Advertisement

ನಮ್ಮ ಮನಸೇ ಒಂದು ಫೇಸ್‌ಬುಕ್‌ ಖಾತೆ!

12:30 AM Apr 23, 2018 | Team Udayavani |

2009ರ ಹೊತ್ತಿಗೆ ಗೂಗಲ್‌ನ ಆರ್ಕುಟ್‌ ಎಂಬ ಸಾಮಾಜಿಕ ಜಾಲತಾಣ ಸರಿಯಾಗಿ ನಿರ್ವಹಣೆಯಿಲ್ಲದೇ ಮರೆಗೆ ಸರಿದ ಮೇಲೆ ಫೇಸ್‌ಬುಕ್‌ ಭಾರಿ ಜನಪ್ರಿಯವಾಗುತ್ತಾ ಬಂತು. ಆಗಷ್ಟೇ ಚಾಲ್ತಿಗೆ ಬಂದಿದ್ದ ಫೇಸ್‌ಬುಕ್‌ನಲ್ಲಿ ಬಳಕೆದಾರರ ಮೇಲೆ ಮನೋವೈಜ್ಞಾನಿಕ ಸಮೀಕ್ಷೆಗಳು ನಡೆಯುತ್ತಿದ್ದವು.

Advertisement

ಪಕ್ಕದ ಮನೆಯವರ ಬಳಿ, ಬಸ್‌ನಲ್ಲಿ ಸಿಗುವ ಅಪರಿಚಿತರ ಬಳಿಯೆಲ್ಲವೂ ನಮ್ಮ ವೈಯಕ್ತಿಕ ವಿಚಾರವನ್ನು ಚರ್ಚೆ ಮಾಡುವ ನಾವು ಮೊನ್ನೆ ಆಧಾರ್‌ನಿಂದಾಗಿ ನಮ್ಮ ಪ್ರೈವಸಿಯೆಲ್ಲ ಹಾಳಾಯ್ತು ಟೆನ್ಸ್ನ್‌ ಮಾಡಿಕೊಂಡಿದ್ದೆವು. ಅದಾಗಿ ಕೆಲವೇ ದಿನಕ್ಕೆ ಅಮೆರಿಕದಲ್ಲಿ ಫೇಸ್‌ಬುಕ್‌ನಲ್ಲಿರುವ ನಮ್ಮ ಡೇಟಾವನ್ನು ಕೇಂಬ್ರಿಜ್‌ ಅನಾಲಿಟಿಕಾ ಎಂಬ ಚುನಾವಣಾ ವಿಶ್ಲೇಷಣೆ ಸಂಸ್ಥೆ ಬಳಸಿಕೊಂಡಿತ್ತು ಎಂದಾಗ ಮತ್ತಷ್ಟು ಚಿಂತೆ ಶುರುವಾಯ್ತು. ನಮ್ಮ ಡೇಟಾ ಎಲ್ಲ ಇನ್ಯಾರಿಗೋ ಸಿಕ್ಕರೆ ಅದನ್ನಿಟ್ಕೊಂಡು ಏನೇನು ಮಾಡಿºಡ್ತಾರೋ ಎಂಬ ಟೆನ್ಸ್ನ್‌ ಇದ್ದರೂ, ಈ ಡೇಟಾವನ್ನೆಲ್ಲ ತೆಗೆದುಕೊಂಡು ಏನು ಮಾಡುತ್ತಾರೆ ಎಂಬುದು ಬಹುತೇಕ ಜನರಿಗೆ ಅರಿವಿಗೆ ಬಂದಿರುವುದಿಲ್ಲ. ಈ ಡಿಜಿಟಲ್‌ ಜಗತ್ತಲ್ಲಿ ಡೇಟಾ ನಮ್ಮ ಮನಸನ್ನು ಬದಲಿಸುತ್ತೆ. ಒಂದು ಪ್ಲಸ್‌ ಒಂದು ಅಂದರೆ ಎರಡು ಎಂಬುದನ್ನು ನಾವು ಮನಸಿನಲ್ಲಿ ಅಚ್ಚೊತ್ತಿಸಿಕೊಂಡಿದ್ದರೆ, ಅದು ಮೂರಾಗುತ್ತದೆ ಎಂದು ನಮ್ಮ ವರ್ತನೆಯ ಡೇಟಾ ಇಟ್ಟುಕೊಂಡು ಡೇಟಾ ಸೈಂಟಿಸ್ಟ್‌ ನಮ್ಮನ್ನು ನಂಬಿಸಬಹುದು. ಸದ್ಯಕ್ಕಂತೂ, ಡೇಟಾ ಎಂಬುದು ನಮ್ಮ ಮನಸು, ಯೋಚನೆ, ಜೇಬು ಎಲ್ಲವನ್ನೂ ಅಳೆಯುತ್ತದೆ. ವರ್ತನೆಯನ್ನೂ ಬದಲಿಸುತ್ತದೆ. ಅಷ್ಟಕ್ಕೂ ಫೇಸ್‌ಬುಕ್‌ ದತ್ತಾಂಶವನ್ನು ಕೇಂಬ್ರಿಜ್‌ ಅನಾಲಿಟಿಕಾ ಹೇಗೆಲ್ಲ ಬಳಸಿಕೊಂಡಿತು ಎಂಬುದೇ ಒಂದು ರೋಚಕ ಕಥೆ.

2009ರ ಹೊತ್ತಿಗೆ ಗೂಗಲ್‌ನ ಆರ್ಕುಟ್‌ ಎಂಬ ಸಾಮಾಜಿಕ ಜಾಲತಾಣ ಸರಿಯಾಗಿ ನಿರ್ವಹಣೆಯಿಲ್ಲದೇ ಮರೆಗೆ ಸರಿದ ಮೇಲೆ ಫೇಸ್‌ಬುಕ್‌ ಭಾರಿ ಜನಪ್ರಿಯವಾಗುತ್ತಾ ಬಂತು. ಆಗಷ್ಟೇ ಚಾಲ್ತಿಗೆ ಬಂದಿದ್ದ ಫೇಸ್‌ಬುಕ್‌ನಲ್ಲಿ ಬಳಕೆದಾರರ ಮೇಲೆ ಮನೋವೈಜ್ಞಾನಿಕ ಸಮೀಕ್ಷೆಗಳು ನಡೆಯುತ್ತಿದ್ದವು. ಫೇಸ್‌ಬುಕ್‌ ಬಳಕೆದಾರರಿಗೆ ಬೇರೆ ಬೇರೆ ರೀತಿಯ ಪ್ರಶ್ನಾವಳಿಗಳನ್ನು ನೀಡಿ ಅದನ್ನು ಆಧರಿಸಿ ಒಂದು ಸಮೂಹದ ಮನೋವೈಜ್ಞಾನಿಕ ವಿಶ್ಲೇಷಣೆ ಮಾಡುವುದು ಆಗಿನ ಹೊಸ ಟ್ರೆಂಡ್‌! ಅದು ಒಂದು ರೀತಿಯಲ್ಲಿ ಚುನಾವಣೆ ವೇಳೆ ಸಮೀಕ್ಷೆ ನಡೆಸಿ, ಈ ಪಕ್ಷ ಇಷ್ಟು ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂದಂತೆ. ಅದೇ ರೀತಿ, 2007ರ ಹೊತ್ತಿಗೆ ಕೇಂಬ್ರಿಜ್‌ ಯೂನಿವರ್ಸಿಟಿಯ ಸೈಕೋಮೆಟ್ರಿಕ್ಸ್‌ ಸೆಂಟರ್‌ನ ಪ್ರೊಫೆಸರ್‌ಗಳಾದ ಮೈಕೆಲ್‌ ಕೋಸಿನ್‌ಸ್ಕಿ ಮತ್ತು ಡೇವಿಡ್‌ ಸ್ಟಿಲ್‌ವೆಲ್‌, ಫೇಸ್‌ಬುಕ್‌ನಲ್ಲಿ ಒಂದು ಕ್ವಿಜ್‌ ಶುರು ಮಾಡಿದ್ದರು.

ಮೈ ಪರ್ಸನಾಲಿಟಿ ಎಂಬ ಆಪ್‌ ಹೆಸರಿನಲ್ಲಿ ನಡೆಸಿದ ಈ ಸಮೀಕ್ಷೆ ವ್ಯಕ್ತಿಯ ಸ್ವಭಾವವನ್ನು ಅಧ್ಯಯನ ಮಾಡುತ್ತಿತ್ತು. ಇದು ಪಕ್ಕಾ ಕಾನೂನು ಸಮ್ಮತ ವಿಧಾನ. ಅಂದರೆ ಆ ಮಾಹಿತಿಯನ್ನು ಅವರು ವ್ಯಕ್ತಿತ್ವ ವಿಶ್ಲೇಷಣೆಗೆ ಬಳಸಿಕೊಳ್ಳಬಹುದು ಎಂದು ಫೇಸ್‌ಬುಕ್‌ ಬಳಕೆದಾರನಿಂದ ಮೊದಲೇ ಅನುಮತಿಯನ್ನು ತೆಗೆದು ಕೊಂಡಿ ರುತ್ತಿದ್ದರು. ಯಾವ ಯಾವ ಪೋಸ್ಟ್‌ಗಳಿಗೆ ಬಳಕೆದಾರ ಲೈಕ್‌ ಒತ್ತಿದ್ದಾನೆ ಎಂಬ ದತ್ತಾಂಶವನ್ನು ಪರಿಗಣಿಸಿ, ಆತ ಉತ್ತರಿಸಿರುವ ಪ್ರಶ್ನೆಗಳನ್ನೂ ಹೋಲಿಕೆ ಮಾಡಿ ಆ ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸುತ್ತಿತ್ತು. ಇವರು 2013ರಲ್ಲಿ ಈ ಅಧ್ಯಯನ ವರದಿಯನ್ನು ಮಂಡಿಸಿದ್ದರು. ಇದರಲ್ಲಿ ಇವರು, ರಾಜಕೀಯ ಸೇರಿದಂತೆ ಹಲವು ವಿಷಯಗಳ ಮೇಲೆ ವ್ಯಕ್ತಿಯ ಸ್ವಭಾವ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿದ್ದರು.

ಈ ಸಮೀಕ್ಷೆ ಆಗಿನ್ನೂ ಫ್ಯಾಷನ್‌ ಭವಿಷ್ಯ ಮುನ್ಸೂಚನೆಯ ವಿಷಯದ ಮೇಲೆ ಪಿಎಚ್‌ಡಿ ಮಾಡುತ್ತಿದ್ದ ಕ್ರಿಸ್ಟೋಫ‌ರ್‌ ವೈಲೀ ಎಂಬಾತನ ಗಮನ ಸೆಳೆಯಿತು. ಆತನಿಗೆ ಮೊದಲಿನಿಂದಲೂ ರಾಜಕೀಯ ಹಾಗೂ ಜನಸಂಖ್ಯೆಯ ದತ್ತಾಂಶವನ್ನು ವಿಶ್ಲೇಷಿಸು ವಲ್ಲಿ ಆಸಕ್ತಿಯಿತ್ತು. ಈ ದತ್ತಾಂಶವನ್ನೇ ರಾಜಕೀಯಕ್ಕೆ ಯಾಕೆ ಬಳಸಬಾರದು ಎಂದು ಯೋಚಿಸಿದ. ಕೆನಡಾದಲ್ಲಿ ಪದೇ ಪದೆ ಯಾಕೆ ಲಿಬರಲ್‌ ಡೆಮಾಕ್ರಾಟ್‌ಗಳು ಸೋಲುತ್ತಿದ್ದಾರೆ ಎಂಬುದಕ್ಕೆ ಕಾರಣವನ್ನು ಕಂಡುಹಿಡಿಯಲು ಈ ದತ್ತಾಂಶವನ್ನು ಬಳಸ ಬಹುದು ಎಂಬುದು ಅವನ ತಲೆಗೆ ಹೊಳೆದ ಐಡಿಯಾ. ವ್ಯಕ್ತಿಯ ರಾಜಕೀಯ ನಿಲುವಿಗೂ ಆತನ ಸ್ವಭಾವಕ್ಕೂ ನೇರ ಸಂಬಂಧವಿದೆ ಎಂಬುದು ಹಿಂದಿನಿಂದಲೂ ಮನಃಶಾಸ್ತ್ರ ಅಧ್ಯಯನಕಾರರಿಗೆ ಆಸಕ್ತಿಕರ ಅಂಶವಾಗಿತ್ತು. ಈ ಅಂಶ ಸಮೀಕ್ಷೆಯಲ್ಲೂ ಚರ್ಚೆ ಯಾಗಿತ್ತು. ಈ ಪ್ರಕ್ರಿಯೆಯಲ್ಲಿ ಮನಃಶಾಸ್ತ್ರ, ರಾಜಕೀಯ ಹಾಗೂ ತಂತ್ರಜ್ಞಾನ ಮೂರೂ ಮೇಳೈಸಿತ್ತು.

Advertisement

ಪಿಎಚ್‌ಡಿ ಮುಗಿಯುತ್ತಿದ್ದಂತೆ ವೈಲೀ ಇಂಗ್ಲೆಂಡ್‌ನ‌ ವರ್ತನಾ ಸಂಶೋಧನೆ ಕಂಪನಿ ಎಸ್‌ಸಿಎಲ್‌ ಗ್ರೂಪ್‌ಗೆ ಸೇರಿಕೊಂಡ. 
ಕೆಲವೇ ದಿನಗಳಲ್ಲಿ ಅಮೆರಿಕ ಸಾರ್ವತ್ರಿಕ ಚುನಾವಣೆಯೂ ನಡೆಯುವು ದರಲ್ಲಿತ್ತು. ಆಗಿನ್ನೂ ಡೊನಾಲ್ಡ್‌ ಟ್ರಂಪ್‌ಗೆ ಕ್ಯಾಂಪೇನ್‌ ಮ್ಯಾನೇ ಜರ್‌ ಆಗಿರದ ಸ್ಟೀವ್‌ ಬನ್ನಾನ್‌ರನ್ನು ವೈಲಿ ಭೇಟಿ ಮಾಡಿದ್ದಾಗ, ತನ್ನ ಹೊಸ ಯೋಚನೆಯನ್ನು ಅವರ ತಲೆಗೆ ಹಾಕಿದ್ದ. ನಂತರ ಕೆಲವೇ ದಿನಗಳಲ್ಲಿ ಟ್ರಂಪ್‌ಗೆ ಕ್ಯಾಂಪೇನ್‌ ಮ್ಯಾನೇಜರ್‌ ಆಗಿ ಬನ್ನಾನ್‌ ನೇಮಕವಾದಾಗ, ಜನರ ಮನಸ್ಥಿತಿ ತಿಳಿಯುವುದಕ್ಕೆಂದು ವೈಲೀ ಮೂಲಕ ಕೇಂಬ್ರಿಜ್‌ ಅನಾಲಿಟಿಕಾವನ್ನು ನಿಯೋಜಿಸಲಾಯಿತು. ಜನರ ಮನಸ್ಥಿತಿ ಅರಿಯುವುದಕ್ಕೆ ಮೈ ಪರ್ಸನಾಲಿಟಿ ಅಪ್ಲಿಕೇಶನ್‌ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೋಸಿನ್‌ಸ್ಕಿ ಬಳಿ ವೈಲೀ ಚೌಕಾಸಿ ನಡೆಸಿದರಾದರೂ, ಅದು ಹಣಕಾಸಿನ ವಿಚಾರದಲ್ಲಿ ಹೊಂದಿಕೆಯಾಗಲಿಲ್ಲ. 

ಈ ವೇಳೆ ಅಲೆಕ್ಸಾಂಡರ್‌ ಕೋಗನ್‌ ಪ್ರತ್ಯೇಕ ಅಪ್ಲಿಕೇಶನ್‌ ಸಿದ್ಧಪಡಿಸುವುದಾಗಿ ಹೇಳಿದ್ದರಿಂದ, ಅವರ ಗ್ಲೋಬಲ್‌ ಸೈನ್ಸ್‌ ರಿಸರ್ಚ್‌ ಸಂಸ್ಥೆಗೆ ಈ ಕೆಲಸ ವಹಿಸಲಾಯಿತು. ಹೀಗಾಗಿ ಕೋಗನ್‌ ದಿಸ್‌ ಈಸ್‌ ಯುವರ್‌ ಡಿಜಿಟಲ್‌ ಲೈಫ್ ಎಂಬ ಅಪ್ಲಿಕೇಶನ್‌ ಸಿದ್ಧಪಡಿಸಿದರು.  ಈ ಅಪ್ಲಿಕೇಶನ್‌ ಏನು ಮಾಡ್ತಿತ್ತು ಅಂತ ನೋಡಿದರೆ ಭಾರಿ ಅಚ್ಚರಿಯಾಗುತ್ತದೆ. ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಇದರಲ್ಲಿರುವ ವ್ಯಕ್ತಿತ್ವ ವಿಕಸನ ಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸಿದರೆ ದುಡ್ಡು ಕೊಡಲಾಗುತ್ತಿತ್ತು. ದುಡ್ಡಿನ ಆಸೆಗೆ 2.70 ಲಕ್ಷ ಫೇಸ್‌ಬುಕ್‌ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡು ಪ್ರಶ್ನೆಗಳಿಗೆಲ್ಲ ಉತ್ತರಿಸಿದರು. ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳುವಾಗ ತಮ್ಮ ಸ್ನೇಹಿತರ ಪ್ರೊಫೈಲ್‌ಗ‌ಳ ಡೇಟಾವನ್ನೂ ಅಪ್ಲಿಕೇಶನ್‌ ಅಕ್ಸೆಸ್‌ ಮಾಡಬಹುದು ಎಂದು ಬಳಕೆದಾರರು ಒಪ್ಪಿಕೊಂಡಿದ್ದರಿಂದ, ಒಟ್ಟು 5 ಕೋಟಿ ಪ್ರೊಫೈಲ್‌ಗ‌ಳ ದತ್ತಾಂಶ ಕೋಗನ್‌ ಸಂಸ್ಥೆಗೆ ಸಿಕ್ಕಿತ್ತು. ಅಷ್ಟೇ ಅಲ್ಲ, ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡವರು ಹಾಗೂ ಅವರ ಸ್ನೇಹಿತರು ಯಾವ್ಯಾವ ಪೋಸ್ಟ್‌ಗಳಿಗೆ ಲೈಕ್‌ ಮಾಡಿದ್ದಾರೆ, ಯಾವ ರೀತಿಯ ಪೋಸ್ಟ್‌ ಮಾಡಿದ್ದಾರೆ ಎಂಬ ಎಲ್ಲ ವಿವರಗಳೂ ದಿಸ್‌ ಈಸ್‌ ಯುವರ್‌ ಡಿಜಿಟಲ್‌ ಲೈಫ್ ಅಪ್ಲಿಕೇಶನ್‌ಗೆ ಸಿಕ್ಕಿತ್ತು. ಈ 5 ಕೋಟಿ ಜನರ ಪ್ರೊಫೈಲ್‌ ಇವರಿಗೆ ಒಂದು ಸ್ಯಾಂಪಲ್‌ ಆಯಿತು. ಇದನ್ನು ಆಧರಿಸಿ ಬಳಕೆದಾರರು ಯಾವ ಮನಸ್ಥಿತಿಯ ವ್ಯಕ್ತಿಗಳು ಯಾವ ಪಕ್ಷದ ಪರವಾಗಿದ್ದಾರೆ ಹಾಗೂ ಯಾವ ಮನಸ್ಥಿತಿಯವರು ವಿರೋಧಿಗಳಾಗಿದ್ದಾರೆ ಎಂದು ವಿಶ್ಲೇಷಿಸಿದರು. ನಿರ್ಲಿಪ್ತವಾಗಿದ್ದವರು ಹಾಗೂ ಯಾವ ಪಕ್ಷಕ್ಕೆ ಮತ ಹಾಕಬೇಕು ಎಂದು ನಿರ್ಧರಿಸಿಲ್ಲದ ಸಮೂಹವನ್ನೇ ಇವರು ಕೇಂದ್ರೀಕರಿಸಿದರು. ಇವರಿಗೆ ಟ್ರಂಪ್‌ ಪರವಾದ ಜಾಹೀರಾತು ಗಳನ್ನೇ ಟೈಮ್‌ಲೈನ್‌ನಲ್ಲಿ ತೋರಿಸುವಂತೆ ಮಾಡಿದರು.

ಹಾಗಾದರೆ ಇಲ್ಲಿ ಅಕ್ರಮವಾದದ್ದು ಏನು ಎಂಬ ಪ್ರಶ್ನೆ ಉದ್ಭವವಾದೀತು. ದತ್ತಾಂಶವನ್ನು ಪಡೆಯುವುದು ಮತ್ತು ಬಳಸುವುದೆಲ್ಲವೂ ಅತ್ಯಂತ ಸೂಕ್ಷ್ಮ ಸಂಗತಿ. ಕೋಗನ್‌ರ ಸಂಸ್ಥೆ ಅಪ್ಲಿಕೇಶನ್‌ ಮೂಲಕ ದತ್ತಾಂಶ ಪಡೆಯಲು ಬಳಕೆದಾರರು ಸಮ್ಮತಿಸಿದ್ದರು ಎಂಬುದು ಸತ್ಯ. ಆದರೆ ಅದರಲ್ಲಿ ಕೋಗನ್‌ ಆ ದತ್ತಾಂಶವನ್ನು ಇತರರಿಗೆ ಮಾರುವುದಕ್ಕೆ ಅವಕಾಶವಿರಲಿಲ್ಲ. ಅಷ್ಟೇ ಅಲ್ಲ, ಫೇಸ್‌ಬುಕ್‌ ಆಗ ಸ್ನೇಹಿತರ ಪ್ರೊಫೈಲ್‌ಗ‌ಳನ್ನೂ ಸ್ಕ್ಯಾನ್‌ ಮಾಡಲು ಕೇವಲ ಶಿಕ್ಷಣ ಉದ್ದೇಶಕ್ಕೆ ಮಾತ್ರ ಅನುಮತಿ ನೀಡುತ್ತಿತ್ತು. ಕೋಗನ್‌ ಅದನ್ನು ಚುನಾವಣೆ ಉದ್ದೇಶಕ್ಕೆ ಬಳಸಲು ಕೇಂಬ್ರಿಜ್‌ ಅನಾಲಿಟಿಕಾಗೆ ಮಾರಿದರು. ಇದು ಅಕ್ರಮ ಎಂಬುದು ಈಗ ನಡೆಯುತ್ತಿರುವ ಚರ್ಚೆ. ಅಷ್ಟಕ್ಕೂ, ಕೇಂಬ್ರಿಜ್‌ ಅನಾಲಿಟಿಕಾ ಚುನಾವಣೆ ವಿಶ್ಲೇಷಣೆಯನ್ನಷ್ಟೇ ಅಲ್ಲ, ವಿಚಿತ್ರ ಕ್ಯಾಂಪೇನ್‌ಗಳನ್ನೂ ಮಾಡುತ್ತಿತ್ತು. ಕೀನ್ಯಾ ಸೇರಿದಂತೆ ಇತರ ದೇಶಗಳಲ್ಲಿ ಅಕ್ರಮ ವಿಧಾನದಲ್ಲೇ ಕ್ಯಾಂಪೇನ್‌ ನಡೆಸಿತ್ತು ಎಂದು ವೈಲಿ ಹೇಳಿಕೊಂಡಿ ದ್ದಾನೆ. ಇದೆಲ್ಲ ರಾಜಕೀಯದ ಮಗ್ಗಲುಗಳಾದರೆ, ತಂತ್ರಜ್ಞಾನವನ್ನು ಇವರು ಅತ್ಯಂತ ವಿಶಿಷ್ಟ ರೀತಿಯಲ್ಲಿ ಬಳಸಿಕೊಂಡಿದ್ದಂತೂ ಸತ್ಯ.

ದತ್ತಾಂಶದ ಮಾರುಕಟ್ಟೆ ಅತ್ಯಂತ ದೊಡ್ಡದು ಹಾಗೂ ವಿಶಾಲವಾದದ್ದು. ಡೇಟಾ ಸೈಂಟಿಸ್ಟ್‌ಗಳಿಗೆ ಸಿಲಿಕಾನ್‌ ವ್ಯಾಲಿಯಲ್ಲಿ ಈಗ ರಾಜ ಮರ್ಯಾದೆಯಿದೆ. ಹಾಗೆಯೇ, ಅವರ ಕೊರತೆಯೂ ಅಷ್ಟೇ ಇದೆ. ಇ-ಕಾಮರ್ಸ್‌ ಕ್ಷೇತ್ರದಲ್ಲಿ ದತ್ತಾಂಶ ಯಥೇಚ್ಚವಾಗಿ ಬಿದ್ದಿದ್ದು, ಅದನ್ನು ಸರಿಯಾಗಿ ವಿಶ್ಲೇಷಣೆ ಮಾಡಿ ಯಾರಿಗೆ ಯಾವ ಪ್ರಾಡಕ್ಟ್ ತೋರಿಸಬೇಕು ಎಂಬುದು ತಿಳಿಯದೇ ಗೊಂದಲದಲ್ಲಿ ದ್ದರೆ, ಪೈನಾನ್ಸ್‌ ಕ್ಷೇತ್ರದಲ್ಲಿ ದತ್ತಾಂಶಕ್ಕೆ ಹಪಾಹಪಿಯಿದೆ. ಫೈನಾನ್ಸ್‌ ಎಕ್ಸೆಕ್ಯೂಟಿವ್‌ಗಳಂತೂ ಕನಸಿನಲ್ಲಿ ಒಂದು ಮೊಬೈಲ್‌ ಸಂಖ್ಯೆ ಬಂದರೂ ಬೆಳಗ್ಗೆ ಎದ್ದು ಅದಕ್ಕೆ ಡಯಲ್‌ ಮಾಡಿ ಸಾಲವನ್ನು ಸುರಿಯುವ ತರಾತುರಿಯಲ್ಲಿದ್ದಾರೆ. ಆದರೆ ಅವರಿಗೆ ಸರಿಯಾದ ದತ್ತಾಂಶ ಸಿಗುತ್ತಿಲ್ಲ. ಇದೇ ರೀತಿ ಪ್ರತಿ ಉದ್ಯಮದಲ್ಲೂ ಡೇಟಾ ಬಳಕೆ, ಸಂಗ್ರಹ ಹಾಗೂ ಅದರ ವಿಶ್ಲೇಷಣೆ ದಿನದಿಂದ ದಿನಕ್ಕೆ ಮಹತ್ವ ಪಡೆಯುತ್ತಿದೆ. ಬೇಡಿಕೆ ಹೆಚ್ಚಿದ್ದಾಗ ಸಹಜವಾಗಿಯೇ ಅದರ ವಹಿವಾಟಿನಲ್ಲಿ ಅಕ್ರಮಗಳೂ ನುಸುಳುತ್ತವೆ.

ಸದ್ಯದ ಮಟ್ಟಿಗಂತೂ ಡೇಟಾ ವಹಿವಾಟಿನಲ್ಲಿ ನಡೆಯುತ್ತಿರು ವುದು ಅರ್ಧಕ್ಕರ್ಧ ಅಕ್ರಮವೇ. ಯಾಕೆಂದರೆ ಯಾವುದೇ ಒಂದು ಅಪ್ಲಿಕೇಶನ್‌ ತನ್ನ ಬಳಕೆದಾರರಿಂದ ದತ್ತಾಂಶ ಸಂಗ್ರಹಿಸಿದರೆ ಅದನ್ನು ಬಳಸುವುದಕ್ಕೆ ಪಡೆದ ಅನುಮತಿಯ ಮಿತಿಯಲ್ಲೇ ಬಳಸಬೇಕು. ಅಂದರೆ ಫೋನ್‌ ನಂಬರ್‌ ಪಡೆದರೆ ಅಕೌಂಟ್‌ ಪರಿಶೀಲನೆಗೆ, ಲಾಗಿನ್‌ಗೆ ಮಾತ್ರವೇ ಬಳಸಬೇಕು. ಈಗಂತೂ ಅವರು ಅದನ್ನು ಇನ್ಯಾರಿಗೋ ನಮಗೆ ಗೊತ್ತಿಲ್ಲದಂತೆಯೇ ಮಾರಿಕೊಳ್ಳುತ್ತಾರೆ. ಯಾವುದೋ ಬ್ಯಾಂಕ್‌ನಿಂದ ಸಾರ್‌ ಪ್ರೀ ಅಪ್ರೂವ್‌x ಲೋನ್‌ ಕೊಡ್ತಾ ಇದ್ದೇವೆ. ಬೇಕಾ? ಅಂತ ಕಾಲ್‌ ಬಂದಾಗ ನಾವು ಅವರ ಮೇಲೆ ರೇಗಿರುತ್ತೇವೆ. ನನ್ನ ನಂಬರ್‌ ನಿಮಗೆ ಕೊಟ್ಟಿದ್ಯಾರ್ರೀ? ನನಗ್ಯಾವ ಸಾಲವೂ ಬೇಡ ಅಂತ ಫೋನು ಕುಕ್ಕುತ್ತೇವೆ. ಕೆಲವೇ ದಿನಗಳ ಹಿಂದೆ ನಾವೇ ಸೈನ್‌ ಇನ್‌ ಅದ ಯಾವುದೋ ಅಪ್ಲಿಕೇಶನ್‌ ಮೂಲಕ ನಮ್ಮ ನಂಬರ್‌ ಅವರ ಕಚೇರಿಗೆ ಹಿಂಬಾಗಿಲಿನ ಮೂಲಕ ಅವರಿಗೆ ಹೋಗಿರುತ್ತದೆ ಎಂಬ ಸುಳಿವೂ ನಮಗೆ ಸಿಕ್ಕಿರುವುದಿಲ್ಲ.

ಫೇಸ್‌ಬುಕ್‌ ಹಾಗೂ ಗೂಗಲ್‌ ಕೋಟ್ಯಂತರ ಜನರ ಮನಸಿನ ಮಾತುಗಳನ್ನೇ ಹೊತ್ತಿರುವ ಡೇಟಾ ಗಣಿ. ಈ ಸಂಸ್ಥೆಗಳಿಗೆ ನಾವು ಈ ಕ್ಷಣಕ್ಕೆ ಏನು ಮಾಡುತ್ತಿದ್ದೇವೆ, ಎಲ್ಲಿದ್ದೇವೆ, ನಮಗೆ ಚಳಿಯಾ ಗುತ್ತಿದೆಯೇ, ಸೆಕೆಯಾಗುತ್ತಿದೆಯೇ ಎಂಬುದರಿಂದ ಹಿಡಿದು, ನಾವು ಎಷ್ಟೆಷ್ಟು ಹೊತ್ತಿಗೆ ನಿದ್ರೆ ಮಾಡುತ್ತಿದ್ದೇವೆ ಎಂಬುದೂ ತಿಳಿಯುತ್ತದೆ. ಆದರೆ ಅವೆಲ್ಲವೂ ಅಲ್ಲೇ ಉಳಿದು ಉಡುಗಬೇಕು. ಅಲ್ಲಿಂದ ಒಂದೇ ಒಂದು ಕಿಲೋಬೈಟ್‌ ದತ್ತಾಂಶ ಹೊರಬಂದರೂ ಇನ್ನೇನೋ ಗಂಡಾಂತರವಾದೀತು.

ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next