್ಯಾರ್ಥಿಗಳಿಗೆ ಮಾಡುತ್ತೇವೆ.

 ಮೃತ್ತಿಕಾ ವೃಂದಾವನಗಳನ್ನು ಎಲ್ಲಿಯಾದರೂ ಸ್ಥಾಪನೆ ಮಾಡುವ ಉದ್ದೇಶವಿದೆಯೆ?
ಭಕ್ತರು ಬಂದು ಅಪೇಕ್ಷೆಪಟ್ಟಲ್ಲಿ ನೆರವೇರಿಸ ಬಹುದು. ನಾವಾಗಿ ಆಸಕ್ತಿ ವಹಿಸುವುದಿಲ್ಲ.

 ಮುಂದೆ ಹೆಚ್ಚಿನ ಸಮಯ ಬೆಂಗಳೂರಿನಲ್ಲಿ ಇರಬೇಕಾಗುತ್ತದೋ? ಉಡುಪಿಗೆ ಬರುವುದು ಯಾವಾಗ?
ಪೂರ್ಣಪ್ರಜ್ಞ ವಿದ್ಯಾಪೀಠದ ವ್ಯವಹಾರವನ್ನು ನೋಡಬೇಕಿರುವುದರಿಂದ ಸಹಜವಾಗಿ ಬೆಂಗಳೂರಿಗೆ ಹೆಚ್ಚಿನ ಅವಧಿ ಬಂದು ಹೋಗಬೇಕಾಗುತ್ತದೆ. ಉಡುಪಿಗೆ ಜ. 12ರಂದು ಬರುತ್ತೇವೆ. ಅಂದು ನೀಲಾವರ ಗೋಶಾಲೆಯಲ್ಲಿ ವಾರ್ಷಿಕೋತ್ಸವ, ಭಜನೆ, ಅನ್ನಸಂತರ್ಪಣೆ ಇದೆ.

 ಗುರುಗಳು ಅಗಲಿದ ಬಳಿಕ ಭಕ್ತ ವರ್ಗದ ಪ್ರತಿಕ್ರಿಯೆ ಏನಿದೆ?
ನಿತ್ಯ ಜನರು ವೃಂದಾವನಸ್ಥರಾದ ಸ್ಥಳಕ್ಕೆ ಭೇಟಿ ಕೊಟ್ಟು ಗುರುಗಳೊಂದಿಗೆ ತಮಗಿದ್ದ ಒಡನಾಟವನ್ನು ಸ್ಮರಿಸಿಕೊಂಡು ಭಾವುಕರಾಗು ತ್ತಿದ್ದಾರೆ. ಶಾಲಾ ಮಕ್ಕಳು ಗುಂಪುಗುಂಪಾಗಿ ಬರುತ್ತಿದ್ದಾರೆ. ಭಜನೆ, ಪಾರಾಯಣಗಳನ್ನು ನಡೆಸುವವರು ಬರುತ್ತಿದ್ದಾರೆ.

 ಗುರುಗಳ ಉತ್ತರಾಧಿಕಾರಿಗಳಾಗಿ ಭಕ್ತರಿಗೆ ತಮ್ಮ ಸಂದೇಶವೇನು?
ಗುರುಗಳು ಸಮಾಜದಲ್ಲಿ ಶಾಂತಿ, ಸುಭಿಕ್ಷೆ ಇರಲು, ನಾಡಿನ ಶ್ರೇಯಸ್ಸಿಗಾಗಿ ತಮ್ಮ ದೇಹದ ಶ್ರಮವನ್ನು ಲೆಕ್ಕಿಸದೆ ಪ್ರಯತ್ನಿಸುತ್ತಿದ್ದರು. ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಬಾಳ್ವೆ ಇರುವಂತೆ, ಗಲಭೆ, ದೊಂಬಿ, ಅನಾಚಾರಗಳು ಆಗದಂತೆ ನೋಡಿಕೊಳ್ಳಬೇಕಿದೆ. ಅವರು ನಡೆದಂತೆ ನಡೆಯುವುದೇ ಅವರಿಗೆ ಸಲ್ಲಿಸುವ ಗೌರವವಾಗಿದೆ. ಅವರು ನಡೆಸುತ್ತಿದ್ದ ಸಮಾಜಸೇವೆಯನ್ನು ನಾವೂ ಅದೇ ಮಟ್ಟ, ಅದೇ ಪ್ರಮಾಣದಲ್ಲಿ ಅಲ್ಲದಿದ್ದರೂ ನಮ್ಮ ಸಾಮರ್ಥ್ಯದ ಸೀಮೆಯಲ್ಲಿ ಸಾರ್ವಜನಿಕರ ಸಹಕಾರದಿಂದ ನಿರ್ವಂಚನೆಯಿಂದ ಮುಂದುವರಿಸುತ್ತೇವೆ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next