Advertisement
“ಎಲುಬಿಲ್ಲದ ನಾಲಗೆ’ ಎಂದು ಸಾಮಾ ನ್ಯವಾಗಿ ಟೀಕೆಗೊಳಗಾಗುವ, ನಾವು ಅತೀ ಜಾಗರೂಕತೆಯಿಂದ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾದ ನಾಲಗೆ ನಮ್ಮ ದೇಹದ ಬಹು ಮುಖ್ಯ ವಾದ ಅಂಗ. ನಾಲಗೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳದಿದ್ದರೆ ನಮ್ಮ ಬದುಕಿನಲ್ಲಿ ಅದೆಷ್ಟೋ ನೋವು, ಮನಸ್ತಾಪ, ಅನಾಹುತಗಳನ್ನು ಎದುರಿಸ ಬೇಕಾಗುವುದು ಖಚಿತ.
Related Articles
Advertisement
ಮಾತಿನಿಂದ ಒಳ್ಳೆಯ ಗೆಳೆತನವನ್ನು ಸಾಧಿಸಬಹುದು. ಮಾತಿನಿಂದಲೇ ದ್ವೇಷ, ಹಗೆತನವೂ ಸೃಷ್ಟಿಯಾಗಬಹುದು. ಕೊಲೆ, ಕಲಹಗಳಾಗಬಹುದು. “ಮಾತೇ ಮುತ್ತು, ಮಾತೇ ಮೃತ್ಯು’ ಎಂದು ಹಿರಿಯರು ಹೇಳಿದ್ದಾರೆ. ನಾಲಗೆಯಿಂದ ಜಾರಿಬಿದ್ದ ಮಾತುಗಳನ್ನು ಹಿಂದೆ ಪಡೆಯಲಾಗದು. ಮಾತುಗಳು ಉಂಟುಮಾಡುವ ಗಾಯವನ್ನು ಅಳಿಸಲಾಗದು. ಅದು ದೀರ್ಘಕಾಲದ ಪರಿಣಾಮವನ್ನು ಬೀರುತ್ತದೆ. ಆದುದರಿಂದ ಬುದ್ಧಿವಂತನಾದವನು ಪರಿಣಾಮವನ್ನು ಯೋಚಿಸಿ ಮಾತ ನಾಡುವುದನ್ನು ರೂಢಿಸಿಕೊಂಡರೆ ಸಂಬಂಧಗಳನ್ನು ಉತ್ತಮವಾಗಿ ಇರಿಸಿ ಕೊಳ್ಳಬಹುದು. ನಮ್ಮ ಎಲ್ಲ ವ್ಯವಹಾರ ಗಳು ನಾವಾಡುವ ಮಾತುಗಳನ್ನು ಅವ ಲಂಬಿಸಿಕೊಂಡಿವೆ. ಮಾತು ಬಲ್ಲವನಿಗೆ ಜಗಳವಿಲ್ಲ. ಅಂದರೆ ಯಾವಾಗ, ಯಾರಲ್ಲಿ ಏನನ್ನು ಮಾತನಾಡಬೇಕು ಎಂದು ತಿಳಿದರೆ ಜಗಳವಾಗದು ಎಂದರ್ಥ. ಇದು ನಾವು ನಾಲಗೆಯಿಂದಾಡುವ ಮಾತಿನಿಂದ ಉಂಟಾಗುವ ಪರಿಣಾಮ ವಾದರೆ ಕೇವಲ ಜಿಹ್ವಾ ಚಾಪಲ್ಯಕ್ಕೆ ಶರಣಾಗಿ ಕಂಡ ಕಂಡದ್ದನ್ನೆಲ್ಲ ತಿನ್ನುವ ಚಟದಿಂದ ಆರೋಗ್ಯ ಹಾಳು. ನಾಲಗೆಗೆ ಹಿತಕರವಾದದ್ದೆಲ್ಲ ಆರೋಗ್ಯಕ್ಕೆ ಹಿತಕರವಲ್ಲ. ಆಹಾರ ಸೇವನೆಯ ವಿಚಾರದಲ್ಲೂ ಮುಂದಾಲೋಚನೆ ಇಲ್ಲ ವಾದರೆ ನಾಲಗೆಯೇ ನಮ್ಮ ದೇಹದ ಶತ್ರುವಾಗಬಹುದು. ಅನಾರೋಗ್ಯಕ್ಕೆ ತುತ್ತಾಗಿ ದುಃಖದ ದಿನಗಳನ್ನು ಎದುರಿಸ ಬೇಕಾಗಬಹುದು. ಕ್ಷಣಿಕವಾದ ಬಾಯಿ ರುಚಿ ನೀಡುವ, ಆರೋಗ್ಯಕ್ಕೆ ಹಾನಿಕರ ವಾದ ಆಹಾರ ಸೇವನೆಯಿಂದ ದೂರ ವಿದ್ದಷ್ಟು ಕ್ಷೇಮ. ಒಟ್ಟಿನಲ್ಲಿ ನಾಲಗೆಯ ಮೇಲೆ ನಿಯಂತ್ರಣವಿಲ್ಲದೇ ಹೋದರೆ ಅಪಾಯ ಖಚಿತ. ಅದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡುವ ನಮ್ಮೊಳಗಿನ ಶತ್ರು. ನಿಯಂತ್ರಿಸಿಕೊಂಡು ಉಪಯೋಗಿಸಿದರೆ ಯಶಸ್ಸಿಗೆ ಸಾಧನ. ನಾವಾಡುವಾ ಮಾತು ವಿವೇಕದಿಂದ ಕೂಡಿರಲಿ. ಮಾತು ಮನ ಮತ್ತು ಮನೆಗಳನ್ನು ಬೆಳಗುವಂತಿರಲಿ. - ವಿದ್ಯಾ ಅಮ್ಮಣ್ಣಾಯ, ಕಾಪು