Advertisement

“ನಮ್ಮ ನೇತ್ರಾವತಿ, ನಮ್ಮ ಜವಾಬ್ದಾರಿ’ಅಭಿಯಾನ

11:30 PM Jan 19, 2021 | Team Udayavani |

ಉಳ್ಳಾಲ: ಎಪಿಡಿ ಪ್ರತಿಷ್ಠಾನ – ಹಸುರು ದಳದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಮತ್ತು ಉಳ್ಳಾಲ ನಗರಸಭೆ ಸಹಕಾರದೊಂದಿಗೆ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಲು ಮತ್ತು ಜನರು ನೇತ್ರಾವತಿ ನದಿಗೆ ತ್ಯಾಜ್ಯವನ್ನು ಎಸೆಯದಂತೆ ತಡೆಯಲು ನೇತ್ರಾವತಿ ಸೇತುವೆಯಲ್ಲಿ “ನಮ್ಮ ನೇತ್ರಾವತಿ, ನಮ್ಮ ಜವಾಬ್ದಾರಿ’ ಎಂಬ ಅಭಿಯಾನವನ್ನು ಆಯೋಜಿಸಲಾಗಿದೆ.

Advertisement

ಈ ಅಭಿಯಾನವು ಜ.18ರಿಂದ 23ರ ವರೆಗೆ ಬೆಳಗ್ಗೆ 6 ಗಂಟೆಯಿಂದ 9 ಗಂಟೆ ಯವರೆಗೆ ನಡೆಯಲಿದೆ. ವಿವಿಧ ಸಂಸ್ಥೆಗಳ ಹಲವಾರು ಸ್ವಯಂ ಸೇವಕರು ಮುಂಜಾನೆ ಸೇತುವೆಯುದ್ದಕ್ಕೂ ಒಟ್ಟುಗೂಡಿ ತ್ಯಾಜ್ಯವನ್ನು ನದಿಗೆ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. “ಮಾನವ ಸರಪಳಿ’ ರೂಪಿಸುವುದು ಸಹಿತ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಅಭಿಯಾನಕ್ಕೆ ಚಾಲನೆ ನೀಡಿದ ಉಳ್ಳಾಲ ನಗರಸಭೆಯ ಆಯುಕ್ತ ರಾಯಪ್ಪ ಮಾತನಾಡಿ, ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನೇತ್ರಾವತಿ ನದಿಯ ಮಾಲಿನ್ಯವನ್ನು ತಡೆಯುವ ಈ ಪ್ರಯತ್ನ ಪ್ರಶಂಸನೀಯ ಎಂದರು.

ಎಪಿಡಿ ಪ್ರತಿಷ್ಠಾನದ ಸಿಇಒ ಮತ್ತು ಸ್ಥಾಪಕ ಅಬ್ದುಲ್ಲಾ ಎ. ರೆಹಮಾನ್‌ ಮಾತನಾಡಿ, ಮಂಗಳೂರು ನಗರದ ಜೀವನಾಡಿಯಾಗಿರುವ ನೇತ್ರಾವತಿ ನದಿ ಮಾಲಿನ್ಯ ಮುಕ್ತವಾಗಿರಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ. ನದಿಗೆ ಎಸೆದ ತ್ಯಾಜ್ಯ ಅಂತಿಮವಾಗಿ ಸಮುದ್ರವನ್ನು ತಲುಪುತ್ತದೆ. ತ್ಯಾಜ್ಯವನ್ನು ಎಸೆಯುವ ಈ ಅನಾರೋಗ್ಯಕರ ಅಭ್ಯಾಸವನ್ನು ನಿಲ್ಲಿಸಲು ನಾವು ನಾಗರಿಕರಲ್ಲಿ ಕೋರುತ್ತಿದ್ದೇವೆ ಎಂದರು.

ಹಸರು ದಳ ಸಹ ಸಂಸ್ಥಾಪಕಿ ನಳಿನಿ ಶೇಖರ್‌ ಮಾತನಾಡಿ, ಸಮಾಜದ ಉಳಿವಿಗೆ ಜಲ ಸಂಪನ್ಮೂಲಗಳು ಅಮೂಲ್ಯವಾಗಿವೆ. ತ್ಯಾಜ್ಯ ಹೆಚ್ಚಾದಂತೆ ಅದರ ಸೂಕ್ತ ವಿಲೇವಾರಿಗೆ ನಮ್ಮ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಸುಸ್ಥಿರ ಜೀವನವನ್ನು ಅಭ್ಯಸಿಸುವುದು ಅಗತ್ಯ ಎಂದರು.

Advertisement

ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನಾ ಶೆಟ್ಟಿ, ಸ್ವಯಂಸೇವಕರಾದ ಮಹಮ್ಮದ್‌ ಫೌಜನ್‌ ಶೀಕ್‌, ಹಸುರು ದಳದ ನಾಗರಾಜ ರಾಘವ ಅಂಚನ್‌, ಎಪಿಡಿ ಪ್ರತಿಷ್ಠಾನದ ವಾಣಿಶ್ರೀ ಬಿ. ಆರ್‌., ಮನಪಾ ಸದಸ್ಯ ವೀಣಾ ಅಭಿಯಾನವನ್ನು ಸಂಘಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next