ಪಾಟ್ನಾ: ಬಿಹಾರದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಹಕ್ಕುಗಳನ್ನು ನೀಡಬೇಕಾದರೆ, ಮುಸ್ಲಿಮರು ಕನಿಷ್ಠ 40 ವಿಧಾನಸಭಾ ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜನ್ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿ ಆರ್ ಜೆಡಿಗೆ ಸವಾಲೆಸೆದಿದ್ದಾರೆ.
ರವಿವಾರ (ಸೆ. 1)ಸುದ್ದಿಗಾರರೊಂದಿಗೆ ಮಾತನಾಡಿ ”ಆರ್‌ಜೆಡಿಯವರು ತಾವು ಮುಸ್ಲಿಮರ ಹಿತೈಷಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಜನ್ ಸುರಾಜ್ ಪಕ್ಷ ಚುನಾವಣೆಗೆ ಸ್ಪರ್ಧಿಸಿದರೆ ಮುಸ್ಲಿಂ ಮತಗಳು ವಿಭಜನೆಯಾಗುತ್ತವೆ ಎಂದು ಹೇಳಿದ್ದಾರೆ.ನೀವು ಎಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೀರೋ ಅಲ್ಲಿ ನಾವು ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಅವರ ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಿ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಿ” ಎಂದು ಹೇಳಿಕೆ ನೀಡಿದ್ದಾರೆ.
ಲಾಲು ಪ್ರಸಾದ್ ಅವರ ಪಕ್ಷವು ಮುಸ್ಲಿಮರಲ್ಲಿ ಬಿಜೆಪಿಯ ಭಯವನ್ನು ಹುಟ್ಟುಹಾಕಿದೆ. ಜನ್ ಸುರಜ್ ನಲ್ಲಿ ಮುಸ್ಲಿಮರು ಭರವಸೆ ಕಾಣುತ್ತಿದ್ದಾರೆ ಎಂದರು.
”ಜನ್ ಸುರಾಜ್‌ನಲ್ಲಿ ಎಲ್ಲಾ ವರ್ಗದವರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಲಾಗುವುದು ಮತ್ತು 2025 ರಲ್ಲಿ ಸಾರ್ವಜನಿಕರ ನಿರ್ಧಾರದಿಂದ ಜನ್ ಸುರಾಜ್ ಮುಖ್ಯಮಂತ್ರಿಯನ್ನು ಬಿಹಾರದಲ್ಲಿ ಆಯ್ಕೆ ಮಾಡಲಾಗುವುದು” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷದ ಮೂಲಕ ಜೆಡಿಯು-ಬಿಜೆಪಿ ಮೈತ್ರಿಕೂಟ ಮತ್ತು ಆರ್ ಜೆಡಿ -ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಹೋರಾಟ ನಡೆಸಲು ಪ್ರಶಾಂತ್ ಕಿಶೋರ್ ಮುಂದಾಗಿದ್ದಾರೆ.