ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುದ್ದನಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸ್ಥಳದಲ್ಲಿ ರೈಲ್ವೇ ಕಂಬಿಗಳನ್ನು ಅಳವಡಿಸಲು ಅವಕಾಶವಿಲ್ಲ, ಅದರೂ ನೀವು ನೀಡುವ ದಾಖಲಾತಿಯನ್ವಯ ಸರಕಾರ ಅನುಮತಿ ನೀಡಿದಲ್ಲಿ ರೈಲ್ವೇ ಕಂಬಿಯ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದೆಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್‌ಚಿಕ್ಕನರಗುಂದ ತಿಳಿಸಿದರು.
ಹನಗೋಡು ಹೋಬಳಿಯ ಕಾಡಂಚಿನ ಕಿಕ್ಕೇರಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದು ಮಾತನಾಡಿದರು.
ಮುದ್ದನಹಳ್ಳಿ ಅರಣ್ಯ ವ್ಯಾಪ್ತಿಗೆ ಸೇರಿರುವ ಕಿಕ್ಕೆರಿಕಟ್ಟೆ ಅರಣ್ಯ ಭಾಗದಲ್ಲಿ ಕಾಡಾನೆಗಳು ಹೊರ ಬರದಂತೆ ರೈಲ್ವೇ ಕಂಬಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲು ಅರಣ್ಯ ಕಾಯ್ದೆಯಡಿ ಅವಕಾಶವಿರುವುದಿಲ್ಲ. ಈ ಭಾಗವು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದ್ದು, ಜಾಗ ಒತ್ತುವರಿಯಾಗಿದ್ದು, ಅರಣ್ಯ ಪ್ರದೇಶದೊಳಗೆ ಬೇಲಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಾಗುವಳಿ ಪತ್ರವಿದೆ;
ರೈತರು ನಾವು ಕಳೆದ 60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ. 1949 ಗೆಜೆಟೆಡ್ ನೋಟಿಫಿಕೇಶನ್‌ನಲ್ಲಿ ಕಂದಾಯ ಇಲಾಖೆಯ ತಮ್ಮದೇ ಜಮೀನು ಎಂದು ಘೋಷಿಸಿಕೊಂಡಿದೆ. ಇದರನ್ವಯ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸರ್ಕಾರ ಈಗಾಗಲೇ ಕೆಲವರಿಗೆ ಸಾಗುವಳಿ ಹಕ್ಕುಪತ್ರ ಕೂಡ ನೀಡಿದೆ. ಅಲ್ಲದೆ ಅರಣ್ಯ ಇಲಾಖೆ ವತಿಯಿಂದಲೇ ಕಾಡಾನೆ ದಾಟದಂತೆ ಈ ಹಿಂದೆಯೇ ಆನೆ ಕಂದಕ ನಿರ್ಮಾಣ ಮಾಡಿದ್ದಾರೆ. 1968ರಲ್ಲಿ ಈ ಜಮೀನುಗಳನ್ನು ರೈತರ ಅನುಮತಿ ಇಲ್ಲದೆ ಡಿನೋಟಿಫಿಕೇಶನ್ ಮಾಡಿದ್ದಾರೆ. ಇದರ ಅನುಸಾರ 1972ರ ಅರಣ್ಯ ಕಾಯ್ದೆಯಡಿ ಈ ಜಮೀನು ಅರಣ್ಯ ಇಲಾಖೆಗೆ ಒಳಪಡುತ್ತದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಇದು ನಮ್ಮದೇ ಭೂಮಿಯಾಗಿದ್ದು, ನಾವು ಸಾಗುವಳಿ ಮಾಡುತ್ತಿರುವ ಭೂಮಿ ಬಿಟ್ಟು ಸೋಲಾರ್ ಬೇಲಿ ತೆಗೆದು ರೈಲ್ವೇ ಕಂಬಿ ತಡೆಗೋಡೆ ನಿರ್ಮಿಸಬೇಕೆಂದು ರೈತರು ಮನವಿ ಮಾಡಿದರು.
ಸರಕಾರಕ್ಕೆ ಪ್ರಸ್ತಾವನೆ:
ರೈತರಿಗೆ ಸರಕಾರದಿಂದ ಮಂಜೂರಾಗಿರುವ ಸಾಗುವಳಿ ಪತ್ರ ಸೇರಿದಂತೆ ಸಂಬಂದಿಸಿದ ದಾಖಲಾತಿಗಳನ್ನು ಇಲಾಖೆಗೆ ಸಲ್ಲಿಸಿ, ಮತ್ತೊಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ನೀಡಿದರೆ ರೈಲ್ವೇ ಕಂಬಿ ತಡೆಗೋಡೆ ನಿರ್ಮಾಣ ನಿರ್ಮಿಸಲಾಗುವುದೆಂದು ಭರವಸೆ ನೀಡಿದರು.
ಕಾಡು ಪ್ರವೇಶ ಬೇಡ:
ಈ ಭಾಗದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿದೆ. ಅರಣ್ಯದೊಳಗೆ ಜಾನುವಾರುಗಳನ್ನು ಮೇವಿಗಾಗಿ ಬಿಡಬೇಡಿ. ಅನಗತ್ಯವಾಗಿ ಕಾಡು ಪ್ರವೇಶಿಸಬೇಡಿ. ವನ್ಯ ಜೀವಿಗಳು ಈ ನಾಡಿನ ಆಸ್ತಿ. ಅವುಗಳನ್ನು ಹಾಗೂ ಅರಣ್ಯವನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಸ್ಥಳೀಯರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಡಿಸಿಎಫ್ ಮನವಿ ಮಾಡಿದರು. ಸಭೆಯಲ್ಲಿ ಆರ್.ಎಫ್.ಒ ಸುಬ್ರಮಣ್ಯ, ಡಿಆರ್‌ಎಫ್‌ಒ ಮನೋಹರ್ ಸೇರಿದಂತೆ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಹಾಜರಿದ್ದರು.