ಟ್ರಿಣ್ ಟ್ರಿಣ್ ಅಂತ ಮೊಬೈಲ್ ಹೊಡೆದುಕೊಂಡಿತು. ಏನದು ನೋಡೋಣ ಅಂತ ತೆರೆದರೆ, “ವೆಲ್‌ಕಮ್ ಯು ಆಲ್’ ಅಂತ ಮೆಸೇಜ್ ಬಂತು. ಅಷ್ಟರಲ್ಲಿ ಗೊತ್ತಾಗಿದ್ದು ಏನೆಂದರೆ, ನನ್ನನ್ನು ಕೂಡ ಎಳೆದು ಗುಂಪಿಗೆ ಹಾಕಿದ್ದಾರೆ ಅಂತ. ಹೆಸರು ನೋಡಿದೆ. ನಮ್‌ಗೆಳೆಯರು ಅಂತಿತ್ತು.
ನನಗೆ ಅರಿವಿಲ್ಲದೆಯೇ ಸೇರಿದ್ದರಿಂದ ಎಲ್ಲಿದ್ದೇನೆ, ಹೇಗಿದ್ದೇನೆ, ಏಕಿದ್ದೇನೆ ಅನ್ನೋ ಪರಿಜ್ಞಾನ ಬರುವ ಹೊತ್ತಿಗೆ, ವೆಲ್‌ಕಮ್ ಟು ರಾಜ್ ಅಂತೆಲ್ಲಾ ಮೆಸೇಜುಗಳು ಬಂದವು. ಒಂದಷ್ಟು ಜನ, “ಸ್ವಾಮಿ, ಇವರ ಹೆಸರನ್ನು ಸೇರಿಸಿ, ಅವರು ಇಲ್ಲಿದ್ದಾರೆ, ಅಲ್ಲಿ ಓದಿದ್ದಾರೆ’ ಅಂತ ಶಿಫಾರಸ್ ಮಾಡಿದರು. ಹೀಗೆ, ಎಲ್ಲರೂ ಸೆಟ್‌ರೈಟ್ ಆಗುವ ಹೊತ್ತಿಗೆ ಎರಡು ದಿನ ಹಿಡಿಯಿತು. ಆಮೇಲೆ ಮತ್ತದೇ ಗುಡ್‌ಮಾರ್ನಿಂಗ್, ಒಂದಷ್ಟು ಕವನಗಳು, ಸೈಟು ಇಲ್ಲಿ ದೊರೆಯುತ್ತದೆ ಎಂಬಂಥ ಮಾಹಿತಿಗಳಿದ್ದವು.
ಗ್ರೂಪಿನ ಮುಖ್ಯಸ್ಥರು ಶಿವಕುಮಾರ್ ಅಂತ. ಇವರನ್ನು ಯಾವಾಗಲೋ ನೋಡಿದ ನೆನಪು. ಸೇರಿಸಿದ್ದಾರಲ್ಲ ಅನ್ನೋ ಸಂಕೋಚಕ್ಕೆ ಮಣಿದು ಎಲ್ಲರೂ ಸುಮ್ಮನಿದ್ದರು ಅನಿಸುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಗ್ರೂಪಿನಲ್ಲಿ ಹೊಗೆ ಆಡಲು ಶುರುವಾಯಿತು.
“ನನಗೆ ಸೈಟು ಕೊಡಿಸ್ತೀನಿ ಅಂತ ಹಣ ಪಡೆದು ನಾಮ ಹಾಕಿದ್ದಾರೆ. ಗ್ರೂಪಿನ ಸದಸ್ಯರಲ್ಲಿ ಯಾರಾದರೂ ಕಾಪಾಡಿ’ ಅಂತ ಒಂದು ಮೆಸೇಜ್ ಬಂತು. ಅದಕ್ಕೇನಂತೆ, ಯಾರದು ಹೇಳಿ, ವಿಳಾಸ ಕೊಡಿ. ಗತಿ ಕಾಣಿಸೋಣ ಅಂತ ಅಡ್ಮಿನ್ ಶಿವಕುಮಾರ್ ಮುಂದೆ ಬಂದರು. ಇದೇ ದನಿಯಲ್ಲಿ, ನಿಮ್ಮ ಸಹಾಯಕ್ಕೆ ನಾವು ಇದ್ದೇವೆ ಅಂತ ಇದ್ದಬದ್ದ ಗ್ರೂಪಿನ ಸದಸ್ಯರು ಕೂತ ಜಾಗದಿಂದಲೇ ಆತ್ಮಸ್ಥೈರ್ಯ ತುಂಬಿದರು. ನಾಮ ಹಾಕಿಸಿಕೊಂಡ ವ್ಯಕ್ತಿ ಎಲ್ಲರಿಂದ ಸ್ಪೂರ್ತಿ ಪಡೆದವರೇ. ಆತನ ನಂಬರ್ ಅನ್ನು ಗ್ರೂಪಿಗೆ ಹಾಕಿದರು. ನೋಡಿದರೆ, ಅವನ ಹೆಸರೂ ಶಿವಕುಮಾರ್. ಗ್ರೂಪ್ ಅಡ್ಮಿನ್‌ಗೆ ಕಸಿವಿಸಿಯಾಯಿತು. ಹಿಡ್ಕೊಂಡು ನಾಲ್ಕು ಬಾರಿಸಿ ಅ ನನ್ನ ಮಗನಿಗೆ ಅಂತ ಬೈದರು. ಕೆಲವರು ಅಡ್ಮಿನ್ನರದ್ದು, ಅವನದು ಒಂದೇ ಹೆಸರು ಅಂತ ಹಿಂಜರಿದರು. ಕೊನೆಗೆ, ಒಂದು ಮೆಸೇಜ್ ಬಂತು. ಆ ಶಿವಕುಮಾರ್ ಮತ್ಯಾರೂ ಅಲ್ಲ ನಮ್ಮ ಗ್ರೂಪ್‌ನ ಅಡ್ಮಿನ್ ಅಂತ… ಎಲ್ಲರೂ ಒಮ್ಮೆಗೇ ಶಾಕ್. ಮೆಸೇಜ್ ಬಂದ ಮರುಕ್ಷಣದಲ್ಲಿ ಅಡ್ಮಿನ್ ನಾಪತ್ತೆ, ಗುಂಪಿಂದ ಓಡಿ ಹೋಗಿದ್ದಾರೆ. ನೋಡಿದರೆ, ದುಡ್ಡು ಕೊಟ್ಟು ನಾಮ ಹಾಕಿಸಿಕೊಂಡ ವ್ಯಕ್ತಿಯೇ ಅಡ್ಮಿನ್ ಜಾಗದಲ್ಲಿ ಇದ್ದಾರೆ.
ಈ ಫಜೀತಿಯಿಂದ ಗ್ರೂಪ್ ಮತ್ತೆ ಎದ್ದೇಳಲೇ ಇಲ್ಲ..
ಕೆ.ಜಿ