Advertisement

ನಮ್ಮ ಇಂದ್ರಾಣಿ ಲಂಡನ್‌ನ ಥೇಮ್ಸ್‌ನಂತೆ ಮತ್ತೆ ಕಂಗೊಳಿಸಬೇಕು !

09:55 AM Mar 07, 2020 | mahesh |

ಲಂಡನ್‌ನ ಥೇಮ್ಸ್‌ ನದಿಗೂ ಉಡುಪಿಯಂಥ ನಗರಗಳಲ್ಲಿ ಕಲುಷಿತಗೊಳ್ಳುತ್ತಿರುವ ಇಂದ್ರಾಣಿಯಂಥ ನೂರಾರು ನದಿಗಳಿಗೂ ಹತ್ತಾರು ಸಾಮ್ಯತೆಗಳಿವೆ. ಒಂದು ನಗರಕ್ಕೆ ನದಿಯೆಂಬುದು ಕಳಶಪ್ರಾಯವಾದುದು. ಆರ್ಥಿಕತೆಯ ಬೆನ್ನೆಲುಬಾಗಿರುವ ನದಿ ಜನಾರೋಗ್ಯದ ಮೂಲವೂ ಹೌದು. ಒಂದು ಸಂದರ್ಭದಲ್ಲಿ ಕಾಲರಾ ಬಂದು ಸಾವಿರಾರು ಮಂದಿ ಸತ್ತದ್ದು ಇದೇ ಥೇಮ್ಸ್‌ ಕಲುಷಿತಗೊಂಡಿದ್ದರಿಂದ. ಕೊಳಚೆ ರಾಡಿಯಾಗಿದ್ದ ಥೇಮ್ಸ್‌ ಈಗ ಮತ್ತೆ ಕಂಗೊಳಿಸುತ್ತಿದೆ. ಅದೇ ಸಾಧ್ಯತೆ ನಮ್ಮ ಇಂದ್ರಾಣಿಯಲ್ಲೂ ಸಾಧ್ಯವಿದೆ. ಅದಕ್ಕೆ ನಗರಸಭೆ, ಜನಪ್ರತಿನಿಧಿಗಳು ಹಾಗೂ ನಾಗರಿಕರು ಒಟ್ಟಾದರೆ ಮಾತ್ರ ಸಾಧ್ಯ. ಅದಾದರೆ ಇಂದ್ರಾಣಿ ಮತ್ತೆ ನಗರದ ಪರ್ಯಾಯ ಆರ್ಥಿಕತೆಯ ವಾಹಕವಾಗಿ ಕೆಲಸ ಮಾಡಬಲ್ಲದು.

Advertisement

ಬನ್ನಂಜೆ: ಲಂಡನ್‌ನ ಥೇಮ್ಸ್‌ ನದಿ ಕುರಿತು ಬೇಕಾದಷ್ಟು ಕಥೆಗಳಿವೆ. ಲಂಡನ್‌ನ ಹೃದಯ ಥೇಮ್ಸ್‌ ನದಿ. ಅದೂ ಸಹ 1957ರಲ್ಲಿ ಬ್ರಿಟನ್‌ನ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಥೇಮ್ಸ್‌ ನದಿ ಜೈವಿಕವಾಗಿ ಸತ್ತಿದೆ ಎಂದು ಘೋಷಿಸಿತು. ಯಾಕೆಂದರೆ, ಅಷ್ಟೊಂದು ಕೊಳಚೆಯ ರಾಡಿಯಾಗಿತ್ತು ನದಿ. ಸುತ್ತಲೂ ಹೋಗಲೂ ಸಾಧ್ಯವೇ ಆಗುತ್ತಿರಲಿಲ್ಲ. ಎಲ್ಲ ಸಾಂಕ್ರಾಮಿಕ ರೋಗಗಳ ಮೂಲ ಎಂಬ ಅಪಖ್ಯಾತಿಗೆ ಥೇಮ್ಸ್‌ ಗುರಿಯಾಗಿತ್ತು. ಇಡೀ ನಗರಕ್ಕೆ ಕಳಶಪ್ರಾಯದಂತಿದ್ದ ನದಿಯದು. ಎಷ್ಟೋ ಪ್ರವಾಸಿಗರು ಲಂಡನ್‌ನ ಥೇಮ್ಸ್‌ ನೋಡಲೆಂದೇ ಬರುತ್ತಿದ್ದವರು. ಅಂಥ ನದಿಯೊಂದು ಸತ್ತಿದ್ದು ತ್ಯಾಜ್ಯ ಹಾಗೂ ನಗರದ ಕೊಳಚೆಯಿಂದಲೇ.

ಬಹು ವರ್ಷಗಳ ಕೈಗಾರಿಕಾ ತ್ಯಾಜ್ಯವೂ ಇದಕ್ಕೆ ಹರಿದು ಹರಿದು ಕೊಳಚೆ ರಾಡಿಯಾಯಿತು. ನೂರು ವರ್ಷಗಳ ಹಿಂದೆ ಕಾಲರಾ ರೋಗ ಬಂದು ಸಾವಿರಾರು ಮಂದಿ ಸತ್ತಾಗ ಕಾರಣ ಹುಡುಕಿದಾಗ ಸಿಕ್ಕಿದ್ದು ಥೇಮ್ಸ್‌ ನದಿಯ ಕೊಳಚೆಯೇ.

ಹೀಗೆ ಥೇಮ್ಸ್‌ನಲ್ಲಿ ವಾಸಿಸುತ್ತಿದ್ದ ಎಲ್ಲ ಬಗೆಯ ಜಲ ಚರಗಳೂ (ವೈವಿಧ್ಯಮಯ ಮೀನುಗಳೂ ಸೇರಿದಂತೆ) ನಾಶವಾದವು. ಬಿಬಿಸಿ ಸುದ್ದಿ ಸಂಸ್ಥೆ ವಿವರಿಸುವಂತೆ ಒಂದು ಸಂದರ್ಭದಲ್ಲಿ ಇದ್ದ 125 ಬಗೆಯ ಮೀನುಗಳು 1960ರ ಸುಮಾರಿನಲ್ಲಿ ಒಂದೂ ಇರಲಿಲ್ಲ. ಆದರೆ ಆ ಬಳಿಕ ಇಡೀ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿತು. ಅದುವರೆಗೆ ಕೈಗಾರಿಕಾ ಹಾಗೂ ನಗರದ ತ್ಯಾಜ್ಯ ವಿಲೇವಾರಿಗಿರುವ ಸಹಜ ವ್ಯವಸ್ಥೆಯೇ ನದಿಗಳೆಂದು ಯೋಚಿಸುತ್ತಿದ್ದ ಆಡಳಿತಗಾರರೂ ಅದನ್ನು ಸ್ವತ್ಛಗೊಳಿಸಲು ಯೋಚಿಸಿದರು.

ಒಳಚರಂಡಿ ವ್ಯವಸ್ಥೆಯನ್ನು ಮೊದಲು ಸುಸಜ್ಜಿತ ಗೊಳಿಸಲಾಯಿತು. ಆ ಬಳಿಕ ಜನರಲ್ಲಿ ಪಾರಿಸರಿಕ ಅರಿವನ್ನು ಹೆಚ್ಚಿಸಿದರು. ನದಿಗೆ ತ್ಯಾಜ್ಯ ವಿಲೇವಾರಿ ಮಾಡದಂತೆ ಜಾಗೃತಿ ಮೂಡಿಸಲಾಯಿತು. ಕಠಿಣ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಯಿತು. ಕೈಗಾರಿಕೆಗಳನ್ನೂ ಕಠಿನ ನಿಯಮಗಳ ಮೂಲಕ ಹದ್ದು ಬಸ್ತಿಗೆ ತರಲಾಯಿತು. ಜನರೂ ಸಹಕರಿಸಿದರು. ಸ್ಥಳೀಯ ಸರಕಾರವೂ ಸಾಕಷ್ಟು ಅನುದಾನಗಳನ್ನು ನೀಡಿ ನದಿಗೆ ಜೀವ ತುಂಬುವ ಕೆಲಸ ಮಾಡಿತು.

Advertisement

ಇಷ್ಟೆಲ್ಲ ನಿರಂತರ ಪ್ರಯತ್ನದ ಪ್ರಯುಕ್ತ ಈಗ ಮತ್ತೆ ಥೇಮ್ಸ್‌ ಉಸಿರಾಡತೊಡಗಿದೆ. 60 ವರ್ಷಗಳ ಹಿಂದಿನ ಕೊಳಚೆಯೆಲ್ಲಾ ಕಳೆದುಕೊಂಡು ಮತ್ತೆ ನಳನಳಿಸತೊಡಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ನೀರು ನಾಯಿಗಳನ್ನು ಸುಮಾರು ಹತ್ತು ವರ್ಷಗಳಲ್ಲಿ ಪತ್ತೆ ಹಚ್ಚಲಾಗಿದೆ. ಮತ್ತೆ ಹಲವಾರು ಮೀನುಗಳು ಕುಣಿದಾಡತೊಡಗಿವೆ.

ಇಲ್ಲಿ ಸರಕಾರ ಮತ್ತು ಸ್ಥಳೀಯ ಆಡಳಿತ ಮಾಡಿದ ಮೊದಲ ಕೆಲಸವೆಂದರೆ, ತ್ಯಾಜ್ಯ ಅದಕ್ಕೆ ಸೇರದಂತೆ ತಡೆದದ್ದು, ಎರಡನೆಯದಾಗಿ ಒಳಚರಂಡಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಿದ್ದು. ಇದರಿಂದ ನದಿಯ ಆರೋಗ್ಯ ಸುಧಾರಿಸಿತು. ಸಹಜವಾಗಿ ನೀರಿನ ಶುದ್ಧೀಕರಣಕ್ಕೆ ಕೈಗೊಂಡ ಉಪಕ್ರಮಗಳು ನೆರವಾದವು. ಕ್ರಮೇಣ ನೀರು ಸಹಜ ಗುಣಮಟ್ಟಕ್ಕೆ ಬಂದ ಮೇಲೆ ಎಲ್ಲ ಜಲಚರಗಳು ಮತ್ತೆ ಆಗಮಿಸತೊಡಗಿವೆ.

ಉಡುಪಿಯ ಥೇಮ್ಸ್‌ ಇಂದ್ರಾಣಿಯೇ?
ಉದ್ದದಲ್ಲಿ ನಿಜಕ್ಕೂ ಉಡುಪಿಯ ಇಂದ್ರಾಣಿ ಥೇಮ್ಸ್‌ನಷ್ಟು ಇಲ್ಲ. ಥೇಮ್ಸ್‌ ಸುಮಾರು 330 ಕಿ.ಮೀ ಉದ್ದವಿತ್ತು. ಇಂದ್ರಾಣಿಯೆಂದರೆ ಸುಮಾರು 25 ಕಿ.ಮೀ. ಲಂಡನ್‌ ನಗರದಲ್ಲೇ ಹರಿದು ಹೋಗುವ ಥೇಮ್ಸ್‌ನಂತೆ ಇಂದ್ರಾಣಿಯೂ ಉಡುಪಿ ನಗರದಲ್ಲೇ ಹರಿದುಹೋಗುತ್ತಿದೆ.

ಥೇಮ್ಸ್‌ ಹೇಗೆ ಜಲಮೂಲವಾಗಿತ್ತೋ ಹಾಗೆಯೇ ಇಂದ್ರಾಣಿಯೂ ಸಾವಿರಾರು ಮಂದಿಗೆ, ಕೃಷಿ ಪ್ರದೇಶಕ್ಕೆ ಜಲಮೂಲವಾಗಿದೆ. ಥೇಮ್ಸ್‌ ಹಾಳಾಗಲೂ ಸಹ ನಗರ ಮತ್ತು ಕೈಗಾರಿಕಾ ತ್ಯಾಜ್ಯ ಕಾರಣವಾಗಿತ್ತು. ಇಂದ್ರಾಣಿ ಹಾಳಾಗಲೂ ಬಹುತೇಕವಾಗಿ ಅಸಮರ್ಪಕ ತ್ಯಾಜ್ಯ ವಿಲೇವಾರಿಯೇ ಕಾರಣವಾಗಿದೆ.

ಥೇಮ್ಸ್‌ನಲ್ಲೂ ನೂರಾರು ರೀತಿಯ ಮೀನುಗಳು ಇದ್ದವು ನೀರು ಶುದ್ಧವಾಗಿದ್ದಾಗ. ಇಂದ್ರಾಣಿಯಲ್ಲೂ 30 ವರ್ಷಗಳ ಹಿಂದೆ ನೂರಾರು ರೀತಿಯ ಮೀನುಗಳಿದ್ದವು. ಜಾತ್ರೆಗಳು ಇದರ ತಟದಲ್ಲೇ ನಡೆಯುತ್ತಿದ್ದವು. ಇಂದು ಎಲ್ಲವೂ ಮಾಯವಾಗಿದೆ.

ಮುನ್ನೂರ ಮೂವತ್ತು ಕಿ.ಮೀ ಉದ್ದದ ಥೇಮ್ಸ್‌ ಶುದ್ಧೀಕರಣಕ್ಕೆ ಕೈಗೊಂಡ ಉಪಕ್ರಮಗಳೆಂದರೆ, ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿಗೆ ಕಠಿಣ ನಿಯಮ, ಜನರಲ್ಲಿ ಜಾಗೃತಿ ಹಾಗೂ ವಿವಿಧ ಯೋಜನೆಗಳ ಮೂಲಕ ನೀರು ಶುದ್ಧೀಕರಣಕ್ಕೆ ಕ್ರಮ.

ಇಂದ್ರಾಣಿಗೆ ಬೇಕಾಗಿರುವುದೂ ಅಷ್ಟೇ. ಅವೆಲ್ಲವೂ ಸಮರ್ಪಕವಾಗಿ ಜಾರಿಗೊಂಡರೆ, ಇಂದ್ರಾಣಿ ಚಿಕ್ಕ ನದಿ. ಹತ್ತು ವರ್ಷಗಳಲ್ಲಿ ಮತ್ತೆ ಇಂದ್ರಾಣಿ ನಗುತ್ತಾಳೆ, ನಮ್ಮ ಬಾವಿಗಳು ನಳನಳಿಸುತ್ತವೆ. ಕೃಷಿ ಪ್ರದೇಶಕ್ಕೆ ಜೀವ ಬರುತ್ತದೆ. ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಉಡುಪಿಯಲ್ಲಿ ಈ ನದಿಯನ್ನು ಅತ್ಯಂತ ದೊಡ್ಡ ಪ್ರವಾಸೋದ್ಯಮ ತಾಣವಾಗಿ ಬಳಸಿಕೊಳ್ಳಲು ಸಾಧ್ಯ. ಅದರಿಂದ ಉಡುಪಿ ನಗರದ ಆರ್ಥಿಕತೆಗೆ ಪರ್ಯಾಯ ಸಾಧ್ಯತೆ ತೋರಿದಂತಾಗುತ್ತದೆ.

ದೂರದ ನದಿ ನೀರು ಸದಾ ಕಾಲ ಹೊಟ್ಟೆ ತುಂಬಿಸದು ನಗರಗಳು ಬೆಳೆಯುತ್ತಿವೆ, ಜನಸಂಖ್ಯೆ ಒತ್ತಡ ಹೆಚ್ಚುತ್ತಿದೆ. ಪ್ರವಾಸೋದ್ಯಮ ತಾಣದಲ್ಲಂತೂ ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ನಗರಗಳು ಹೆಚ್ಚೆಚ್ಚು ನೀರನ್ನು ಬಯಸುತ್ತವೆ. ಅದಕ್ಕೆ ನೂರಾರು ಕಿ.ಮೀ. ದೂರದ ನದಿಯಿಂದ ನೀರು ತಂದು ಪೂರೈಸುವುದು ಶಾಶ್ವತ ಪರಿಹಾರವಲ್ಲ ಎನ್ನುವುದು ಸಾಬೀತಾದ ಸತ್ಯ.

ಯೋಜನೆಯೊಂದು ಜಾರಿಗೊಳ್ಳುವ ಅವಧಿಯಲ್ಲಿ ಯೋಜನೆಗಾರರು ಲೆಕ್ಕ ಹಾಕಿದ್ದಕ್ಕಿಂತ ಇನ್ನೂರರಷ್ಟು ನಗರ ಬೆಳೆದಿರುತ್ತದೆ. ಆಗ ಮೂಲ ಸೌಕರ್ಯಗಳು ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿರುತ್ತದೆ. ಇದಕ್ಕೆ ಬೆಂಗಳೂರು ನಮ್ಮೆದುರು ಇರುವ ಭವ್ಯ ಉದಾಹರಣೆ.
ಭವಿಷ್ಯದಲ್ಲಿ ನದಿಗಳೂ ಸಾಕಷ್ಟು ನೀರು ಕೊಡುವುದಿಲ್ಲ. ಪರ್ಯಾಯ ಜಲಮೂಲಗಳು ಹಾಗೂ ಸಮರ್ಥ ಜಲ ನಿರ್ವಹಣೆ ಕಲಿಯಲೇಬೇಕು. ಈ ಹಂತದಲ್ಲಿ ಇಂದ್ರಾಣಿ ಬದುಕುಳಿದರೆ ಬಹಳ ದೊಡ್ಡ ನೆರವಾಗುತ್ತದೆ. ಉಡುಪಿ ನಗರದ ಕನಿಷ್ಠ ಶೇ. 10 ರಷ್ಟಾದರೂ ನೀರು ಅಗತ್ಯವನ್ನು ಇದು ಪೂರೈಸಬಲ್ಲದು. ಮೀನುಗಾರಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸುತ್ತಲಿನ ಪ್ರದೇಶದವರ ಆರೋಗ್ಯ ಸುಧಾರಣೆಗೆ ಮಾಡುವ ಅನಗತ್ಯ ವೆಚ್ಚವನ್ನು ಸ್ಥಳೀಯ ಆಡಳಿತಕ್ಕೆ ಉಳಿಸುತ್ತದೆ. ಅಷ್ಟೇ ಅಲ್ಲ, ಇದೇ ಸುಂದರ ನದಿ ಮುಂದಿನ ದಿನದಲ್ಲಿ ಪ್ರವಾಸಿ ತಾಣವಾಗಿ ರೂಪುಗೊಂಡು ಸ್ಥಳೀಯ ಆರ್ಥಿಕತೆಗೆ ಬೆನ್ನೆಲುಬಾಗುತ್ತದೆ. ಅದಕ್ಕೇ ಇಂದ್ರಾಣಿಯನ್ನು ಉಳಿಸಿಕೊಳ್ಳಬೇಕಿದೆ.

ನಿಮ್ಮ ಅಭಿಪ್ರಾಯ ಕಳಿಸಿ
ಇಂದ್ರಾಣಿ ನದಿಯ ಸಮಸ್ಯೆ ಕುರಿತು ನಗರಸಭೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಸಲುವಾಗಿ ಉದಯವಾಣಿ ಸುದಿನ ಅಧ್ಯಯನ ತಂಡ ಕೂಲಂಕಷವಾಗಿ ಅಧ್ಯಯನ ಮಾಡಿ ವರದಿ ಪ್ರಕಟಿಸಿದೆ. ಉಡುಪಿ ನಗರದ ನಾಗರಿಕರಾದ ನೀವೂ ಇಂದ್ರಾಣಿ ಶುದ್ಧೀಕರಣದ ಅಗತ್ಯವನ್ನು ನಿಮ್ಮ ಅಭಿಪ್ರಾಯದ ಮೂಲಕ ಮನದಟ್ಟು ಮಾಡಿಕೊಡಬಹುದು. ನಿಮ್ಮ ಅಭಿಪ್ರಾಯವನ್ನು ಚುಟುಕಾಗಿ ಬರೆದು ವಾಟ್ಸಾಪ್‌ಗೆ ಕಳುಹಿಸಿ, ಜತೆಗೆ ನಿಮ್ಮದೊಂದು ಫೋಟೋ ಇರಲಿ. ಯಾವುದೇ ವೈಯಕ್ತಿಕ ಟೀಕೆ ಬೇಡ.
76187 74529

Advertisement

Udayavani is now on Telegram. Click here to join our channel and stay updated with the latest news.

Next