Advertisement

“ಸವಾಲಿನ ಜತೆ ಕರ್ತವ್ಯ ನಿರ್ವಹಣೆ ನಮ್ಮ ಜೀವನ’

12:35 PM Nov 18, 2019 | mahesh |

ಬಂಟ್ವಾಳ: ಅಗ್ನಿಶಾಮಕದಲ್ಲಿ ಉದ್ಯೋಗಕ್ಕೆ ಸೇರಿದ್ದು ಬದುಕಿನ ಬಂಡಿಯನ್ನುದೂಡುವುದಕ್ಕಾಗಿಯೇ ಆದರೂ ಈಗ, ಜೀವನದ ಹಾದಿಯನ್ನು ಹಿಂದಿರುಗಿ ನೋಡಿದಾಗ ಸಾವಿರಾರು ಮಂದಿಯ ಜೀವ ರಕ್ಷಿಸಿದ ತೃಪ್ತಿ ನನಗಿದೆ. ಕುಟುಂಬದ ಸದಸ್ಯರ ಜತೆ ಹೆಚ್ಚು ಸಂಭ್ರಮ, ಕಾಲ ಕಳೆಯುವುದು ತುಸು ಕಷ್ಟವಾದರೂ ಸವಾಲಿನ ಜತೆ ಕರ್ತವ್ಯ ನಿರ್ವಹಿಸಿರುವುದು ಅಗಾಧ ಅನುಭವವನ್ನು ಒದಗಿಸಿ ಬದುಕನ್ನು ಶ್ರೀಮಂತಗೊಳಿಸಿದೆ.

Advertisement

ಇದು ಬಂಟ್ವಾಳ ಅಗ್ನಿಶಾಮಕ ಠಾಣೆಯ ಲೀಡಿಂಗ್‌ ಫ‌ಯರ್‌ ಆಫೀಸರ್‌ ಮೀರ್‌ ಮೊಹಮ್ಮದ್‌ ಗೌಸ್‌ ಅವರ ಮಾತು. ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ಯು ಮಕ್ಕಳ ದಿನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವ ಉದ್ದೇಶದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಭಿನ್ನ ಸಾಧಕರ “ಜೀವನ ಕಥನ’ ಕಾರ್ಯಕ್ರಮದಲ್ಲಿ ಅವರು ತನ್ನ ಅನುಭವಗಳು, ವೃತ್ತಿ ಜೀವನದ ಒಳನೋಟಗಳನ್ನು ಹಂಚಿಕೊಂಡರು.

ಅಗ್ನಿಶಾಮಕ ದಳದವರು ಕೆಟ್ಟ ಸಂದರ್ಭಗಳಲ್ಲೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪ್ರತಿಯೊಂದು ದುರಂತ ನಡೆದಾಗಲೂ ಹಲವು ಸವಾಲುಗಳು ನಮ್ಮ ಮುಂದಿರುತ್ತವೆ. ಅಂತಹ ವೃತ್ತಿಯಲ್ಲಿ ಸುಮಾರು 26 ವರ್ಷಗಳ ಕಾಲ ದುಡಿದಿದ್ದೇನೆ. ಪ್ರತಿ ಘಟನೆಯೂ ಹೊಸ ಅನುಭವಗಳನ್ನು ತಂದುಕೊಟ್ಟಿದೆ. ನಮ್ಮ ವೃತ್ತಿಯಲ್ಲಿ ದಿನದ 24 ತಾಸುಗಳನ್ನು ಮೀಸಲಿ ಡಬೇಕಾಗುತ್ತದೆ, ರಾತ್ರಿ – ಹಗಲು ಎಂದಿಲ್ಲದೆ ಎಷ್ಟು ಹೊತ್ತಿಗೆ ಕರೆ ಬಂದರೂ ಕರ್ತವ್ಯಕ್ಕೆ ತೆರಳಬೇಕಾಗುತ್ತದೆ. ಕಷ್ಟದಲ್ಲಿರುವ ಬೇರೆಯವರಿಗೆ ನಾವು ನೆರವಾಗುವುದೇ ಒಂದು ಬಗೆಯ ಭಿನ್ನ ಸಂತೋಷ ಕೊಡುತ್ತದೆ.

ನಾನು ಅಗ್ನಿಶಾಮಕ ಸೇವೆಗೆ ಸೇರಿ ಮೊದಲ ಕರ್ತವ್ಯ ನಿರ್ವಹಿಸಿದ್ದು 1993ರಲ್ಲಿ, ಮಂಗಳೂರು ಅಗ್ನಿಶಾಮಕ ಠಾಣೆಯಲ್ಲಿ. ಅಂದಿಗೂ ಇಂದಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹಿಂದೆ ಜಿಲ್ಲೆಯ ಯಾವುದೇ ಭಾಗದಲ್ಲೂ ದುರಂತಗಳು ನಡೆ ದಾಗಲೂ ಮಂಗಳೂರಿನಿಂದಲೇ ಬರಬೇಕಿತ್ತು. ಆದರೆ ಈಗ ತಾಲೂಕಿಗೊಂದು ಠಾಣೆ ಇದೆ. ಅಗ್ನಿಶಾಮಕ ಎಂದಷ್ಟೇ ಇದ್ದ ಸೇವೆ, ಈಗ ಅಗ್ನಿ ಶಾಮಕ, ತುರ್ತು ಸೇವೆಗಳು ಎಂದು ಬದಲಾಗಿದೆ.

ದುರಂತಗಳೇ ಜೀವನ ಕಥನ
ನಾನೂ ಸೇರಿದಂತೆ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬನ ಜೀವನ ಕಥನ ದಲ್ಲಿಯೂ ದುರಂತಗಳೇ ಸೇರಿಕೊಂಡಿರುತ್ತವೆ. ನನ್ನ ವೃತ್ತಿ ಬದುಕಿನಲ್ಲಿ ಬಾವಿಗೆ ಬಿದ್ದ 1,500ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ ತೃಪ್ತಿ ಇದೆ. ಸುಮಾರು 150 ಅಡಿ ಅಳಕ್ಕೂ ಇಳಿದ ಉದಾಹರಣೆಗಳಿವೆ. ಆಕ್ಸಿಜನ್‌ ಸಹಾಯ ಇಲ್ಲದೆಯೇ ವಿಷಾನಿಲ ಸೇರಿರುವ ಬಾವಿಗೆ ಇಳಿದು ರಕ್ಷಿಸಿದ ಅನುಭವವೂ ಇದೆ. ನೀರು, ಬೆಂಕಿಯ ಎದುರು ಯಾರ ಆಟವೂ ನಡೆಯುವುದಿಲ್ಲ ಎಂದು ಗೊತ್ತಿದ್ದರೂ ಹೋರಾಡಬೇಕಾಗುತ್ತದೆ.

Advertisement

2010ರಲ್ಲಿ ಕೆಂಜಾರು ವಿಮಾನ ದುರಂತ ನಡೆದ ಸಂದರ್ಭದಲ್ಲಿ ನಾನು ಉಡುಪಿಯಲ್ಲಿದ್ದೆ. ನಾವು ದುರಂತದ ಮಾಹಿತಿ ಲಭಿಸಿದ ತತ್‌ಕ್ಷಣ ಹೊರಟು ಅಲ್ಲಿಗೆ ತಲುಪಿದ್ದೆವು. ಸುಟ್ಟು ಕರಲಾದ ದೇಹಗಳನ್ನು ಹೊರತೆಗೆದ ಕ್ಷಣ ಅತ್ಯಂತ ಘೋರವಾಗಿತ್ತು. ಉಡುಪಿಯ ಪಾಂಗಾಳ ಸೇತುವೆ ಬಳಿ ಗ್ಯಾಸ್‌ ಟ್ಯಾಂಕರ್‌ ದುರಂತ ಮತ್ತೂಂದು ಮರೆಯಲಾಗದ ಅನುಭವ. ನಾನು ಕೆಲಸಕ್ಕೆ ಸೇರಿದ ಪ್ರಾರಂಭದ ದಿನಗಳು. ಮಂಗಳೂರಿನಲ್ಲಿ ಮನೆಯೊಂದಕ್ಕೆ ಬೆಂಕಿ ಹಿಡಿದು ಮಹಿಳೆಯೊಬ್ಬರು ಸುಟ್ಟು ಹೋಗಿದ್ದರು. ವೃತ್ತಿ ಜೀವನದ ಮೊದಲ ಕೆಲಸವೇ ಆ ಮಹಿಳೆಯ ಸುಟ್ಟ ದೇಹವನ್ನು ಹೊರಗೆ ತೆಗೆಯುವುದು. ಸುರತ್ಕಲ್‌ ಬಳಿ ಸಮುದ್ರ ತೀರದಲ್ಲಿ ಹಡಗಿನಲ್ಲಿ ಬೆಂಕಿ ಅವಘಡ ನಡೆದಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ನಾವು ಅಡುಗೆ ಅನಿಲದ ಸಿಲಿಂಡರ್‌ಗಳು ಸಿಡಿಯುತ್ತಿದ್ದರೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದೆವು

ಮೂಲರಪಟ್ಣದಲ್ಲಿ ರಾತ್ರೋರಾತ್ರಿ ಸೇತುವೆ ಮುರಿದಾಗ ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗಿತ್ತು. ಸೂರಿಕುಮೇರಿನಲ್ಲಿ ಟ್ಯಾಂಕರ್‌ ದುರಂತ ನಡೆದು ಅನಿಲ ಸೋರಿಕೆ ಆಗುತ್ತಿತ್ತು. ಪ್ರವಾಹದ ಸಂದರ್ಭದ ಕಾರ್ಯಾಚರಣೆಗಳೂ ವಿಶೇಷ ಅನುಭವ ನೀಡಿದೆ ಎಂದು ಗೌಸ್‌ ಹೇಳಿದರು.

ದುರಂತಗಳು ನಡೆದಾಗ ಅಗ್ನಿಶಾಮಕ ದಳದವರು ಅದರ ಹಿನ್ನೆಲೆ ತಿಳಿದುಕೊಳ್ಳುತ್ತೇವೆ. ಇಲ್ಲದೇ ಇದ್ದರೆ ನಮ್ಮ ಜೀವಕ್ಕೂ ಅದು ಅಪಾಯ ತರುವ ಸಾಧ್ಯತೆ ಇರುತ್ತದೆ. ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಸಂತಿಕುಮಾರಿ ಅವರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ಸತೀಶ್‌ ಮಂಜೇಶ್ವರ ಸ್ವಾಗತಿಸಿದರು. ಕಲ್ಲಡ್ಕ ವರದಿಗಾರ ರಾಜಾ ಬಂಟ್ವಾಳ ಅತಿಥಿಯನ್ನು ಪರಿಚಯಿಸಿದರು. ಬಂಟ್ವಾಳ ವರದಿಗಾರ ಕಿರಣ್‌ ಸರಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಜಾಹೀರಾತು ಪ್ರತಿನಿಧಿ ಶ್ರೀವತ್ಸ ಸುದೆಂಬಳ ಮತ್ತು ವರದಿಗಾರ ರತ್ನದೇವ್‌ ಪುಂಜಾಲಕಟ್ಟೆ, ಕಲ್ಲಡ್ಕ ಶಾಲೆ ಕ್ರಾಫ್ಟ್‌ ಶಿಕ್ಷಕ ಜಿನ್ನಪ್ಪ ಏಳ್ತಿಮಾರ್‌ ಸಹಕರಿಸಿದರು.

ಅಗ್ನಿಶಮನ ಸೇವೆಯ ಒಳಹೊರಗು ತೆರೆದಿರಿಸಿದ ಸಂವಾದ
 ನಿಮಗೆ ಕೆಲಸ ನಿರ್ವಹಿಸುವಾಗ ಭಯ ಆಗುವುದಿಲ್ಲವೇ?
ಪ್ರಾರಂಭದ 2 ವರ್ಷ ಭಯವಾಗಿತ್ತು. ಮೊದಲು ನಾನು ಬಾವಿಗೆ ಇಳಿದದ್ದು ನಾಯಿಯೊಂದನ್ನು ರಕ್ಷಿಸುವುದಕ್ಕಾಗಿ. ಬಾವಿಗೆ ಇಳಿಯುತ್ತಿದ್ದಂತೆ ಅದು ನನ್ನನ್ನು ಅಪ್ಪಿ ಹಿಡಿಯಿತು. 2ನೇ ಬಾರಿ ದನವೊಂದನ್ನು ರಕ್ಷಿಸಲು ಇಳಿದಿದ್ದೆ. ಆ ಬಳಿಕ ಭಯವಾಗಿಲ್ಲ. 2 ಸಾವಿರಕ್ಕೂ ಅಧಿಕ ಬಾರಿ ಬಾವಿಗೆ ಇಳಿದಿದ್ದೇನೆ.

 ಅಗ್ನಿಶಾಮಕ ದಳ ಸೇರಲು ಆಸಕ್ತಿ ಹೇಗೆ ಹುಟ್ಟಿತು?
ಆಸಕ್ತಿಗಿಂತಲೂ ನನಗೆ ಉದ್ಯೋಗದ ಆವಶ್ಯಕತೆ ಇತ್ತು. ನಮ್ಮದು ಬಡ ಕುಟುಂಬವಾದ ಕಾರಣ ಎಸೆಸೆಲ್ಸಿ ಬಳಿಕ ಉದ್ಯೋಗದ ಹುಡುಕಾಟದಲ್ಲಿದ್ದೆ. ಹೊಟೇಲ್‌ನಲ್ಲೂ ಕೆಲಸ ಮಾಡಿದೆ. ಕೊನೆಗೆ ಬಿಸಿಎಂ ಹಾಸ್ಟೆಲ್‌ಗೆ ಕೆಲಸಕ್ಕೆ ಸೇರಿದ ದಿನವೇ ಅಗ್ನಿಶಾಮಕದಿಂದ ಕರೆ ಬಂದಿತ್ತು. ಬಳಿಕ ಅಗ್ನಿಶಾಮಕ ದಳವನ್ನು ಆಯ್ಕೆ ಮಾಡಿಕೊಂಡೆ.

 ಅಗ್ನಿಶಾಮಕಕ್ಕೆ ಸೇರಲು ಹುಡುಗಿಯರಿಗೆ ಯಾಕೆ ಅವಕಾಶವಿಲ್ಲ?
ಪ್ರಸ್ತುತ ಅಂತಹ ಅವಕಾಶಗಳಿಲ್ಲ. ಆದರೆ ಕೇರಳದಲ್ಲಿ ಸೇರಿಸಿ ಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇದೆ. ಮುಖ್ಯವಾಗಿ ನಮ್ಮ ಕರ್ತವ್ಯದ ವೇಳೆ ವಿಕಾರಗಳೇ ಹೆಚ್ಚಿರುತ್ತವೆ. ಭೀಕರ ದುರಂತ ಗಳು ನಡೆದಿರುತ್ತವೆ. ಸ್ತ್ರೀಯರಿಗೆ ಇದನ್ನೆಲ್ಲ ತಡೆದುಕೊಳ್ಳಲು ಸಾಧ್ಯವಾಗದು ಎಂಬ ಕಾರಣ ಇರಲೂಬಹುದು.

 ಅಗ್ನಿಶಾಮಕ ತರಬೇತಿ ಹೇಗಿರುತ್ತದೆ?
ದೈಹಿಕ ತರಬೇತಿ ಮುಖ್ಯವಾಗಿರುತ್ತದೆ. ಜತೆಗೆ ಇತರ ಬೇರೆ ಬೇರೆ ರೀತಿಯ ತರಬೇತಿಗಳನ್ನು ನೀಡುತ್ತಾರೆ.

 ಪ್ರವಾಹದ ಸಂದರ್ಭದಲ್ಲಿ ನಿಮ್ಮ ರಕ್ಷಣಾ ಕಾರ್ಯಗಳು ಹೇಗಿರುತ್ತವೆ?
ನಮ್ಮ ಬೋಟ್‌ಗಳ ಮೂಲಕ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಮಾಡುತ್ತೇವೆ.

 ವಿದ್ಯುತ್‌ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡರೆ ಏನು ಮಾಡಬೇಕು?
ಮೊತ್ತಮೊದಲಿಗೆ ಮೆಸ್ಕಾಂಗೆ ತಿಳಿಸಿ ವಿದ್ಯುತ್‌ ಸರಬರಾಜು ನಿಲ್ಲಿಸಬೇಕು. ಬೆಂಕಿ ಇತರೆಡೆಗೆ ಹಬ್ಬಿದ್ದರೆ ಅಗ್ನಿಶಾಮಕ ದಳಕ್ಕೂ ತಿಳಿಸಬೇಕು.

 ಏಕಕಾಲಕ್ಕೆ ಎರಡು ದುರ್ಘ‌ಟನೆಗಳು ನಡೆದರೆ ಏನು ಮಾಡುತ್ತೀರಿ?
ಸಾಮಾನ್ಯವಾಗಿ ಎಲ್ಲ ಕೇಂದ್ರಗಳಲ್ಲೂ ಎರಡೆರಡು ಅಗ್ನಿಶಮನ ವಾಹನಗಳು ಇರುತ್ತವೆ. ನಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡು ಧಾವಿಸುತ್ತೇವೆ.

 ಉಟ್ಟಿರುವ ಬಟ್ಟೆಗೆ ಬೆಂಕಿ ಬಿದ್ದಾಗ ಏನು ಮಾಡಬೇಕು?
ಪ್ರಮುಖವಾಗಿ ಆ ಸಂದರ್ಭದಲ್ಲಿ ಓಡದೆ, ನಿಂತುಕೊಳ್ಳದೆ ನೀರಿಗೆ ಇಳಿಯಬೇಕು. ನೀರಿಗೆ ಇಳಿಯುವ ಸಂದರ್ಭದಲ್ಲಿ ಪೂರ್ತಿ ಮುಳುಗುವ ರೀತಿಯಲ್ಲಿ ಇಳಿಯಬಾರದು.

 ಎಷ್ಟು ವರ್ಷಗಳ ಕಾಲ ಸರ್ವೀಸ್‌ ಇರುತ್ತದೆ?
ಎಲ್ಲ ಸರಕಾರಿ ಉದ್ಯೋಗಗಳಂತೆ 60 ವರ್ಷಗಳ ಕಾಲ ಸರ್ವೀಸ್‌ ಮಾಡಬೇಕಾಗುತ್ತದೆ.

 ಯಾವ ಕೆಲಸದ ಆಧಾರದಲ್ಲಿ ಪ್ರಮೋಷನ್‌ ಸಿಗುತ್ತದೆ? ವಿವಿಧ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಜತೆಗೆ ಹಿರಿತನದ ಆಧಾರ, ಗುಣನಡತೆ, ಸೇವಾ ಪುಸ್ತಕದ ದಾಖಲಾತಿಗಳ ಆಧಾರದಲ್ಲಿ ಪ್ರಮೋಷನ್‌ ಲಭಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next