ನವದೆಹಲಿ : ಪರಸನಾಥ ಪರ್ವತ ಶ್ರೇಣಿಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವುದನ್ನು ವಿರೋಧಿಸಿ ದೇಶಾದ್ಯಂತ ಜೈನ ಧರ್ಮೀಯರು ನಡೆಸಿದ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ.
ಜತೆಗೆ ಪ್ರವಾಸಿ ತಾಣ ಎಂಬ ನಿರ್ಣಯ ಬದಲಿಸಲು ಮುಂದಾಗಿದೆ. ಜೈನ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂಥ ಯಾವುದೇ ನಿರ್ಣಯವನ್ನು ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ.
ಪರಸನಾಥ ಪರ್ವತಶ್ರೇಣಿಯಲ್ಲಿರುವ ಜೈನರ ಪ್ರಮುಖ ಧಾರ್ಮಿಕ ಕ್ಷೇತ್ರ ಶ್ರೀ ಸಮ್ಮದ್ ಶಿಖರ್ಜಿ ಕೂಡ ಸೇರಿದ್ದು, ಪ್ರವಾಸಿತಾಣವಾಗಿ ಗುರುತಿಸುವುದರೊಂದಿಗೆ ನಡೆಯುವ ಬೆಳವಣಿಗೆಗಳು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುತ್ತವೆ ಎಂದು ಜೈನ ಧರ್ಮೀಯರು ಆಕ್ಷೇಪ ವ್ಯಕ್ತ ಪಡಿಸಿ, ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಜಾರ್ಖಂಡ್ ಸರ್ಕಾರಕ್ಕೆ ಪತ್ರಬರೆದು ನಿರ್ಣಯ ಹಿಂಪಡೆಯಲು ನಿರ್ದೇಶಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಕೂಡ ಬಿಜೆಪಿಯ ಬೆನ್ನು ಬಿದ್ದಿದ್ದು, ಕೇಂದ್ರಸರ್ಕಾರ ಜೈನರ ಪವಿತ್ರ ಕ್ಷೇತ್ರಗಳನ್ನೆಲ್ಲ ವಾಣಿಜ್ಯೀಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರದೀಪ್ ಜೈನ್ ಆದಿತ್ಯಾ ಆರೋಪಿಸಿದ್ದಾರೆ.