Advertisement

ತಾಲೂಕಿನಲ್ಲಿ ಪ್ರಥಮ ಬಾರಿಗೆ ಪೂ.ಪ್ರಾ. ವಿಭಾಗ ಆರಂಭಿಸಿದ ಹೆಗ್ಗಳಿಕೆ

01:09 PM Nov 09, 2019 | mahesh |

19ನೇಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1914 ಶಾಲೆ ಸ್ಥಾಪನೆ
105 ವರ್ಷಗಳ ಇತಿಹಾಸವಿರುವ ಶಾಲೆ

ಕೊಲ್ಲೂರು: ಕುಂದಾಪುರ ತಾ| ಬೈಂದೂರು ಶೈಕ್ಷಣಿಕ ವಲಯ ದಲ್ಲಿಯೇ ಗಮನ ಸೆಳೆಯುತ್ತಿರುವ ವಂಡ್ಸೆ ಸ.ಮಾ.ಹಿ.ಪ್ರಾ. ಶಾಲೆಗೆ ಈಗ 105 ವರ್ಷ. 2016ರಲ್ಲಿ ಶತ ಮಾನೋತ್ಸವ ಆಚರಿಸಿದ್ದು, ಪ್ರಸ್ತುತ 290 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

1914ರಲ್ಲಿ ಸ್ಥಾಪನೆಯಾದ ಈ ಶಾಲೆ ಸಹಸ್ರ ವಿದ್ಯಾರ್ಥಿ ಗಳಿಗೆ ವಿದ್ಯಾದಾನ ಮಾಡಿದೆ. 1914ರಿಂದ 1955ರ ವರೆಗೆ ಕಿರಿಯ ಪ್ರಾಥಮಿಕ ಶಾಲೆಯಾಗಿ, 1956ರಿಂದ 1969ರ ವರೆಗೆ ಬೋರ್ಡ್‌ ಹೈಯರ್‌ ಎಲಿಮೆಂಟರಿ ಸ್ಕೂಲ್‌ ಆಗಿ, 1970- 71ರಲ್ಲಿ ಹಿ.ಪ್ರಾ. ಶಾಲೆಯಾಗಿ, 1981ರಿಂದ ಮಾ. ಹಿ.ಪ್ರಾ. ಶಾಲೆಯಾಗಿ ಬೆಳವಣಿಗೆ ಕಂಡಿದೆ. 2016ರಿಂದ ಆಂ.ಮಾ.ದಲ್ಲಿ ಎಲ್‌.ಕೆ.ಜಿ., ಯು.ಕೆ.ಜಿ ತರಗತಿಗಳು ಆರಂಭವಾದವು. ಈ ಮೂಲಕ ತಾಲೂಕಿನಲ್ಲೇ ಮೊದಲ ಬಾರಿ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊಳಿಸಿದ ಹೆಗ್ಗಳಿಕೆ ಶಾಲೆಯದ್ದು. ಈ ಶೈಕ್ಷಣಿಕ ವರ್ಷದಿಂದ ಆಂ.ಮಾ. ವಿಭಾಗಕ್ಕೆ ಅಧಿಕೃತ ಮಾನ್ಯತೆ ದೊರಕಿದೆ.

1956ರಲ್ಲಿ ಹಿ.ಪ್ರಾ. ಶಾಲೆಯಾಗಿ ಮುಂಭಡ್ತಿ
1956ರಲ್ಲಿ ಹಿ.ಪ್ರಾ. ಶಾಲೆಯಾಗಿ ಮುಂಭಡ್ತಿ ಪಡೆದಿದ್ದು, ಬೈಂದೂರು ಕ್ಷೇತ್ರದ ಪ್ರಥಮ ಶಾಸಕ ಯಡ್ತರೆ ಮಂಜಯ್ಯ ಶೆಟ್ಟರು ಶಾಲೆ ಕಟ್ಟಡವನ್ನು ಉದ್ಘಾಟಿಸಿದರು. 80-90ರ ದಶಕ ಈ ಶಾಲೆಗೆ ಸುವರ್ಣ ಯುಗ ಎನ್ನಬಹುದು. ಕೂಲಿ ಯಿಂದ ಶಾಲೆಗೆ, ಸರ್ವಶಿಕ್ಷಾ ಅಭಿಯಾನ ಮೊದಲಾದ ಕಾರ್ಯಕ್ರಮ ಅನುಷ್ಠಾನ ಆದ ಅನಂತರ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. 5, 6, 7ನೇ ತರಗತಿಯನ್ನು ಎರಡು, 3 ವಿಭಾಗಗಳಾಗಿ ವಿಂಗಡಿಸಿ ಪಾಠ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಎಷ್ಟೇ ಮಕ್ಕಳು ದಾಖಲಾತಿಗೆ ಬಂದರೂ ಮಕ್ಕಳನ್ನು ವಾಪಸ್ಸು ಕಳಿಸಿದ ಉದಾಹರಣೆ ಈ ಶಾಲೆಗಿಲ್ಲ.

Advertisement

ವಾಹನ ವ್ಯವಸ್ಥೆ
2000ನೇ ಇಸವಿ ಅನಂತರ ಖಾಸಗಿ ಶಾಲೆಗಳ ಹೆಚ್ಚಳದಿಂದ ಈ ಶಾಲೆಗೂ ಮಕ್ಕಳ ಕೊರತೆ ಬಿಸಿ ತಟ್ಟಿತ್ತು. 2016ರಲ್ಲಿ ಎಸ್‌ಡಿಎಂಸಿ, ಶತಮಾನೋತ್ಸವ ಸಮಿತಿ, ಗ್ರಾಮ ಪಂಚಾಯತ್‌ ಹಾಗೂ ವಿದ್ಯಾಭಿಮಾನಿಗಳು ಶಾಲೆಯ ಉಳಿವಿಗೆ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸುವ ಮಹತ್ವದ ನಿರ್ಧಾರ ತೆಗೆದುಕೊಂಡರು. ಮೂಕಾಂಬಿಕಾ ಚಾರಿಟೆಬಲ್‌ ಟ್ರಸ್ಟ್‌ನ ಸ್ಥಾಪನೆಯಾಯಿತು. ಶತಮಾನೋತ್ಸವದ ಸವಿನೆನಪಿಗಾಗಿ ಪೂರ್ವ ಪ್ರಾಥಮಿಕ ವಿಭಾಗವನ್ನು ಆರಂಭಿಸಿ, 2017ರ ಶೈಕ್ಷಣಿಕ ವರ್ಷದಲ್ಲಿ ಆಂಗ್ಲಮಾಧ್ಯಮ ವಿಭಾಗದಲ್ಲಿ 1ನೇ ತರಗತಿ ಆರಂಭಿಸಲಾಯಿತು. ವಾಹನ ಸೌಕರ್ಯವನ್ನು ಹೊಂದಿ, ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎನ್ನುವಂತೆ ಶೆ„ಕ್ಷಣಿಕ ಚಟುವಟಿಕೆ ರೂಪಿಸಲಾಯಿತು. ರೋಟರಿ ಗ್ಲೋಬಲ್‌ ಗ್ರ್ಯಾಂಟ್‌ನಿಂದ ಸ್ಕೂಲ್‌ ಬಸ್‌ ಕೊಡುಗೆ ಲಭಿಸಿದೆ.

ಸೌಕರ್ಯಗಳು
ಮಕ್ಕಳಿಗೆ ಪ್ರತೀವರ್ಷ ಉಚಿತ ಪಠ್ಯ ಪುಸ್ತಕ, ನೋಟ್‌ ಪುಸ್ತಕ, ಸಮವಸ್ತ್ರ, ಬೆಲ್ಟ್, ಗುರುತಿನ ಚೀಟಿ ನೀಡಲಾಗುತ್ತಿದೆ. ಪ್ರತೀ ತರಗತಿಗೂ ಸ್ಮಾರ್ಟ್‌ ಕ್ಲಾಸ್‌ ಜೊತೆಯಲ್ಲಿ ಇ-ಲರ್ನಿಂಗ್‌, ಏಜುಸ್ಯಾಟ್‌ ಸೌಲಭ್ಯವಿದೆ. ಶುದ್ಧೀಕರಿಸಿದ ಕುಡಿಯುವ ನೀರು, ಹೈಟೆಕ್‌ ಶೌಚಾಲಯ ವ್ಯವಸ್ಥೆ, ಪ್ರತ್ಯೇಕ ಕಂಪ್ಯೂಟರ್‌ ಲ್ಯಾಬ್‌, ಉತ್ತಮ ಆಟದ ಮೈದಾನದ ವ್ಯವಸ್ಥೆ ಕಲ್ಪಿಸಲಾಗಿದೆ.

ವಂಡ್ಸೆ ಸರಕಾರಿ ಶಾಲೆಯ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವಲ್ಲಿ ವಂಡ್ಸೆ ಗ್ರಾ.ಪಂ. ಹಾಗೂ ಎಸ್‌ಡಿಎಂಸಿ ಬಹಳಷ್ಟು ಮುತುವರ್ಜಿ ವಹಿಸಿ ಶ್ರಮಿಸುತ್ತಿದೆ. ಶೈಕ್ಷಣಿಕ ದೃಷ್ಟಿಯಿಂದ ಶಾಲೆಯ ಕಾರ್ಯಕ್ರಮದಲ್ಲಿ ಶಿಕ್ಷಕರು ಗೌರವ ಶಿಕ್ಷಕರು ಸಿಬಂದಿ ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ವಂಡ್ಸೆ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಗತಿ ಸಾಧಿಸಿದೆ.
-ಚಂದ್ರ ನಾಯ್ಕ, ಮುಖ್ಯ ಶಿಕ್ಷಕರು

ವಂಡ್ಸೆ ಶಾಲೆಯು ಸಕಲ ಸೌಕರ್ಯಗಳೊಡನೆ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗೆ ಪೂರಕವಾದ ವಾತಾವರಣ ಹೊಂದಿದೆ. ಶತಮಾನ ಕಂಡಿರುವ ಈ ಶಾಲೆಯ ಸಾಧನೆ ಜಿಲ್ಲೆಗೆ ಮೈಲುಗಲ್ಲು.
-ದಿವಾಕರ ವಂಡ್ಸೆ, , ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ

- ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next