Advertisement

104 ವರ್ಷಗಳ ಇತಿಹಾಸದ ಅನಂತಾಡಿ ಹಿರಿಯ ಪ್ರಾಥಮಿಕ ಶಾಲೆ

06:19 PM Nov 08, 2019 | mahesh |

1915 ಶಾಲೆ ಆರಂಭ
ಮುಳಿ ಹುಲ್ಲಿನ ಛಾವಣಿ ಹೊಂದಿದ್ದ ಶಾಲೆಯಲ್ಲೀಗ ಸಕಲ ಸೌಲಭ್ಯ

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಕಲ್ಲಡ್ಕ: ನಲಿಕಲಿ ವಿಭಾಗದಲ್ಲಿ ರಾಜ್ಯಮಟ್ಟದ ಮಾದರಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿಕೊಂಡಿರುವ ಅನಂತಾಡಿಯ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ 1915ರಲ್ಲಿ ನೆಲೊ¤ಟ್ಟು ಎಂಬಲ್ಲಿ ಆರಂಭವಾಗಿದ್ದು ಇದೀಗ 104ರ ಹರೆಯದಲ್ಲಿದೆ.

ಪ್ರಸ್ತುತ ಶಾಲೆ ಆಧುನಿಕ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಹಳೆ ವಿದ್ಯಾರ್ಥಿ ಸಂಘಟನೆ, ಶಾಲಾಭಿವೃದ್ಧಿ ಸಮಿತಿ ಶಾಲೆಯ ಸಮಗ್ರಅಭಿವೃದ್ಧಿಗೆ ಕಾರಣವಾಗಿದೆ. ಆರಂಭದಲ್ಲಿ 1ರಿಂದ 4ನೇ ತನಕ ತರಗತಿಗಳು ಇದ್ದವು. 1985ರಲ್ಲಿ ಮುಂಭಡ್ತಿ ಪಡೆದು ಹಿ.ಪ್ರಾ. ಶಾಲೆಯಾಯಿತು. ಈಗ 187 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ಶತಮಾನ ಪೂರೈಸಿದ ಶಾಲೆಗಳ ಪೈಕಿ ನಾಲ್ಕನೆಯ ಸ್ಥಾನದಲ್ಲಿದೆ.

ಮುಳಿ ಹುಲ್ಲಿನ ಶಾಲೆ
ರಸ್ತೆ ಸಂಪರ್ಕ ಇಲ್ಲದ ಕಾಲದಲ್ಲಿ ತೆಂಗಿನ ಗರಿ, ಮುಳಿ ಹುಲ್ಲಿನಿಂದ ಶಾಲೆ ನಿರ್ಮಿಸಲಾಗಿತ್ತು. 1979- 80 ಸಾಲಿನಲ್ಲಿ ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಹೆಂಚಿನ ಛಾವಣಿಯನ್ನು ನಿರ್ಮಿಸಲಾಯಿತು. ತೀರಾ ವಿರಳ ಜನಸಂಖ್ಯೆಯ ಕಾಲದಲ್ಲಿ ಅನಂತಾಡಿ – ನೆಟ್ಲಮುಟ್ನೂರು ಗ್ರಾ.ಪಂ. 6 ಮೈಲಿ ವ್ಯಾಪ್ತಿಯಲ್ಲಿ ಯಾವುದೇ ಶಾಲೆ ಇರಲಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರ ಸಾಮೂಹಿಕ ಬೇಡಿಕೆಯಂತೆ ಶಾಲೆಯನ್ನು ಊರ ಪಟೇಲರ ಅನುಮತಿಯಂತೆ ನಿರ್ಮಿಸಲಾಗಿತ್ತು. ಮೊದಲ ಮುಖ್ಯ ಶಿಕ್ಷಕರು ಮಾಂಕು ಗೌಡರು. ಉಳಿದಂತೆ ಆಗ ಸಹಶಿಕ್ಷರು ಇರಲಿಲ್ಲ. 1ರಿಂದ 4ನೇ ತರಗತಿ ತನಕ ಅನುಮತಿ ಇದ್ದುದರಿಂದ ಎಂಟು ವಿದ್ಯಾರ್ಥಿಗಳ ಸೇರ್ಪಡೆ ಆಗಿತ್ತು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು.

Advertisement

ಸಾಧಕ ಹಳೆ ವಿದ್ಯಾರ್ಥಿಗಳು
ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ಭವ್ಯರಾಣಿ ತುಮಕೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣದ ರಾಯಭಾರಿ ಆಗಿದ್ದು, ಬಯಲು ಮುಕ್ತ ಶೌಚಾಲಯದ ಕಾರಣಕರ್ತೆಯಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟರು. ಜೆಎಸ್‌ಡಬು ಸಿಮೆಂಟ್‌ ಕಂಪೆನಿಯ ಮ್ಯಾನೇಜರ್‌ ಜಯರಾಜ್‌ ಬಾಬನಕಟ್ಟೆ, ಯುಕ್ತಿಕಾ ಗಣೇಶ್‌ ಪೂಜಾರಿ ರಾಜ್ಯಮಟ್ಟದ ವೇಟ್‌ ಲಿಫ್ಟ‌ರ್‌ ಮಹಿಳಾ ಸಾಧಕಿ ಈ ಶಾಲೆಯ ಹಳೆ ವಿದ್ಯಾರ್ಥಿಗಳು.

ಸಮಗ್ರ ಪ್ರಗತಿ
ಶಾಲೆ 2.04 ಎಕ್ರೆ ಜಾಗವನ್ನು ಹೊಂದಿದ್ದು, ವಿಶಾಲ ರಂಗಮಂಟಪ, ಆಟದ ಮೈದಾನ, ಹೈಟೆಕ್‌ ಶೌಚಾಲಯ, ನೀರು ಇಂಗಿಸುವ ಘಟಕ, ಕುಡಿಯುವ ನೀರಿನ ಬಾವಿ, ಕೊಳವೆಬಾವಿ, ಬಾಲವನ, ಕೊಠಡಿಯಲ್ಲಿ ವರ್ಲಿ ಚಿತ್ರಕಲೆ, ಗರಿಕೆ ಹುಲ್ಲಿನ ಲಾನ್‌ ಇತ್ಯಾದಿ ಸೌಕರ್ಯಗಳನ್ನು ಹೊಂದಿದೆ. ಬಾಳೆ ತೋಟ, ತರಕಾರಿ, ಫಲಪುಷ್ಪ ತೋಟವನ್ನು ಹೊಂದಿದೆ. ಪ್ರಸ್ತುತ ಅನಂತಾಡಿ ನೆಟ್ಲಮುಟ್ನೂರು ಗ್ರಾಮ ವ್ಯಾಪ್ತಿಯಲ್ಲಿ ಬಂಟ್ರಿಂಜ ಕಿ.ಪ್ರಾ. ಶಾಲೆ, ಹೇಮಾಜೆ ಕಿ.ಪ್ರಾ. ಶಾಲೆ, ನೇರಳಕಟ್ಟೆ ಹಿ.ಪ್ರಾ. ಶಾಲೆಗಳು ಆರಂಭವಾಗಿದೆ.

ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕರು
ಮಾಂಕು ಗೌಡ, ಅಮ್ಮು ಶೆಟ್ಟಿ, ನಾರಾಯಣ ಆಳ್ವ, ರಾಮ್‌ ಭಟ್‌, ದೇರಣ್ಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಶೀಲಾ, ಸರೋಜಿನಿ, ಮುತ್ತಣ್ಣ ರೈ, ಯಶೋದಾ, ಪದ್ಮಾವತಿ, ಶ್ಯಾಮಲಾ, ಅಮ್ಮತಾಯಿ ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಜನಪ್ರತಿನಿಧಿಗಳು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಲವಾರು ಕೊಡುಗೆ ನೀಡಿದ್ದಾರೆ. ಶಾಲೆಯ ಪ್ರಗತಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನೇರಳಕಟ್ಟೆ ಗೋಪಾಲಕೃಷ್ಣ ಮತ್ತು ಪದಾಧಿಕಾರಿಗಳು ನೇತೃತ್ವ ವಹಿಸಿದ್ದಾರೆ.
-ದೊಡ್ಡ ಕೆಂಪಯ್ಯ, ಮುಖ್ಯೋಪಾಧ್ಯಾಯರು

ಶಾಲೆಯ ಅಭಿವೃದ್ಧಿ ಕೆಲಸದಲ್ಲಿ ಹಳೆ ವಿದ್ಯಾರ್ಥಿಗಳು ಕೊಡುಗೆ ನೀಡಲು ಬದ್ಧರಾಗಿದ್ದಾರೆ. ನಮ್ಮ ಊರಿನ ಶಾಲೆ ಎಲ್ಲರ ಶೈಕ್ಷಣಿಕ ಉದ್ದೇಶ ಪೂರೈಸಬೇಕು ಎಂಬುದು ನಮ್ಮ ಆಶಯವಾಗಿದೆ. ಊರಿನ ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸ ಈ ಶಾಲೆಯ ಮೂಲಕ ಆಗುತ್ತಿದೆ.
-ಹಷೇದ್ರ ದೇರಣ್ಣ ಶೆಟ್ಟಿ ಬಾಳಿಕೆ,
ಅಧೀಕ್ಷಕರು, ಕ್ಷೇತ್ರ ಶಿಕ್ಷಣ ಇಲಾಖೆ ಬಂಟ್ವಾಳ, ಹಳೆ ವಿದ್ಯಾರ್ಥಿ.

 ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next