“ನಮ್ಮ ಸಂಸ್ಥೆಯಿಂದ ನೂರು ಚಿತ್ರಗಳ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಸಂಸ್ಥೆಯಿಂದ ಇದುವರೆಗೆ ಸದಭಿರುಚಿಯ ಚಿತ್ರಗಳನ್ನೇ ನಿರ್ಮಾಣ ಮಾಡಿಕೊಂಡು ಬಂದಿದ್ದು, ಮುಂದೆಯೂ ಅದು ಮುಂದುವರೆಯಲಿದೆ…’
– ಹೀಗೆ ಹೇಳಿದ್ದು ಪುನೀತ್ ರಾಜಕುಮಾರ್. ಸಂದರ್ಭ; “ಕವಲುದಾರಿ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ.
ಆಡಿಯೋ ಸಿಡಿ ಹೊರಬಂದ ಬಳಿಕ ಪತ್ರಕರ್ತರ ಜೊತೆ ಮಾತುಕತೆಗೆ ಕುಳಿತ ಪುನೀತ್ ರಾಜಕುಮಾರ್ ಹೇಳಿದ್ದಿಷ್ಟು. “ನಮ್ಮ ವಜ್ರೇಶ್ವರಿ ಸಂಸ್ಥೆ ಮತ್ತು ಪಿಆರ್‌ಕೆ ಬ್ಯಾನರ್‌ನಿಂದ ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡುವ ಆಶಯ ಹೊಂದಿದ್ದು, ನಮ್ಮ ನಿರ್ಮಾಣ ಸಂಸ್ಥೆಯಿಂದ ನೂರು ಚಿತ್ರಗಳ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಒಳ್ಳೆಯ ಕಥೆ ಮತ್ತು ಪ್ರತಿಭಾವಂತರ ಚಿತ್ರಗಳು ಸಂಸ್ಥೆ ಮೂಲಕ ಹೊರಬರಲಿವೆ’ ಎಂಬುದು ಪುನೀತ್ ಮಾತು.
ಸದ್ಯಕ್ಕೆ “ಯುವರತ್ನ’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಧಾರವಾಡದ ಕರ್ನಾಟಕ ಯುನಿವರ್ಸಿಟಿಯಲ್ಲಿ ನಡೆಯುತ್ತಿದೆ. ನಾನು ಯುನಿವರ್ಸಿಟಿಯನ್ನು ಅಷ್ಟಾಗಿ ನೋಡಿರಲಿಲ್ಲ. ತುಂಬಾನೇ ಚೆನ್ನಾಗಿದೆ. ಅದರಲ್ಲೂ ಆ ಯುನಿವರ್ಸಿಟಿಯಲ್ಲಿ ನಾಲ್ವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಓದಿದ್ದಾರೆ ಎಂಬುದೇ ವಿಶೇಷ. ಅಲ್ಲಿ ನಮ್ಮ “ಯುವರತ್ನ’ ಚಿತ್ರೀಕರಣಗೊಳ್ಳುತ್ತಿದೆ. ಇನ್ನು, ವರ್ಷಕ್ಕೆ ಮೂರು ಚಿತ್ರ ಮಾಡುವುದಾಗಿ ಹೇಳಿದ್ದೆ. ಈಗ “ನಟಸಾರ್ವಭೌಮ’ ಮೂಲಕ ಈ ವರ್ಷ ಖಾತೆ ಆರಂಭವಾಗಿದೆ. “ಯುವರತ್ನ’ ಕೂಡ ಚಿತ್ರೀಕರಣಗೊಂಡು ಬಿಡುಗಡೆಯಾಗುವ ನಂಬಿಕೆ ಇದೆ. ಮುಂದಿನ ಸಿನಿಮಾ ನೋಡಬೇಕು.
ಈ ವರ್ಷ ನನ್ನಹುಟ್ಟುಹಬ್ಬದಲ್ಲಿ ವಿಶೇಷವೇನೂ ಇರಲ್ಲ. ಇಡೀ ದಿನ ಅಭಿಮಾನಿಗಳ ಜೊತೆ ಇರುತ್ತೇನೆ. ಅಭಿಮಾನಿಗಳಿಗಾಗಿಯೇ ಆ ದಿನವನ್ನು ಮೀಸಲಿಡುತ್ತೇನೆ. ಪಿಆರ್‌ಕೆ ಬ್ಯಾನರ್‌ನಿಂದ ನಿರ್ಮಾಣವಾಗುವ ಚಿತ್ರಗಳಿಗೆ ನಾನು ನಿರ್ಮಾಪಕ ಅಲ್ಲ. ನನ್ನ ಪತ್ನಿ ಅಶ್ವಿನಿ ಅವರು ನಿರ್ಮಾಪಕರು. ನಾನೇನಿದ್ದರೂ ಅರ್ಪಿಸುತ್ತೇನೆ ಅಷ್ಟೇ. ಸದ್ಯಕ್ಕೆ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ದೊಡ್ಡ ಮಗಳು ಎಸ್ಸೆಸ್ಸೆಲ್ಸಿ. ನಾನು ಚಿತ್ರೀಕರಣದಲ್ಲಿ ಬಿಜಿ. ಹಾಗಾಗಿ ಮಕ್ಕಳ ಓದಿನ ಬಗ್ಗೆ ಪತ್ನಿಯೇ ಗಮನಹರಿಸುತ್ತಾರೆ’ ಎಂದು ವಿವರ ಕೊಡುತ್ತಾರೆ ಪುನೀತ್.
ನಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ಮಾಯಾಬಜಾರ್’ ಶೇ.99 ರಷ್ಟು ಮುಗಿದಿದ್ದು, ಇನ್ನೊಂದು ಪರ್ಸೆಂಟ್ ಬಾಕಿ ಇದೆ. ರಘು ಸಮರ್ಥ್ ನಿರ್ದೇಶನದ “ವಿಜಯ ದಶಮಿ’ ಚಿತ್ರದ ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ಅದನ್ನೂ ನಿರ್ಮಾಣ ಮಾಡುತ್ತಿದ್ದೇನೆ. ನಾವು ಕಷ್ಟಪಟ್ಟು ಸಿನಿಮಾಗಳನ್ನು ಮಾಡುತ್ತೇವೆ. ಆದರೆ, ಜನರು ನಮ್ಮ ಕೆಲಸ ಒಪ್ಪಿ, ಚಿತ್ರವನ್ನು ಅಪ್ಪಿಕೊಳ್ಳಬೇಕಷ್ಟೇ. “ಕವಲುದಾರಿ’ ಹೊಸತನದ ಚಿತ್ರ. ಎಲ್ಲಾ ಹಾಡುಗಳು ಚೆನ್ನಾಗಿವೆ. ನೋಡುಗರಿಗೆ ಇಷ್ಟವಾಗುವಂತಹ ಅಂಶಗಳು ಇವೆ’ ಎನ್ನುತ್ತಾರೆ ಪುನೀತ್
ಕವಲುದಾರಿ ವೃತ್ತಿ ಜೀವನದ ಮೈಲಿಗಲು
“ಕವಲುದಾರಿ’ ಆಡಿಯೋ ಬಿಡುಗಡೆ ವೇಳೆ ಅನಂತ್‌ನಾಗ್ ಅವರು ಪುನೀತ್ ಅವರ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಮಾತಿಗೆ ಕಾರಣ, ಸುಮಾರು ನಾಲ್ಕು ದಶಕದ ಹಿಂದೆ “ಭಕ್ತಪ್ರಹ್ಲಾದ’ ಚಿತ್ರದಲ್ಲಿ ನಾರದ ಪಾತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಆಗ ಬೇರೆ ಚಿತ್ರದ ಚಿತ್ರೀಕರಣದಲ್ಲಿದ್ದ ಸಮಯದಲ್ಲಿ ಪಾರ್ವತಮ್ಮ ಅವರೇ ಸೆಟ್‌ಗೆ ಬಂದು ನೀವು ನಾರದ ಪಾತ್ರ ಮಾಡಬೇಕು ಅಂತ ಕೇಳಿಕೊಂಡಿದ್ದರು.
ಆಗ ಅಪ್ಪು ಪುಟ್ಟ ಮಗುವಾಗಿದ್ದರು. ಇಂದು ಅವರನ್ನು ನೋಡಿದರೆ ಖುಷಿಯಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಬೆಳೆದಿದ್ದಾರೆ. ಇನ್ನು, “ಕವಲುದಾರಿ’ ನನ್ನ ವೃತ್ತಿ ಜೀವನದಲ್ಲಿ ಮೈಲಿಗಲ್ಲು. ಕಾರಣ, ಇಲ್ಲಿ ವಿಶಿಷ್ಠ ಕಥೆ ಇದೆ. ಆಗ ಪಾರ್ವತಮ್ಮ ನಿರ್ಮಾಣದ ಹೊಣೆ ಹೊತ್ತಿದ್ದರು. ಈಗ ಅಶ್ವಿನಿ ಅವರು ನಿರ್ಮಾಣದ ಹೊಣೆ ಹೊತ್ತಿರುವುದು ಸಂತಸ ತಂದಿದೆ’ ಎಂಬುದು ಅನಂತ್‌ನಾಗ್ ಹೇಳಿಕೆ.