ಬೆಂಗಳೂರು: “ನಮ್ಮ ಪುತ್ರ ಯಾವುದೇ ಸಂಘಟನೆಗೆ ಸೇರಿಲ್ಲ. ಆತ ಮುದ್ಧ, ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ದೇವರು ನೋಡಿಕೊಳ್ಳುತ್ತಾನೆ. ಆತನಿಗೆ ನ್ಯಾಯ ಸಿಗುವ ಭರವಸೆಯಿದೆ,’ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ ಶೂಟರ್ ಆಗಿರುವ ಪರುಶುರಾಮ್ ವಾಗ್ಮೋರೆ ತಾಯಿ ಜಾನಕಿಬಾಯಿ ಅವರ ಮಾತಿದು.
ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ ಎಸ್‌ಐಟಿ ವಶದಲ್ಲಿರುವ ಪರಶುರಾಮ್ ವಾಗ್ಮೋರೆ ಭೇಟಿ ಮಾಡಿದ ಆತನ ತಂದೆ ಅಶೋಕ್ ವಾಗ್ಮೋರೆ ಮತ್ತು ತಾಯಿ ಜಾನಕಿಬಾಯಿ, ಪುತ್ರನನ್ನು ತಬ್ಬಿ ಕಣ್ಣೀರಿಟ್ಟರು. ಪುತ್ರನ ಜತೆ ಕೆಲಕಾಲ ಮಾತನಾಡಿ ನೋವು ತೋಡಿಕೊಂಡರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಾನಕಿಬಾಯಿ,
ಮಗ ಪರುಶರಾಮ್ ಮುಗ್ಧನಾಗಿದ್ದು, ಸಂಘಟನೆಗೂ ಸೇರಿಲ್ಲ. ನ್ಯಾಯಸಿಗುವ ಭರವಸೆಯಿದೆ ಎಂದರು.ಅಲ್ಲದೆ, ಪರುಶರಾಮ್‌ನನ್ನು ಪೊಲೀಸರು ಹೊಡೆದಿಲ್ಲ.ನೋವು ಕೊಟ್ಟಿಲ್ಲ. ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.ತಂದೆ ಅಶೋಕ್ ವಾಗ್ಮೋರೆ ಮಾತನಾಡಿ, ತಾಯಿಯನ್ನು ನೋಡಿ ಪರಶುರಾಮ ಅಳುತಿದ್ದ. ಯಾವ ತಾಯಿಗಾದರು ಈ ಸ್ಥಿತಿಯಲ್ಲಿ ಮಗನನ್ನ ನೋಡಿದಾಕ್ಷಣ ನೋವಾಗುತ್ತೆ. ಅವನಿಗೆ ಆತ್ಮವಿಶ್ವಾಸ ತುಂಬಿ ಬಂದಿದ್ದೇವೆ ಎಂದರು.
ಕುತಂತ್ರಕ್ಕೆ ಬಲಿಯಾಗಿದ್ದೇನೆ: ಪೋಷಕರನ್ನು ಭೇಟಿ ಮಾಡಿ ನೋವು ತೋಡಿಕೊಂಡ ಪರುಶುರಾಮ್, ತಾನು ಯಾರಧ್ದೋ ಕುತಂತ್ರಕ್ಕೆ ಬಲಿಯಾಗಿದ್ದೇನೆ. ಶೀಘ್ರವೇ ಬಿಡುಗಡೆಯಾಗಿ ಬರುತ್ತೇನೆ ಎಂದು ಹೇಳಿಕೊಂಡಿದ್ದಾನೆ. ತಾಯಿ ಜಾನಕಿ, ತಪ್ಪು ಮಾಡಿದ್ದರೆ ಪೊಲೀಸರ ಎದುರು ಒಪ್ಪಿಕೋ ಎಂದು ಹೇಳಿದ್ದಾರೆ. ಮತ್ತಷ್ಟು ಭಾವುಕನಾದ ಪರುಶರಾಮ್, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಂದೆಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.