Advertisement
ಬೆಳಿಗ್ಗೆ ಬಸ್ಸು ಬರುವ ಒಳಗೆ ತಿಂಡಿ ಆಗಿಲ್ಲವೆಂದರೆ ನನ್ನಜ್ಜ ಬಸ್ಸು ಹೋದರೂ ಇನ್ನೂ ತಿಂಡಿ ಆಗಿಲ್ಲವಲ್ಲ ಎಂದು ಭಾಷಣ ಪ್ರಾರಂಭಿಸುತ್ತಿದ್ದರು. ರಾತ್ರಿ ಬಸ್ಸು ಬಂದ ನಂತರ ಯಾರಾದರೂ ನೆಂಟರು ಬಂದರೋ ಇಲ್ಲವೋ ಎಂದು ನೋಡಿಕೊಂಡೇ ಊಟ ಮಾಡುತ್ತಿದ್ದದ್ದು. ಆಗೆಲ್ಲ ಮೊಬೈಲ್ ಹಾವಳಿ ಇಲ್ಲವಾದ್ದರಿಂದ ದಿಢೀರ್ ನೆಂಟರ ಆಗಮನದಿಂದಾಗುವ ಸಂತೋಷವನ್ನು ಅನುಭವಿಸುವ ಅವಕಾಶ ಸಿಗುತ್ತಿತ್ತು. ಈಗಿನ ಹಾಗೆ ಮನೆ ಬಾಗಿಲಿಗೆ ಬರುವವರೆಗೂ texting ಮಾಡುವುದರಿಂದ ಅನೀರೀಕ್ಷಿತವಾಗಿ ಬರಮಾಡಿಕೊಳ್ಳುವ ಕುತೂಹಲ ಕಳೆದುಹೋಗುತ್ತಿರಲಿಲ್ಲ. ಕೆಲವೊಮ್ಮೆ ಯಾರೂ ಇಳಿಯುವವರು ಇಲ್ಲದಿರುವಾಗ ಬಸ್ಸು ನಿಲ್ಲದೆ ಹೋದಾಗ ಯಾರು ಬಂದಿಲ್ಲವಲ್ಲ ಎಂದು ಅತ್ಯಂತ ಬೇಸರವಾಗುತ್ತಿತ್ತು. ಚಿಕ್ಕ ಮಕ್ಕಳೆಲ್ಲ ಡ್ರೈವರ್ ಮಾಮಾನಿಗೆ ಟಾಟಾ ಮಾಡಲು ಕಾಯುತ್ತಿದ್ದವು. ಮತ್ತೆ ಡ್ರೈವರ್ ಮಾಮ ಕೂಡ ಅಷ್ಟೇ ಪ್ರೀತಿಯಿಂದ ಟಾಟಾ ಮಾಡುತ್ತಿದ್ದ.
Related Articles
Advertisement
ಸಂತೆಯ ಹೊರತಾಗಿ ಬೇರೆ ದಿವಸಗಳಲ್ಲಿ ಬಸ್ಸು ಅಷ್ಟೊಂದು ತುಂಬಿರುವುದಿಲ್ಲವಾದ್ದರಿಂದ ನಿರ್ವಾಹಕ ತುಂಬಾ ಆರಾಮಾಗಿ ಎಲ್ಲರ ಕಷ್ಟ-ಸುಖ ವಿಚಾರಿಸುತ್ತ ವಯಸ್ಸಾದವರು ಯಾರಾದರೂ ಬಸ್ಸಿನಲ್ಲಿದ್ದರೆ ಅವರ ಹತ್ತಿರ ಎಲೆಯಡಿಕೆ ಕೇಳಿ ಹಾಕಿಕೊಳ್ಳುತ್ತ, ಶಾಲಾಮಕ್ಕಳಿದ್ದರೆ ಅವರ ಶಾಲೆಯ ಬಗ್ಗೆ , ಓದಿನ ಬಗ್ಗೆ ಲೋಕರೂಢಿ ಮಾತಾಡುತ್ತ ಹೋಗುತ್ತಿದ್ದ. ಎಲ್ಲರೂ ಗೊತ್ತಿರುವವರೇ ಆಗಿರುವುದರಿಂದ ಎಲ್ಲರ ಮನೆಯ ವಿಷಯವೂ ಹೆಚ್ಚುಕಡಿಮೆ ಅವನಿಗೆ ತಿಳಿದಿರುತ್ತಿತ್ತು. ಯಾರಾದರೂ ಹಳ್ಳಿಯವರು ಸಿಟಿಗೋ, ಆಸ್ಪತ್ರೆಗೋ ಅಥವಾ ಬ್ಯಾಂಕ್‌ಗೊà ಹೋಗುವವರಿದ್ದು ವಿಳಾಸ ತಿಳಿಯದವರಿದ್ದರೆ ನಿರ್ವಾಹಕ ಅವರಿಗೆ ವಿಳಾಸವನ್ನು, ಹೋಗುವ ದಾರಿಯನ್ನೋ ತೋರಿಸುತ್ತಿದ್ದ ಅಥವಾ ಆಟೋ ಚಾಲಕನಿಗೆ ಹೇಳಿ ಆಟೋ ಹತ್ತಿಸಿ ಬರುತ್ತಿದ್ದ.
ಶಾಲಾ ವಿದ್ಯಾರ್ಥಿನಿಯರು ಯಾರಾದರೂ ಹಾಸ್ಟೆಲ್‌ನಲ್ಲಿ ನಿಲ್ಲುವವರಿದ್ದರೆ ಅಥವಾ ಇನ್ನೆಲ್ಲಿಗೋ ಒಂಟಿಯಾಗಿ ಹೋಗುವವರಿದ್ದರೆ ಆ ನಿರ್ವಾಹಕನ ಮೇಲಿನ ನಂಬಿಕೆಯಿಂದ ಪೋಷಕರು ಮಾತಾಡಿ ಅವರನ್ನು ಸರಿಯಾದ ವಿಳಾಸಕ್ಕೆ ತಲುಪಿಸುವಂತೆ ಕೇಳಿಕೊಳ್ಳುತ್ತಿದ್ದರು. ಹಾಗೆಯೇ ಸಿಟಿಯಿಂದ ಯಾರಾದರೂ ಆಗಂತುಕರು ಹಳ್ಳಿ ಸ್ನೇಹಿತನ ಮನೆಗೋ ಅಥವಾ ಬಂಧುಗಳ ಮನೆಗೋ ಬಂದರೆ ಸರಿಯಾದ ವಿಳಾಸ ತೋರಿಸುವ ಜವಾಬ್ದಾರಿಯೂ ನಿರ್ವಾಹಕನದ್ದಾಗಿರುತ್ತಿತ್ತು.
ಇದೇ ರೀತಿ ದಿನವೂ ಹಲವು ಅನುಭವಗಳು ಬಸ್ಸಿನಲ್ಲಿ ಆದದ್ದಿದೆ. ಕೆಲವೊಮ್ಮೆ ಹಾವುಗಳು ಅಡ್ಡ ಬರುವುದಿದೆ. ಕಾಡುಕೋಣಗಳು ಸಿಕ್ಕಿದ್ದಿದೆ. ಇದೆಲ್ಲದರ ಮಧ್ಯೆ ನಮ್ಮ ಬಸ್ಸು ಒಂದು ದಿನವೂ ತಪ್ಪದೆ ಎಷ್ಟೇ ಜಡಿ ಮಳೆ ಬಂದರೂ ಬರುವುದುಂಟು. ಶಾಲಾಮಕ್ಕಳಿಗೆ ಮತ್ತು ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತದೆಂದೂ ಯಾವುದೇ ಕಾರಣಕ್ಕೂ ಬಸ್ಸು ನಿಲ್ಲಿಸುತ್ತಿರಲಿಲ್ಲ. ನನ್ನೂರ ಏಕೈಕ ಬಸ್ಸು ನಮ್ಮ ಹಳ್ಳಿಯ ಜನರ ಜೀವನದ ಅವಿಭಾಜ್ಯ ಅಂಗದಂತಿತ್ತು.
ಆದರೆ, ಈಗ ಎಲ್ಲವೂ ಬದಲಾಗಿದೆ. ವ್ಯವಸ್ಥಿತವಾದ ರಸ್ತೆ ಬಂದಿದೆ. ರಸ್ತೆ ಸರಿಯಾಗುತ್ತಿದ್ದಂತೆ ಅದರಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಮನೆಮನೆಗಳಲ್ಲಿಯೂ ಸ್ವಂತ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಶಾಲಾಮಕ್ಕಳಿಗೆ ಶಾಲಾವಾಹನಗಳ ವ್ಯವಸ್ಥೆಯಾಗಿದೆ. ಸಂತೆಗೆ ಹೋಗುವವರು ಕಡಿಮೆಯಾಗಿದ್ದಾರೆ. ವಾರದಲ್ಲಿ ಒಂದೇ ದಿನ ವಿಶೇಷ ಅಡುಗೆ ಮಾಡುತ್ತಿದ್ದ ಮನೆಗಳಲ್ಲಿ ಈಗ ಕೂಗಳತೆಯ ದೂರದಲ್ಲಿಯೇ ಬಾಯ್ಲರ್ ಚಿಕನ್ ಸಿಗುವುದರಿಂದ ದಿನವೂ ವಿಶೇಷ ಅಡುಗೆ.
ಜೀವನಶೈಲಿ ಬದಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಕೈಯಲ್ಲೂ ಮೊಬೈಲ್ ಲಗ್ಗೆಯಿಟ್ಟು ಬಸ್ಸಿನಲ್ಲಿರುವ ಪರಿಚಿತರೂ ಮಾತಾನಾಡದೇ ಮೊಬೈಲ್ ತಿರುಹಾಕುತ್ತ ಕುಳಿತಿರುತ್ತಾರೆ. ಈಗಲೂ ಬರುವುದು ಒಂದೇ ಬಸ್ಸಾದರೂ ತೊಂದರೆಯಾದಲ್ಲಿ ಮೊಬೈಲ್ ಮೂಲಕ ಎಲ್ಲಿದ್ದರೂ ತಿಳಿಯುತ್ತದೆ. ಮೊದಲಿನಂತೆ ಬಸ್ಸು ಬರುವುದನ್ನು ಕಾಯುವ ಬದಲು ಧಾರಾವಾಹಿಗಳನ್ನು ನೋಡುತ್ತ ನಿರಮ್ಮಳವಾಗಿರುವ ಕಾಲ ಬಂದಿದೆ.
ಆದರೆ ಹಳ್ಳಿ ಮಕ್ಕಳಿಗೆ ಸವಾಲುಗಳನ್ನೆದುರಿಸಿ ದೃಢವಾಗಿ ಜೀವನವನ್ನ ಎದುರಿಸುವ ಹತ್ತಾರು ಬಗೆಯ ಅನುಭವಗಳೇ ನಿಧಾನವಾಗಿ ಕಣ್ಮರೆಯಾಗುತ್ತ ಇಷ್ಟವಿದ್ದೋ ಇಲ್ಲದೆಯೋ ಪಟ್ಟಣದ ಇನ್‌ಸ್ಟಂಟ್ ಬದುಕಿನ ಮಕ್ಕಳ ಜೊತೆ ಸ್ವರ್ಧೆಗೆ ತಯಾರಾಗುವುದೇ ಬದುಕಿನ ಬಹುದೊಡ್ಡ ಸಾಧನೆಯೆಂಬಂತಾಗಿದೆ.
ಅನುಪಮಾ ಡಿ. ಎಸ್.ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿ
ಮಣಿಪಾಲ ನರ್ಸಿಂಗ್ ಕಾಲೇಜು, ಮಣಿಪಾಲ