ಚೆನ್ನೈ: ಈ ಸಲದ ಐಪಿಎಲ್‌ನಲ್ಲಿ ಅತಿಯಾದ ಸಂಕಷ್ಟಕ್ಕೆ ಸಿಲುಕಿದ ತಂಡವೆಂದರೆ ಚೆನ್ನೈ ಸೂಪರ್ ಕಿಂಗ್ಸ್. ಈ ತಂಡದ 13 ಸದಸ್ಯರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ಬೆನ್ನಲ್ಲೇ ಪ್ರಮುಖ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಹಿಂದೆ ಸರಿದರು. ಈಗ ಇವರಿಗೆ ಬದಲಿ ಆಟಗಾರರ್ಯಾರು ಎಂಬುದು ಸಿಎಸ್‌ಕೆ ಪಾಲಿಗೊಂದು ದೊಡ್ಡ ಪ್ರಶ್ನೆಯಾಗಿದೆ. ಫ್ರಾಂಚೈಸಿ ಮೂಲವೊಂದರ ಪ್ರಕಾರ ಟಿ20 ಕ್ರಿಕೆಟಿನ ನೂತನ ನಂ.1 ಬ್ಯಾಟ್ಸ್‌ಮನ್, ಇಂಗ್ಲೆಂಡಿನ ಡೇವಿಡ್ ಮಾಲನ್ ಅವರನ್ನು ಸೇರಿಸಿಕೊಳ್ಳುವ ಯೋಜನೆಯಿತ್ತು. ಆದರೆ ಐಪಿಎಲ್ ನಿಯದಂತೆ ಇದು ಸಾಧ್ಯವಾಗುತ್ತಿಲ್ಲ.
ನಿಯಮ ಅಡ್ಡಿ
ತಂಡವೊಂದರಲ್ಲಿ ಕೇವಲ 8 ಮಂದಿ ವಿದೇಶಿ ಕ್ರಿಕೆಟಿಗರು ಹಾಗೂ 17 ಮಂದಿ ಭಾರತದ ಆಟಗಾರರು ಇರಬೇಕೆಂಬುದು ನಿಯಮ. ಚೆನ್ನೈ ತಂಡ ಈಗಾಗಲೇ 8 ವಿದೇಶಿ ಆಟಗಾರರಿಂದ ಭರ್ತಿಯಾಗಿದೆ. ಇವರೆಂದರೆ ಶೇನ್ ವಾಟ್ಸನ್, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ಜೋಶ್ ಹ್ಯಾಝಲ್‌ವುಡ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೊ, ಫಾ ಡು ಪ್ಲೆಸಿಸ್ ಮತ್ತು ಸ್ಯಾಮ್ ಕರನ್. ಹೀಗಾಗಿ ರೈನಾ ಮತ್ತು ಹರ್ಭಜನ್ ಸ್ಥಾನಕ್ಕೆ ಭಾರತೀಯ ಆಟಗಾರರನ್ನೇ ಸೇರಿಸಿಕೊಳ್ಳಬೇಕಾದುದು ಚೆನ್ನೈ ಪಾಲಿಗೆ ಅನಿವಾರ್ಯ.
ಚೆನ್ನೈ ತಂಡದ ಪಾಲಿನ ಸಿಹಿ ಸುದ್ದಿಯೆಂದರೆ, ದೀಪಕ್ ಚಹರ್ ಕೊರೊನಾದಿಂದ ಗುಣಮುಖರಾಗಿ ಶುಕ್ರವಾರ ಅಭ್ಯಾಸಕ್ಕೆ ಇಳಿದದ್ದು. ಆದರೆ ಋತುರಾಜ್ ಗಾಯಕ್ವಾಡ್ ಇನ್ನೂ ಚೇತರಿಸಿಕೊಂಡಿಲ್ಲ.