ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆಯ ಮಿಲ್ಲತ್ ನಗರ ಸಮೀಪ ಕ್ಯಾಥೋಲಿಕ್ ಸಮುದಾಯದ ನೂತನ ‘ಅವರ್ ಲೇಡಿ ಆಫ್ ಲೂಡ್ಸ್’ ಚರ್ಚ್ ಉದ್ಘಾಟನೆ ಗುರುವಾರ ನಡೆಯಿತು.
ಕಾರವಾರ ಬಿಷಪ್ ಮೊಸ್ಟ್ ರೆವರೆಂಡ್ ಡೆರೆಕ್ ಫರ್ನಾಂಡಿಸ್ ಚರ್ಚ್ ಉದ್ಘಾಟಿಸಿ ಮಾತನಾಡಿ, ನಾವು ಪ್ರತಿಯೊಬ್ಬರಲ್ಲೂ ಕ್ರಿಸ್ತರನ್ನು ಕಾಣಬೇಕು. ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದರು.
ಭಗವಂತನ ಪ್ರಾರ್ಥನೆ ಮಾಡಲು ಪ್ರಾರ್ಥನಾ ಮಂದಿರ ಅವಶ್ಯಕತೆಯಿದೆ. ನಮ್ಮ ಮನಸ್ಸಿನ ದುಃಖಗಳನ್ನು ದೇವನ ಮುಂದೆ ಹೇಳಿಕೊಳ್ಳಲು ಪಾಪಗಳನ್ನು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಾರ್ಥನಾ ಮಂದಿರಗಳು ಬೇಕು ಎಂದರು.
ಕೆಲವರು ದೇವರನ್ನು ಗುಡ್ಡಗಳಲ್ಲಿ ಹುಡುಕಿದರು, ಇನ್ನೂ ಕೆಲವರು ಗುಡುಗು-ಮಿಂಚುಗಳಲ್ಲಿ ಹುಡುಕಿದರು. ಹಲವರು ದಟ್ಟ ಕಾಡಿನಲ್ಲಿ ಹುಡುಕಿದರು. ಆದರೆ ಎಲ್ಲೂ ದೇವರು ಸಿಗಲಿಲ್ಲ. ಆದರೆ ಮನೆಯ ಕೋಣೆಯಲ್ಲಿ ಏಕಾಂಗಿಯಾಗಿ ಕುಳಿತು ಕೈಜೋಡಿಸಿ ತಲೆ ತಗ್ಗಿಸಿ ಕುಳಿತರೆ ದಯಾಮಯ ದೇವರು ನಮ್ಮೊಂದಿಗೆ ಮಾತನಾಡುತ್ತಾನೆ ಎಂದರು.
ಕ್ರಿಸ್ತನ ಪವಿತ್ರ ಪೆಟ್ಟಿಗೆ ಹಾಗೂ ಕ್ರಿಸ್ತ ಪ್ರಾಣ ತ್ಯಾಗ ಮಾಡಿದ ಶಿಲುಬೆ ನಮಗೆ ಪವಿತ್ರ. ಶಿಲುಬೆಯ ಮೇಲೆ ತಮ್ಮನ್ನು ಸಮರ್ಪಿಸಿಕೊಂಡ ಸಂದರ್ಭದಲ್ಲಿಯೂ ಏಸು ಕ್ರಿಸ್ತ, ಎಲ್ಲರ ಒಳಿತನ್ನು ಬಯಸಿದಂಥ ಮಹಾನುಭಾವರು ಎಂದು ಅಭಿಪ್ರಾಯಪಟ್ಟರು.
ನಾವೆಲ್ಲರೂ ಪವಿತ್ರಾತ್ಮನ ದೇಗುಲಗಳು. ನಮ್ಮೆಲ್ಲರ ಹೃದಯಗಳಲ್ಲಿ ಪರಮಾತ್ಮ ವಾಸ ಮಾಡುತ್ತಿದ್ದಾರೆಂಬ ನಂಬಿಕೆ ನಮ್ಮಲ್ಲಿರಬೇಕು. ನಾವೆಲ್ಲರೂ ಪವಿತ್ರಾತ್ಮರಾಗಿದ್ದರೆ, ನಮ್ಮದು ಪವಿತ್ರಾತ್ಮಭರಿತ ಸಮುದಾಯವಾಗುತ್ತದೆ ಎಂದರು.
ದೇವರು ನಮ್ಮೆಲ್ಲರಲ್ಲಿಯೂ ಇದ್ದಾರೆ. ಪ್ರಾರ್ಥನೆ ಇದ್ದಲ್ಲಿ ವಾಸ ಮಾಡುವುದಾಗಿ ಏಸುಕ್ರಿಸ್ತರೇ ಹೇಳಿದ್ದಾರೆ. ದೇವರ ಬಗ್ಗೆ ನಂಬಿಕೆ ಇದ್ದರೆ ಮಾತ್ರ ದೇವಾಲಯ ಕಟ್ಟಿದ್ದು ಸಾರ್ಥಕವಾಗುತ್ತದೆ ಎಂದು ನುಡಿದರು.
ಬೆಳಗಾವಿ ಡಯಾಸಿಸ್ ಆಡಳಿತಾಧಿಕಾರಿ ಇಜಿಬಿಯಾ ಫರ್ನಾಂಡಿಸ್, ರೆ.ಫಾ. ಹೆನ್ರಿ ಥಾಮಸ್ ಸೇರಿದಂತೆ ಹಲವರಿದ್ದರು.