ಕೊಪ್ಪಳ: ಹೋರಾಟ ನಿರತ ಲಿಂಗಾಯತ ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಸಮಾಜದ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು. ಸಮಾಜದವರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಕೈಬಿಡಬೇಕು ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕೊಪ್ಪಳದಲ್ಲಿ ಶುಕ್ರವಾರ (ಡಿ.20) ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿಗಳು ಗಮನ ಹರಿಸಲಿಲ್ಲ. ತಾತ್ಕಾಲಿಕ ಧರಣಿ ಸತ್ಯಾಗ್ರಹ ನಿಲ್ಲಿಸಿದ್ದೇವೆ. ಡಿ. 23 ರಿಂದ ಮನೆ ಮನೆಗೆ ಭೇಟಿ ನೀಡುವ ಹೋರಾಟ ಆರಂಭವಾಗಲಿದೆ. ಹಲ್ಲೆಗೊಳಗಾದವರ ಕುಟುಂಬಕ್ಕೆ ಹೋಗಿ ಧೈರ್ಯ ತುಂಬುತ್ತೇವೆ. ಲಿಂಗಾಯತರ ಮೇಲೆ ರಾಜ್ಯದಲ್ಲಿ ಮೊದಲ ಬಾರಿಗೆ ಹಲ್ಲೆಯಾಗಿದೆ. ಹಲ್ಲೆ ಮಾಡಿದ ಕುಖ್ಯಾತಿಗೆ ಈ ಸರ್ಕಾರ ಪಾತ್ರವಾಗಿದೆ ಎಂದು ಕಿಡಿಕಾರಿದರು.
ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮಗೆ ಯಾರು ನ್ಯಾಯ ನೀಡುತ್ತಾರೊ ಅವರಿಗೆ ಸಹಕಾರ ನೀಡುವೆವು. ನಮ್ಮ ಸಮಾಜದ ಶಾಸಕರು, ಸಚಿವರಿಗೆ ಹೆದರಿಸಿದ್ದಾರೆ. ಅವರಿಗೆ ಏನಾದರೂ ಆಮಿಷವೊಡ್ಡಿರಬಹುದು. ಆದರೆ ನಮ್ಮ ಪರ ಇಬ್ಬರು ಶಾಸಕರು ಗಟ್ಟಿಯಾಗಿ ನಿಂತು ಮಾತನಾಡಿದ್ದಾರೆ. ಕೆಲ ಶಾಸಕರಿಗೆ ಆಸೆ ಆಮಿಷ ತೋರಿಸಿ ಮಾತನಾಡದಂತೆ ತಡೆದಿದ್ದಾರೆ. ಮೊನ್ನೆಯಿಂದ ನಮ್ಮ ಹೋರಾಟ ಕ್ರಾಂತಿಕಾರಿ ಹೋರಾಟವಾಗಿದೆ ಎಂದರು.
ಹೆಬ್ಬಾಳ್ಕರ್ ಜತೆಗಿದ್ದೇವೆ
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿ.ಟಿ ರವಿ ಅವಾಚ್ಯ ಶಬ್ದ ಬಳಕೆ ಆರೋಪದ ಬಗ್ಗೆ ಮಾತನಾಡಿದ ಅವರು, ಭಾರತದ ದೇಶದಲ್ಲಿ ಹುಟ್ಟಿರುವ ಹೆಣ್ಣಿನ ಮೇಲೆ ಗೌರವವಿರಬೇಕು. ವಿಧಾನಸೌಧದಲ್ಲಾಗಲಿ ಹೊರಗೆ ಆಗಲಿ ಆ ರೀತಿ ಮಾತನಾಡಬಾರದು. ಯಾವುದೇ ಸಮುದಾಯದ ಮಹಿಳೆಗೆ ಆ ರೀತಿ ಮಾತನಾಡಬಾರದು. ಸಿ.ಟಿ ರವಿ ಹೇಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಆ ರೀತಿ ಹೇಳಿದ್ದರೆ ಅದು ಖಂಡನೀಯ. ಲಕ್ಷ್ಮಿ ಹೆಬ್ಬಾಳ್ಕರ ಜೊತೆ ನಮ್ಮ ಸಮಾಜ ಇರುತ್ತದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.