ಮಹಾನಗರ: ಡೆಂಗ್ಯೂ ನಿರ್ಮೂಲನೆ ನಿಟ್ಟಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಲಾರ್ವಾ ನಾಶವೇ ನಮ್ಮ ಉದ್ದೇಶ. ಮನೆ ಸಮೀಪದ ನೀರಿನಲ್ಲಿರುವ ಸೊಳ್ಳೆಯ ಮೊಟ್ಟೆ ಪತ್ತೆ ಹಚ್ಚಿ ನಾಶಪಡಿಸುವ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಇದನ್ನು ನನ್ನ ಮನೆಯಿಂದಲೇ ಆರಂಭಿಸಿದ್ದೇವೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ವತಿಯಿಂದ ನಡೆಯುವ ಡೆಂಗ್ಯೂ ಡ್ರೈವ್ ಡೇ ಅಭಿಯಾನಕ್ಕೆ ಬಲ್ಮಠ ಕಲೆಕ್ಟರ್ಸ್ ಗೇಟ್‌ನಲ್ಲಿರುವ ಜಿಲ್ಲಾಧಿಕಾರಿ ಬಂಗಲೆಯಲ್ಲಿ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಈ ತಿಂಗಳು ಪ್ರತಿ ರವಿವಾರದಂದು ಈ ಅಭಿಯಾನ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಮಳೆಯ ಪ್ರತಿಕೂಲ ಪರಿಣಾಮದಿಂದ ಈ ಬಾರಿ ಸಾಂಕ್ರಾಮಿಕ ರೋಗ ಹೆಚ್ಚಿದೆ. ಸೊಳ್ಳೆ ಉತ್ಪತ್ತಿ ತಾಣಗಳ ನಾಶದ ಮೂಲಕ ಜಿಲ್ಲಾಡಳಿತ ಸಾಕಷ್ಟು ಕ್ರಮ ಕೈಗೊಂಡಿದೆ. ಮುಖ್ಯವಾಗಿ ಡೆಂಗ್ಯೂ ಹರಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಜಿಲ್ಲಾಧಿಕಾರಿ ಬಂಗಲೆ ಸುತ್ತ ಲಾರ್ವಾ ಉತ್ಪತ್ತಿ ಜಾಗಗಳನ್ನು ಪತ್ತೆ ಹಚ್ಚಿ ನಾಶಪಡಿಸಲಾಯಿತು.
ದ.ಕ. ಜಿಲ್ಲಾ ಅರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಗಾಯತ್ರಿ ನಾಯಕ್, ಸಾಮಾಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ಇಂದು ಸಭೆ
ಶಾಲೆ ಮತ್ತಿತರ ಸಂಸ್ಥೆಗಳು, ಲಾರ್ವಾ ಸೃಷ್ಟಿಯಾಗುವ ಹೂತೋಟ, ತಾರಸಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜು.29ರಂದು ನಗರದ ಪುರಭವನದಲ್ಲಿ ಮುಖ್ಯ ಶಿಕ್ಷಕರ ಸಭೆ ಕರೆದಿದ್ದು, ಅಲ್ಲಿ ಮಾಹಿತಿ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.