ದಾವಣಗೆರೆ: ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರ್ಯಕರ್ತರು, ಜನರು ಕಾರಣರಲ್ಲ. ನಮ್ಮ ನಾಯಕರೇ ಕಾರಣ ಎಂದು ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮವರೇ ನಮ್ಮನ್ನು ಸೋಲಿಸಿದರು. ಎಲ್ಲ ಕಡೆಯಲ್ಲೂ ಬಿಜೆಪಿ ಸೋಲಿಗೆ ಕಾರ್ಯಕರ್ತರು, ಮತದಾರರು ಕಾರಣರಲ್ಲ. ನಮ್ಮವರೇ, ನಮ್ಮ ಕೆಲವರು ನಾಯಕರೇ ಸೋಲಿಗೆ ಕಾರಣ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದ ಮಾಜಿ ಶಾಸಕ ಗುರುಸಿದ್ದನಗೌಡ ಅವರು ನೇರವಾಗಿ ವಿಪಕ್ಷಗಳವರ ಜೊತೆಗೆ ಪ್ರಚಾರ ನಡೆಸಿದ್ದಾರೆ ಎಂಬುದನ್ನು ಲಿಖಿತ ರೂಪದಲ್ಲಿ ಮತ್ತು ದಾಖಲೆ ಸಮೇತ ದೂರು ಸಲ್ಲಿಸಲಾಗಿತ್ತು. ಪಕ್ಷದ ತೀರ್ಮಾನದಂತೆ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:Bengaluru bandh; ಓಲಾ,ಉಬರ್ ಚಾಲಕರ ಪ್ರತಿಭಟನೆ ರಾಜಕೀಯಪ್ರೇರಿತ: ಡಿಸಿಎಂ ಡಿ.ಕೆ.ಶಿವಕುಮಾರ್
ನಮ್ಮ ವಿರೋಧ ಪಕ್ಷದವರೊಂದಿಗೆ ಟಿ. ಗುರುಸಿದ್ದನಗೌಡ ಅವರು ಸುದ್ದಿಗೋಷ್ಠಿ ಮತ್ತು ಪ್ರಚಾರ ನಡೆಸಿದ ಸಾಕಷ್ಟು ದಾಖಲೆ ಇವೆ ಎಂದು ಕೆಲವಾರು ದಾಖಲೆ ಪ್ರದರ್ಶನ ಸಹ ಮಾಡಿದರು. ನಮ್ಮವರೇ ನಮ್ಮನ್ನು ಸೋಲಿಸಿದ್ದರಿಂದ ಎಂಟು ನೂರು ಮತಗಳಲ್ಲಿ ಸೋಲಬೇಕಾಯಿತು. ಇಲ್ಲದಿದ್ದಲ್ಲಿ ನಾನು ಶಾಸಕನಾಗಿರುತ್ತಿದ್ದೆ. ಗುರುಸಿದ್ದನಗೌಡ ಅವರ ವಿರುದ್ಧ ನನಗೆ ಯಾವುದೇ ದ್ವೇಷ ಇಲ್ಲ. ಗುರುಸಿದ್ದನಗೌಡರ ಉಚ್ಚಾಟನೆ ವಿಷಯಕ್ಕೂ ಮತ್ತು ಸಂಸದ ಸಿದ್ದೇಶ್ವರ ಅವರಿಗೆ ಯಾವುದೇ ಸಂಬಂಧವೇ ಇಲ್ಲ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಸೋಲಿಸಲಿಲ್ಲ. ಕೆಲವು ನಾಯಕರೇ ಸೋಲಿಸಿದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.