ರಸ್ತೆಯ ಬದಿ ಮಲಗಿರುವ ಬೀದಿನಾಯಿಯನ್ನು ಕಂಡಾಗ ನಮಗೆ ಏನನಿಸುತ್ತದೆ? “ಛೆ ಎಂಥ ನತದೃಷ್ಟ, ವ್ಯರ್ಥ ಜೀವನ’ ಎಂದು ಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ಕಟ್ಟಿ ಹಾಕಿರುವ ನಾಯಿಯ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಅದಾದರೆ ನಮ್ಮ ಮನೆಯನ್ನು ಕಾಯುತ್ತದೆ. ಅದು ಉಪಯೋಗಿ ಬದುಕು ಎಂಬುದು ನಮ್ಮ ಅಭಿಪ್ರಾಯ.
ಎಲ್ಲವುಗಳಿಂದಲೂ ಏನಾದರೂ ಒಂದು ಉಪಯೋಗ ಇರಬೇಕು ಎಂಬುದು ನಮ್ಮ ದೃಷ್ಟಿಕೋನ, ನಮ್ಮ ಚಿಂತನೆ, ಭಾವನೆ. ನಾವು ಕಲ್ಪಿಸಿಕೊಂಡಿರುವ ಈ “ಉಪಯೋಗ’ ಎನ್ನುವುದು ನಮ್ಮನ್ನು ಕೇಂದ್ರೀಕರಿಸಿದ್ದು. ನಮಗೆ ಉಪಯೋಗವಿದ್ದರೆ ಮಾತ್ರ ಯಾವುದೇ ವಸ್ತು, ಜೀವಿಯ ಅಸ್ತಿತ್ವ ಸಾರ್ಥಕ ಎಂಬ ದೃಷ್ಟಿ. ಹಾಲು ಕರೆಯುತ್ತಿರುವ ತನಕ ಹಸುವನ್ನು ಸಾಕುತ್ತೇವೆ. ಆ ಬಳಿಕ ಮಾರಿ ಬಿಡುತ್ತೇವೆ.
ನಮ್ಮ ಬದುಕಿನ ಬಗೆಗಿನ ದೃಷ್ಟಿಕೋನವೂ ಹೀಗೆಯೇ. ಏನಾದರೂ ಮಾಡಬೇಕು, ಏನನ್ನಾದರೂ ಸಾಧಿಸಬೇಕು ಎಂದು ಕೊಳ್ಳು ತ್ತೇವೆ. ಆ ಬಗ್ಗೆ ಮಹತ್ವಾಕಾಂಕ್ಷೆ, ಆಸೆ, ಕನಸು ಹೊಂದಿರುತ್ತೇವೆ. ಇದು ಒಂದರ್ಥದಲ್ಲಿ ಬಂಡಿಗೆ ಹೂಡಿರುವ ಎತ್ತುಗಳಂತಹ ದೃಷ್ಟಿಕೋನ. ಚಕ್ಕಡಿಗೆ ಹೂಡಿರುವ ಎತ್ತುಗಳು ಕಾಡಿನಲ್ಲಿ ಅಡ್ಡಾಡುತ್ತಿ ರುವ ಜಿಂಕೆಯನ್ನು ನೋಡಿ, “ಪಾಪ ಎಂಥ ನಿರುಪಯೋಗಿ ಬದುಕು’ ಅಂದುಕೊಂಡವಂತೆ. ಆದರೆ ಜಿಂಕೆಯದು ಸ್ವಚ್ಛಂದ ಜೀವನ. ಗಾಡಿಗೆ ಕಟ್ಟಿರುವ ಎತ್ತುಗಳಿಗೆ ಆ ಸ್ವತಂತ್ರ ಜೀವನ ಇಲ್ಲ. ನಮ್ಮ ಬದುಕನ್ನೂ ನಾವು ಯಾವುದೋ ಆಸೆ, ಆಕಾಂಕ್ಷೆ, ಸಾಧನೆ ಇತ್ಯಾದಿ ನೊಗಕ್ಕೆ ಕಟ್ಟಿಕೊಂಡು ಅವಿಶ್ರಾಂತವಾಗಿ ಜೀವನ ಸವೆಸುತ್ತಿರುತ್ತೇವೆ. ನಾವು ಅಂದುಕೊಂಡಿ ರುವ ಒಂದು ಕೈಗೆಟುಕಿದ ಬಳಿಕ ಇನ್ನೊಂದು, ಅದಾದ ಮೇಲೆ ಮತ್ತೂಂದು, ಮಗದೊಂದು – ಇದೊಂದು ಪೂರ್ಣವಿರಾಮವೇ ಇಲ್ಲದ ಪಯಣ. ಈ ಯಾನದಲ್ಲಿ ಸುಖ, ಸಂತೋಷ, ನೆಮ್ಮದಿ, ಬಂಧುತ್ವ, ಕೆಲವೊಮ್ಮೆ ಸಚ್ಚಾರಿತ್ರ್ಯ, ಸತ್ಯಶೀಲತೆಯಂಥ ಸದ್ಗುಣಗಳು – ಎಲ್ಲ ವನ್ನೂ ಕಳೆದುಕೊಂಡಿರುತ್ತೇವೆ.
ನಮ್ಮ ಬದುಕಿಡೀ ಹೀಗಾದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ನಮ್ಮ ಈ ಸತ್ವಹೀನ, ಜೋಲುಮೋರೆಯ ಬದುಕನ್ನು ಸಮಾಜ ಗುರುತಿಸಬಹುದು; ಪ್ರಶಸ್ತಿ ನೀಡಬಹುದು, ಸಮ್ಮಾನಗಳು ಸಿಗಬಹುದು. ಆದರೆ ನಿಮ್ಮ ಸ್ವಂತಕ್ಕೆ ಸಿಗುವುದು ಸತ್ವವಿಲ್ಲದ ಬರಡು ಬದುಕು.
ಜೀವನವನ್ನು ಇನ್ನೊಬ್ಬರ ಕಣ್ಣುಗಳಿಂದ ನೋಡುವುದನ್ನು ನಿಲ್ಲಿಸೋಣ. ಇನ್ನೊ ಬ್ಬರನ್ನು ಮಾದರಿಯಾಗಿ ಸ್ವೀಕರಿಸಿ ಯಾವುದೋ ಒಂದು ಗುರಿಯ ಹಿಂದೆ ನಾವು ಬಿದ್ದಿರುತ್ತೇವೆ. “ಅವನು ಕೊಂಡಿರುವಂಥ ಕಾರು’, “ಇವನು ಕಟ್ಟಿರುವಂತಹ ಮನೆ’, “ಅವನ ಮಗಳಂತೆ ನನ್ನ ಮಗಳೂ’… ಹೀಗೆ. ನಮ್ಮ ಬದುಕಿಡೀ ಹೀಗೆ ಭೂತ ಕಾಲದ ಮತ್ತು ವರ್ತ ಮಾನದ ಮಾದರಿಗಳನ್ನು ಆಧರಿಸಿರುತ್ತದೆ. ಅದನ್ನು ಬಿಟ್ಟುಬಿಡೋಣ. ನಮ್ಮದೇ ವಿವೇಕ, ನಮ್ಮ ಚಿಂತನೆ, ನಮ್ಮ ಅಗತ್ಯಗಳ ಮೂಲಕ ಬದುಕನ್ನು ಕಂಡರೆ ನಮಗೇನು ಬೇಕು ಎಂಬುದರ ಅರಿವಾಗುತ್ತದೆ. ನಿತ್ಯ ಜೀವನದ ಗಡಿಬಿಡಿ ಗೊಂದಲಗಳಿಂದ ಸ್ವಲ್ಪ ಆಚೆ ನಿಂತು ಸ್ವಂತದ ಬದುಕಿನ ಬಗ್ಗೆ ಆಲೋಚಿಸಿದರೆ, ಮನಸ್ಸಿನಲ್ಲಿ ಕಟ್ಟಿಕೊಂಡಿರುವ ಆದರ್ಶಗಳನ್ನು ಬದಿಗೆ ಸರಿಸಿದರೆ ನಮಗೇನು ಬೇಕು ಎಂಬುದು ಮನಸ್ಸಿನ ಕನ್ನಡಿಯಲ್ಲಿ ಪ್ರತಿಫಲಿಸುತ್ತದೆ.
ಪ್ರತೀ ದಿನದಲ್ಲಿ ಹೀಗೆ ನಮ್ಮ ಬಗ್ಗೆ ನಾವು ಆಲೋಚಿಸಲು, ನಮ್ಮ ನಾಳೆಗಳ ಬಗ್ಗೆ ಚಿಂತಿಸಲು ಕೊಂಚ ಹೊತ್ತನ್ನು ನಮಗೆ ನಾವೇ ಕೊಟ್ಟುಕೊಳ್ಳುವುದು ಬಹಳ ಅಗತ್ಯ. ಇಲ್ಲವಾದರೆ ಇಡೀ ಜೀವನ ಮರೀಚಿಕೆಯ ಹಿಂದೆ ಓಡುವ ಜಿಂಕೆಯಂತಾಗುತ್ತದೆ.