Advertisement

ಚಿತ್ರಗಳಲ್ಲಿ ಅನಾವರಣಗೊಂಡ ನಮ್ಮ ಮೆಟ್ರೋ ನೋವು-ನಲಿವು

12:08 PM Aug 22, 2017 | |

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೋಮವಾರ “ನಮ್ಮ ಮೆಟ್ರೋ’ ಸುಂದರ, ವಿರೂಪ ಹಾಗೂ ಕುರೂಪ ಮುಖಗಳ ದರ್ಶನ ಆರಂಭಗೊಂಡಿದ್ದು, ಐದು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ. ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ಗಾಂಭೀರ್ಯ ತಂದಿದೆ.

Advertisement

ಹಲವು ಮಾರ್ಗಗಳ ಟ್ರಾಫಿಕ್‌ ಸಮಸ್ಯೆಯಿಂದ ಮುಕ್ತಿ ನೀಡಿದ್ದು, ನಮ್ಮ ಮೆಟ್ರೋ ಕಾಮಗಾರಿ, ಅಭಿವೃದ್ಧಿಗಾಗಿ ಮನೆ, ಅಂಗಡಿ ಕಳಕೊಂಡವರೆಷ್ಟೋ? ಧರೆಗುರುಳಿದ ಮರಗಳೆಷ್ಟೋ? ಸುಮಾರು 70 ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿ ಎಲ್ಲಂದರಲ್ಲಿ ನುಗ್ಗಿ, ಸುರಂಗದೊಳಗೆ ನುಸುಳಿ ಸಂಚರಿಸುವ ಮೆಟ್ರೋ ಆರಂಭದಿಂದ ಅಂತ್ಯದವರೆಗೆ ಪ್ರತಿಯೊಂದು ಘಟನಾವಳಿಗಳನ್ನು ಹಿರಿಯ ಛಾಯಾಗ್ರಾಹಕ ಕೆ.ವೆಂಕಟೇಶ್‌ ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆ ಹಿಡಿದಿದ್ದಾರೆ.

ಈಗಿನ ಮೆಟ್ರೋ ಸುಗಮ ಸಂಚಾರದ ನಲಿವಿನ ಹಿಂದಿನ ನೋವು, ಸಿಲಿಕಾನ್‌ ಸಿಟಿಯ ದಶಕದ ಮೆಟ್ರೋ ಯೋಜನೆಯ ಶ್ರಮ, ಅಭಿವೃದ್ಧಿ ಎಲ್ಲವನ್ನೂ ಈ ಛಾಯಾಚಿತ್ರಗಳು ಕಣ್ಣ ಮುಂದೆ ಹಾದುಹೋಗುವಂತೆ ಮಾಡುತ್ತಿವೆ. ನಮ್ಮ ಮೆಟ್ರೋ ಮೆಜೆಸ್ಟಿಕ್‌ನಲ್ಲಿ ಕೊನೆ ಮೊದಲಿಲ್ಲದಂತೆ, ಅಡ್ಡಡ್ಡಲಾಗಿ, 42 ಕಿ.ಮೀ ಹಳಿಯನ್ನು ಹೆಣೆದುಕೊಂಡಿದ್ದರೂ, ನೆಲದ ಮೇಲೆ ಅಥವಾ ಸುಸಜ್ಜಿತ ಬೆಳಕಿನ ವ್ಯವಸ್ಥೆ ಇರುವ ಸುರಂಗಗಳೊಳಗೆ ಒಂದು ನಿಲ್ದಾಣದಿಂದ ಮತ್ತೂಂದು ನಿಲ್ದಾಣಕ್ಕೆ ವೇಗವಾಗಿ ಸಾಗುತ್ತಿದೆ.

ಮೆಟ್ರೋ ರೈಲಿನ ಓಡಾಟಕ್ಕೆ ಹಾಕಲಾಗಿರುವ ಹಳಿಗಳನ್ನು ಎತ್ತರ ಪ್ರದೇಶದಿಂದ ತಮ್ಮ ಕ್ಯಾಮೆರಾದಲ್ಲಿ ವೆಂಕಟೇಶ್‌ ಅವರು ಕ್ಲಿಕ್ಕಿಸಿದ್ದು, ಅತ್ಯಂತ ಸೊಗಸಾಗಿದೆ. ಸುರಂಗ ಮಾರ್ಗದ ಛಾಯಾಚಿತ್ರವೂ ಕೂಡ ಆಕರ್ಷಕವಾಗಿದೆ. ಹೀಗೆ ಹಲವು ಛಾಯಾಚಿತ್ರಗಳು ನೋಡುಗರನ್ನು ಸೆಳೆಯುವಲ್ಲಿ ಸಫ‌ಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next