Advertisement

ಹತ್ತೂರಿನ ಜ್ಞಾನದಾಹ ನೀಗಿಸಿದ ಬಂಗರಸರ ನಾಡಿನ ಬಂಗಾಡಿ ಶಾಲೆ

09:39 AM Nov 23, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1913 ಶಾಲೆ ಆರಂಭ
ಕಾರ್ಕಳ ಜೈನ ಮಠ, ಬಂಗಾಡಿ ಅರಸರಿಂದ ಸ್ಥಳದಾನ

ಬೆಳ್ತಂಗಡಿ: ಪಶ್ಚಿಮ ಘಟ್ಟದ ತಪ್ಪಲಿನವರು ಶಿಕ್ಷಣಕ್ಕಾಗಿ ಬಂಗಾಡಿಯಿಂದ 20 ಕಿ.ಮೀ. ಸಾಗಿ ಬೆಳ್ತಂಗಡಿಗೆ ಆಗಮಿಸಬೇಕಿತ್ತು. ಇದನ್ನರಿತ ಅಂದಿನ ಬಂಗಾಡಿ ಅರಸ ಶ್ರೀಧರ ಬಲ್ಲಾಳರು 1913ರಲ್ಲಿ ತಮ್ಮ ಸ್ಥಳದಲ್ಲಿ ಮುಳಿಹುಲ್ಲಿನ ಜೋಪಡಿ ಯಲ್ಲಿ ಆರಂಭಿಸಿದ್ದರು. ಪ್ರಸಕ್ತ ಈ ಶಾಲೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಕಾರ್ಕಳ ಜೈನ ಮಠ, ಬಂಗಾಡಿ ಅರಸರು ನೀಡಿದ ಮೂರುವರೆ ಎಕ್ರೆ ಪ್ರದೇಶದಲ್ಲಿ ಶಾಲೆ, ಕ್ರೀಡಾಂಗಣ ಹೊಂದಿದೆ. 1- 4ನೇ ತರಗತಿವರೆಗಿದ್ದ ಶಾಲೆಯನ್ನು 1965ರಲ್ಲಿ ಸರಕಾರದ ಸುಪರ್ದಿಗೆ ನೀಡಲಾಯಿತು. 2013ರಲ್ಲಿ ಉನ್ನತೀಕರಿಸಿದ ಶಾಲೆಯಾಗಿ ಬದಲಾಯಿತು. 2012-13ರಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ರಮಾನಂದ ಅವರ ನೇತೃತ್ವ ದಲ್ಲಿ 1 ವರ್ಷ 50 ಕಾರ್ಯಕ್ರಮ ಹಮ್ಮಿಕೊಂಡು ಶತಮಾನೋತ್ಸವ ಆಚರಿಸಿತ್ತು. 1990-91ರಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ವಜ್ರಮಹೋತ್ಸವ ಆಚರಿಸಲಾಗಿದೆ.

ಮುಖ್ಯೋಪಾಧ್ಯಾಯರು
ಆರಂಭದಲ್ಲಿ ಮುಖ್ಯೋಪಾಧ್ಯಾಯರಾಗಿ ಕೆ.ಜಿ. ಶೆಣೈ, ಶ್ರೀವರ್ಮ, ಶಿವರಾಮ್‌, ದೇವಕಿ, ಶಿವಮ್ಮ, ಸುಭಾಷ್‌ ಜಾಧವ್‌ ಸಹಿತ ಪ್ರಸಕ್ತ ಪ್ರಭಾರ ಮುಖ್ಯ ಶಿಕ್ಷಕರಾಗಿ ಅಮಿತಾನಂದ ಹೆಗ್ಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸನತ್‌ ಕುಮಾರ್‌, ಶ್ರೀಪಾಲಿಂದ್ರ, ಇಬ್ರಾಹಿಂ, ಪುರುಷೋತ್ತಮ ಮತ್ತಿತರರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ 10ಮಕ್ಕಳಿದ್ದ ಶಾಲೆ ಬಳಿಕ 1980ರ‌ಲ್ಲಿ 600ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಪ್ರಸಕ್ತ 1-8ರ ವರೆಗೆ 208 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, 9 ಮಂದಿ ಶಿಕ್ಷಕರಿದ್ದಾರೆ.

Advertisement

ಹಳೆ ವಿದ್ಯಾರ್ಥಿಗಳು
ಅರಸು ಶ್ರೀಧರ ಬಳ್ಳಾಲರ ಚಿಕ್ಕಪ್ಪನ ಮಗ (ತಮ್ಮ) ಸಾಹಿತಿ ಬಿ. ರವಿರಾಜ ಬಲ್ಲಾಳ್‌ (97), ಮಾಜಿ ಸಚಿವ ಗಂಗಾಧರ ಗೌಡ, ಖ್ಯಾತ ಸಾಹಿತಿ ಅನಂತರಾಮ ಬಂಗಾಡಿ, ಖ್ಯಾತ ಚರ್ಮರೋಗ ತಜ್ಞ ಲೋಕೇಶ್‌, ಮಂಗಳೂರು ಕೆ.ಪಿ.ಟಿ. ನಿವೃತ್ತ ಪ್ರಾಂಶುಪಾಲ ಜೋಸ್‌, ಧರ್ಮಸ್ಥಳ ಜಮಉಗ್ರಾಣ ಮುತ್ಸದ್ಧಿ ಭುಜಬಲಿ ಬಿ., ಬಂಗಾಡಿ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಲಕ್ಷ್ಮಣ ಗೌಡ, ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ ಗೌಡ, ಬಂಗಾಡಿ ತಾ.ಪಂ. ಅಧ್ಯಕ್ಷ ಮುಕುಂದ ಸುವರ್ಣ, ನಿವೃತ್ತ ಗ್ರಾಮ ಲೆಕ್ಕಿಗ ನಾಬಿರಾಜ್‌ ಇಂದ್ರ, ತಾ.ಪಂ. ಸದಸ್ಯ ಗಣೇಶ್‌ ಕಣಲ್‌, ಅಗರಿಮಾರು ದಾಮೋದರ ಮತ್ತಿತರರು ಈ ಶಾಲೆಯಲ್ಲಿ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ಗುರುತಿಸಿಕೊಂಡಿದ್ದಾರೆ.

ಶಾಲೆಗೆ ಸಂದ ಪುರಸ್ಕಾರಗಳು
2013ರಲ್ಲಿ ಈ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ ಸಂದಿದೆ. ದೈಹಿಕ ಶಿಕ್ಷಣ ಶಿಕ್ಷಕ ಅಬ್ರಾಹಂ ಅವರ ಮಾರ್ಗದರ್ಶನದಲ್ಲಿ ಖೋ ಖೋ ಪಂದ್ಯಾಟದಲ್ಲಿ ತಾಲೂಕು ಮಟ್ಟದಲ್ಲಿ ನಿರಂತರ 10 ವರ್ಷ ಪ್ರಶಸ್ತಿ ಗೆದ್ದಿದೆ. ಶಾಲೆಯಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್‌, ಸ್ಕೌಟ್ಸ್‌-ಗೈಡ್ಸ್‌ ರ್ಯಾಲಿ, ಕರಾಟೆ ಪಂದ್ಯಾಟ, ಪ್ರತಿ¸ಭಾ ಕಾರಂಜಿ ಆಯೋಜಿಸುತ್ತಾ ಬಂದಿದೆ. ಸುಸಜ್ಜಿತ ಆಟದ ಮೈದಾನ, ತರಗತಿ ಕೊಠಡಿಗಳು, ಇಂಟರ್‌ಲಾಕ್‌ ಅಳವಡಿಕೆ, ಸ್ಮಾರ್ಟ್‌ ಕ್ಲಾಸ್‌ ಆರಂಭಗೊಳ್ಳುತ್ತಿದ್ದು, ಕಾರಂಜಿ, ಹೂ ತೋಟ, ಎಂ.ಆರ್‌.ಪಿ.ಎಲ್‌. ನಿಧಿಯಿಂದ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ 106 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು, ಇಲಾಖೆ ಹಾಗೂ ಊರವರ ಸಹಕಾರದಿಂದ ಉತ್ತಮ ಭೌತಿಕ ಸೌಲಭ್ಯ ಕಲ್ಪಿಸುವುದರೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಲಾಗಿದೆ.
ಅಮಿತಾನಂದ ಹೆಗ್ಡೆ, ಮುಖ್ಯೋಪಾಧ್ಯಾಯರು

ನಾನು ಹುಟ್ಟುವ ಮುಂಚೆಯೇ ಅರಸು ಶ್ರೀಧರ ಬಲ್ಲಾಳರು ಸ್ಥಾಪಿಸಿದ್ದ ಬಂಗಾಡಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇನೆ. ಶಾಲೆ ಬಹಳಷ್ಟು ಅಭಿವೃದ್ಧಿ ಕಂಡಿದೆ.  ಅಂದು ಎಳನೀರು ಪ್ರದೇಶದಿಂದಲೂ ಮಕ್ಕಳು ಬರುತ್ತಿದ್ದರು.  ಇಂದು ಈ ಊರಿಗೆ ಇದೇ ಶಾಲೆ ಆಶ್ರಯ.
-ಬಿ. ರವಿರಾಜ ಬಲ್ಲಾಳ (ಬಂಗಾಡಿ ಅರಮನೆ), ಸಾಹಿತಿ, ಹಳೆ ವಿದ್ಯಾರ್ಥಿ

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next