Advertisement

ಬಿಜೆಪಿಯಿಂದ ಪರಿವರ್ತನೆಗಾಗಿ ನಮ್ಮ ನಡಿಗೆ: ಸರಪಾಡಿಯಲ್ಲಿ ಸಭೆ

03:01 PM Jan 21, 2018 | |

ಪುಂಜಾಲಕಟ್ಟೆ: ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಪ್ರಕಾರ ದ.ಕ. ಜಿಲ್ಲೆಯಲ್ಲಿ ಈಗ ಹೊಂದಿರುವ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸೋಲನುಭವಿಸಲಿದೆ. ಅದರಲ್ಲಿ ಬಂಟ್ವಾಳ ಕ್ಷೇತ್ರ ಮೊದಲ ಪಟ್ಟಿಯಲ್ಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ಜ.14ರಂದು ಆರಂಭವಾದ 13 ದಿನಗಳ ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆಯ 6ನೇ ದಿನ ಶುಕ್ರವಾರ ರಾತ್ರಿ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಸಮೀಪ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಸೋಲಿನ ಭೀತಿ ಇದೆ. ವೇಣುಗೋಪಾಲ್‌ ನುಡಿದಂತೆ ರಮಾನಾಥ ರೈ ಸೋಲಿನ ಪಟ್ಟಿಯಲ್ಲಿದ್ದು, ಜಿಲ್ಲೆಯ 8 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸುತ್ತದೆ. ಬಂಟ್ವಾಳದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ರಕ್ತಾಕ್ಷರದಲ್ಲಿ ಬರೆದುಕೊಡುತ್ತೇನೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
ಸ್ವಾತಂತ್ರ್ಯ ಅನಂತರ ಕರ್ನಾಟಕ ಕಂಡ ಕೆಟ್ಟ ಮುಖ್ಯ ಮಂತ್ರಿ ಎಂದರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅತಿ ಹೆಚ್ಚು ಕೊಲೆ, ಆತ್ಮಹತ್ಯೆ, ಅಪರಾಧ ಕೃತ್ಯಗಳು ನಡೆದಿವೆ ಎಂದು ನಳಿನ್‌ ವಿಶ್ಲೇಷಿಸಿದರು.

ಪ್ರಧಾನಿ ಮೋದಿ ಅವರನ್ನು ಜನರು ಹೃದಯದಲ್ಲಿಟ್ಟುಕೊಂಡಿದ್ದಾರೆ. ಜಿಎಸ್‌ಟಿ, ಡೀಮಾನಿಟೈಸೇಶನ್‌ ಬಂದಾಗ ರಾಹುಲ್‌ ಕಣ್ಣೀರು ಹಾಕಿದ್ದರು. ಆದರೆ ಅದು ಜನರಿಗೆ ಯಾವುದೇ ತೊಂದರೆ ಮಾಡಲಿಲ್ಲ. ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

Advertisement

ಶಾಸಕ ಅಂಗಾರ ಅವರು ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ. ಆದರೆ ರಮಾನಾಥ ರೈ ಅವರು ಕೇವಲ ತೆಂಗಿನಕಾಯಿ ಒಡೆದದ್ದು ಬಿಟ್ಟರೆ, ಕೇಂದ್ರದ ಯೋಜನೆಗಳನ್ನು ಹಿಂದಿನ ಬಿಜೆಪಿ ಸರಕಾರ ಅನುಷ್ಠಾನಿಸಿದ್ದನ್ನು ತಾನು ಮಾಡಿದ್ದು ಎನ್ನುತ್ತಿದ್ದಾರೆ ಎಂದರು.

ವೃದ್ಧರಿಗೆ ಹಲ್ಲು, ಕಣ್ಣು ಕೊಡಿಸುತ್ತೇವೆ ಎಂದಿದ್ದ ಸಚಿವ ಯು.ಟಿ. ಖಾದರ್‌ ವಾಗ್ಧಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ನಳಿನ್‌, ಸರಕಾರ ಅನಿಲಭಾಗ್ಯವನ್ನು ಇನ್ನೂ ಸಮರ್ಪಕವಾಗಿ ಒದಗಿಸಿಲ್ಲ. ನಾವು ಉಜ್ವಲ ಯೋಜನೆ ಮೂಲಕ ಜನರಿಗೆ ನೆರವಾಗಿದ್ದೇವೆ. ಕೇಂದ್ರದ ಯೋಜನೆಯಿಂದಾಗಿಯೇ ಜನರಿಗೆ ನೆರವುಗಳು ಲಭಿಸುತ್ತಿವೆ ಎಂದರು.

ಕಾಂಗ್ರೆಸ್‌ ತೊಲಗಿದರೆ ಶಾಂತಿ: ಹರಿಕೃಷ್ಣ
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಇಂದು ರಾಜ್ಯ ಸರಕಾರ ದಿವಾಳಿಯಾಗಿದ್ದು, ಇಂದಿರಾ ಕ್ಯಾಂಟೀನ್‌ ಬಂದ್‌ ಆಗಿದೆ. ಕಾಂಗ್ರೆಸ್‌ ಪಕ್ಷವೇ ಇಬ್ಭಾಗವಾಗುತ್ತಿದೆ ಎಂದರು. ಮನೆ ಹಕ್ಕುಪತ್ರ ದುಡ್ಡಿದ್ದವರಿಗೆ ಮಾತ್ರ ಎಂಬಂತಾಗಿದೆ. ಸರಪಾಡಿಯಲ್ಲೂ ಡ್ಯಾಂ ಪರಿಹಾರ ವಿಚಾರದಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ ಅವರು, ಕಾಂಗ್ರೆಸ್‌ ತೊಲಗಿದರೆ ಮಾತ್ರ ದ.ಕ. ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು. 

ಜನ ಬೆಂಬಲ: ರಾಜೇಶ್‌ ನಾೖಕ್‌
ಯಾತ್ರೆ ರೂವಾರಿ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು, ಜನರ ಬಳಿಗೆ ಬಿಜೆಪಿ ವತಿಯಿಂದ ಪರಿವರ್ತನೆಗಾಗಿ ತಾನು ಆರು ದಿನಗಳಿಂದ ಪಾದಯಾತ್ರೆಯಲ್ಲಿ ತೊಡಗಿದ್ದು, ಜನರ ಅಭೂತಪೂರ್ವ ಬೆಂಬಲ ದೊರಕಿದೆ ಎಂದು ಹೇಳಿದರು. ಪಕ್ಷವನ್ನು ಗೆಲ್ಲಿಸುವಂತೆ ಕೋರಿದರು.

ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್‌, ಬಿಜೆಪಿ ಮುಂಬಯಿ ದಕ್ಷಿಣ ಭಾರತ ಮೀರಾ ಭಾಯಂದರ್‌ ಕ್ಷೇತ್ರದ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಮಾತನಾಡಿದರು. ಇದೇ ವೇಳೆ ಸ್ಥಳೀಯರಾದ ತಿಮ್ಮಪ್ಪ ಪೂಜಾರಿ, ನವೀನ್‌ ನಾಯಕ್‌, ಪ್ರಶಾಂತ್‌ ಲೋಬೊ ಬಿಜೆಪಿಗೆ ಸೇರ್ಪಡೆಗೊಂಡರು.

ಹಿರಿಯ ನಾಯಕ ಸರಪಾಡಿ ಸುಬ್ಬಣ್ಣ ಶೆಟ್ಟಿ, ಪಕ್ಷ ಪ್ರಮುಖರಾದ ಗೋವಿಂದ ಪ್ರಭು, ರಾಮದಾಸ್‌ ಬಂಟ್ವಾಳ, ದಿನೇಶ್‌ ಅಮ್ಟೂರು, ಮೋನಪ್ಪ ದೇವಸ್ಯ, ರಾಮಕೃಷ್ಣ ಮಯ್ಯ, ಉದಯ ಕುಮಾರ್‌ ರಾವ್‌, ಶಶಿಕಾಂತ ಶೆಟ್ಟಿ ಆರುಮುಡಿ, ನಾರಾಯಣ ಪೂಜಾರಿ ಬೊಳ್ಳುಕಲ್ಲು, ದಯಾನಂದ ಶೆಟ್ಟಿ ಮುನ್ನಲಾಯಿ, ಸಾಂತಪ್ಪ ಪೂಜಾರಿ ಹಟತಡ್ಕ, ಶಾಂತವೀರ ಪೂಜಾರಿ, ಪೂವಪ್ಪ ಕಡಮಾಜೆ, ಶಿವಪ್ಪ ಗೌಡ ನಿನ್ನಿಕಲ್ಲು, ಪುರುಷೋತ್ತಮ ಮಜಲು, ಸಂತೋಷ್‌ ಕುಮಾರ್‌ ಶೆಟ್ಟಿ, ಪ್ರೇಮಾ, ಧರಣೇಂದ್ರ ಜೈನ್‌, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಸದಾನಂದ ನಾವೂರ, ವಿಟ್ಠಲ ಶೆಟ್ಟಿ ಅಲ್ಲಿಪಾದೆ, ಸರಪಾಡಿ ಅಶೋಕ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಎನ್‌. ಧನಂಜಯ ಶೆಟ್ಟಿ ಸ್ವಾಗತಿಸಿದರು. ಸುದರ್ಶನ್‌ ಬಜ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರ ಮನೆಯಲ್ಲಿ ರಾಜೇಶ್‌ ನಾೖಕ್‌ ವಾಸ್ತವ್ಯ ಹೂಡಿದರು.

ಜಿಲ್ಲೆಗೆ ಕೇಂದ್ರದಿಂದ 14 ಸಾ. ಕೋ. ರೂ.
ದ.ಕ. ಜಿಲ್ಲೆಗೆ ಮೋದಿ ನೇತೃತ್ವದ ಕೇಂದ್ರ ಸರಕಾರ 14 ಸಾ. ಕೋ.ರೂ.ಗಳನ್ನು ಒದಗಿಸಿದೆ. ಬಿ.ಸಿ. ರೋಡಿನಿಂದ ಮುಕ್ಕದವರೆಗೆ 6 ಪಥದ ಕಾಂಕ್ರೀಟ್‌ ರಸ್ತೆಗೆ 924 ಕೋ. ರೂ.ಗೆ ಮಂಜೂರು ದೊರೆತಿದೆ. ಮುದ್ರಾ, ಜನಧನ ಯೋಜನೆ ದ.ಕ. ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಂಡಿದೆ ಎಂದು ಸಂಸದ ನಳಿನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next