“ನಮ್ಮ ಮನೆಯಲ್ಲಿ ಅಪ್ಪಾಜಿ, ಅಮ್ಮ, ಶಿವಣ್ಣ, ನಾನು… ಎಲ್ಲರಿಗೂ ಪ್ರಶಸ್ತಿ ಬಂದಿದೆ. ಆದ್ರೆ ರಾಘಣ್ಣ ಮಾತ್ರ ಪ್ರಶಸ್ತಿಯಿಂದ ಮಿಸ್ ಆಗಿದ್ರು. ಆದ್ರೆ ಈಗ ರಾಘಣ್ಣಗೂ ಪ್ರಶಸ್ತಿ ಬಂದಿದ್ದು, ಇಡೀ ಫ್ಯಾಮಿಲಿಯಲ್ಲಿ ಎಲ್ಲರಿಗೂ ಪ್ರಶಸ್ತಿ ಬಂದಂತಾಗಿದೆ. ಬಹುಶಃ ನನಗೆ ಗೊತ್ತಿದ್ದಂತೆ “ನಂಜುಂಡಿ ಕಲ್ಯಾಣ’, “ಗಜಪತಿ ಗರ್ವಭಂಗ’ ಸಮಯದಲ್ಲೇ ರಾಘಣ್ಣಗೆ ಪ್ರಶಸ್ತಿ ಬರಬೇಕಿತ್ತು’ – ಹೀಗೆ ಹೇಳುತ್ತ ಮಾತಿಗಿಳಿದವರು ನಟ ಪುನೀತ್ ರಾಜಕುಮಾರ್.
“ಮಾಯಾಬಜಾರ್’ ಚಿತ್ರದ ಪತ್ರಿಕಾಗೋಷ್ಟಿ ಸಂದರ್ಭದಲ್ಲಿ ಪತ್ರಕರ್ತರ ಜೊತೆಗೆ ಮಾತುಕಥೆಗೆ ಇಳಿದ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರಿಗೆ ಬಂದಿರುವ ರಾಜ್ಯ ಪ್ರಶಸ್ತಿ, ತಮ್ಮ ಮುಂಬರುವ ಚಿತ್ರಗಳ ಕುರಿತಾಗಿ ಅನೌಪಚಾರಿಕವಾಗಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. “ನಮ್ಮ ಮನೆಯಲ್ಲಿ ಎಲ್ಲರೂ ಮೊದಲಿನಿಂದಲೂ ಅವರವರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಯಾವುದೇ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ಯಾವೆಂದು ಯೋಚಿಸಿಲ್ಲ.
ಕಲೆಯನ್ನು ನಂಬಿ ನಮ್ಮ ಕೆಲಸವನ್ನು ಇಷ್ಟಪಟ್ಟು ಮಾಡಬೇಕು. ಅದನ್ನು ಬಿಟ್ಟು ಅದರಿಂದ ಬೇರೇನೂ ನಿರೀಕ್ಷಿಸಬಾರದು ಇದು ಮನೆಯಲ್ಲಿ ದೊಡ್ಡವರಿಂದ ಕಲಿತ ಪಾಠ. ಬಹುಶಃ ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಅತಿಹೆಚ್ಚು ಪ್ರಶಸ್ತಿಗಳು ಬಂದಿರುವುದು ನಮ್ಮ ಕುಟುಂಬಕ್ಕೇ ಇರಬಹುದೇನೋ, ಆದರೆ ಇದೆಲ್ಲವೂ ಬಂದಿದ್ದು ಜನರ ಪ್ರೀತಿ, ವಿಶ್ವಾಸ, ಹರಕೆಯಿಂದ. ರಾಘಣ್ಣ ಅನಾರೋಗ್ಯದಿಂದ ಪುಟಿದೆದ್ದು ಮತ್ತೆ ಬಣ್ಣ ಹಚ್ಚಿದ್ದು ನಮ್ಮೆಲ್ಲರಿಗೂ ಖುಷಿ ಕೊಟ್ಟ ವಿಚಾರ. ಅವರು ಮತ್ತೆ ಬಣ್ಣ ಹಚ್ಚಿದ ಚಿತ್ರದ ಅಭಿನಯಕ್ಕೇ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಮತ್ತಷ್ಟು ಖುಷಿ ಕೊಟ್ಟಿದೆ’ ಎಂದರು ಪುನೀತ್ ರಾಜಕುಮಾರ್.
ಸೋಶಿಯಲ್ ಮೀಡಿಯಾ ಅಭಿಮಾನಿಗಳ ಜೊತೆ ಸೇತುವೆಯಿದ್ದಂತೆ…: ಇತ್ತೀಚೆಗೆ ಪುನೀತ್ ರಾಜಕುಮಾರ್ ನಿಧಾನವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು, ಸಿನಿಮಾಕ್ಕೆ ಸಂಬಂಧಿಸಿದ ವಿಚಾರಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂವಹನಕ್ಕೆ ಮುಂದಾಗುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ಪುನೀತ್ ರಾಜಕುಮಾರ್, “ಸೋಶಿಯಲ್ ಮೀಡಿಯಾ ಅನ್ನೋದು ನಿಜಕ್ಕೂ ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸಲು ಒಳ್ಳೆಯ ವೇದಿಕೆ. ಹಾಗಾಗಿ ನಾನು ಕೂಡ ನನ್ನ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾಗಳಲ್ಲಿ ಸಂಪರ್ಕ ಸಾಧಿಸುತ್ತಿದ್ದೇನೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಚರ್ಚೆಗಳು, ಕಾಮೆಂಟ್ಸ್ ಎಲ್ಲವೂ ಸಹಜ. ಆದ್ರೆ, ನನ್ನ ವಿಷಯದಲ್ಲಿ ಅಭಿಮಾನಿಗಳು ಮತ್ತು ಜನರ ಪ್ರೀತಿಯಿಂದ ಎಲ್ಲ ಒಳ್ಳೆಯ ಚರ್ಚೆಗಳು ನಡೆಯುತ್ತವೆ. ಒಳ್ಳೆಯ ಕಾಮೆಂಟ್ಸ್ ಬರುತ್ತವೆ ಅನ್ನೋದು ಸಮಾಧಾನದ ವಿಷಯ’ ಎನ್ನುತ್ತಾರೆ.
ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ…: “ಸದ್ಯ “ಯುವರತ್ನ’ ಸಿನಿಮಾದ ಕೆಲಸಗಳು ನಡೆಯುತ್ತಿದೆ. “ಜೇಮ್ಸ್’ ಸಿನಿಮಾದ ಕೆಲಸ ಕೂಡ ಶುರುವಾಗಿದೆ. ಎರಡೂ ಕೂಡ ಬೇರೆ ಬೇರೆ ಥರದ ಸಿನಿಮಾಗಳು “ಪಿಆರ್‌ಕೆ ಪ್ರೊಡಕ್ಷನ್ಸ್’ ಮಾಡಿದ “ಕವಲುದಾರಿ’ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ಇದನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ಅವರೇ ಹಿಂದಿಯಲ್ಲೂ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. “ಪಿಆರ್‌ಕೆ ಪ್ರೊಡಕ್ಷನ್ಸ್’ ಅಂದ್ರೆನೆ ಪಾರ್ವತಮ್ಮ ರಾಜಕುಮಾರ್ ಪ್ರೊಡಕ್ಷನ್ ಅಂತ.
“ವಜ್ರೆಶ್ವರಿ’ ಸಂಸ್ಥೆ “ಪಿಆರ್‌ಕೆ ಪ್ರೊಡಕ್ಷನ್ಸ್’ ಬೇರೆ ಬೇರೆಯಲ್ಲ. ಎರಡೂ ಒಂದೇ. ಇಲ್ಲಿಯವರೆಗೆ ನಮ್ಮ ಬ್ಯಾನರ್‌ನಲ್ಲಿ 84 ಸಿನಿಮಾ ಆಗಿದೆ. ಈಗ 85 ಸಿನಿಮಾವಾಗಿ “ಮಾಯಾ ಬಜಾರ್’ ಬರುತ್ತಿದೆ. ಮೊದಲಿನಿಂದಲೂ ನಮ್ಮ ಬ್ಯಾನರ್ ಸಿನಿಮಾಗಳು ಅಂದ್ರೆ ಅವು ಕಂಟೆಂಟ್ ಬೇಸ್ಡ್ ಸಿನಿಮಾಗಳು. ಈಗಲೂ ಅಷ್ಟೇ ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೆ ನಮ್ಮ ಮೊದಲ ಆದ್ಯತೆ. ಒಳ್ಳೆಯ ಸಬ್ಜೆಕ್ಟ್ ಇದ್ರೆ ಅಂಥ ಚಿತ್ರಗಳನ್ನು ನಿರ್ಮಿಸಲು ನಾವು ಸದಾ ಸಿದ್ದ’ ಎನ್ನುತ್ತಾರೆ ಪುನೀತ್ ರಾಜಕುಮಾರ್.