ಔರಾದ: ಬೀದರ-ನಾಂದೇಡ (ಔರಾದ) ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರ ಸಚಿವರು ಕೂಡಲೆ ಮುಂದಾಗಬೇಕು. ಅಂದಾಗ ಮಾತ್ರ ತಾಲೂಕಿನಿಂದ ನಾಲ್ಕನೇಯ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೆನೆ. ಬೀದರ-ಔರಾದ ರಸ್ತೆ ಮೇಲೆಯೇ ನಮ್ಮ ರಾಜಕೀಯ ಭವಿಷ್ಯ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ವೇದಿಕೆ ಮೂಲಕವೇ ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಕೇಂದ್ರ ಹಾಗೂ ರಾಜ್ಯ ಸಚಿವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚವ್ಹಾಣ ಮನವಿ ಮಾಡಿಕೊಂಡರು. ತಾವು ಬೀದರ ಸಂಸದರಾಗಿ ಎರಡನೇಯ ಬಾರಿಗೆ ಆಯ್ಕೆಯಾಗಿದ್ದೀರಿ. ಅದರಂತೆ ಇದೀಗ ಕೇಂದ್ರ ಸರ್ಕಾರದ ಮಂತ್ರಿಯೂ ಆಗಿದ್ದೀರಿ. ಕಳದೇಳು ವರ್ಷಗಳಿಂದ ಔರಾದ-ಬೀದರ ರಸ್ತೆ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಂದಿದೆ ಎಂದು ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದೀರಿ.
ಅದರಂತೆ ನಮ್ಮ ಕಾರ್ಯಕರ್ತರು ಬ್ಯಾನರ್ ಮೂಲಕ ಶುಭ ಕೋರುತ್ತಿದ್ದಾರೆ. ಗ್ರಾಮ ಸಂಪರ್ಕ ಸಭೆಗಳಿಗೆ ಹಳ್ಳಿಗಳಿಗೆ ತೆರಳಿದಾಗ ಅಲ್ಲಿನ ಬಹುತೇಕ ಜನರು ರಸ್ತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ದಯವಿಟ್ಟು ಇದೊಂದು ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು. ಔರಾದ ಹಾಗೂ ಕಮಲನಗರ ತಾಲೂಕಿನಲ್ಲಿ ಸೋಲಾರ್ ಪಾರ್ಕ್, ರಸಗೊಬ್ಬರ ಕಂಪನಿ, ಸೈನಿಕ ತರಬೇತಿ ಕೇಂದ್ರ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳು ಜಾರಿಗೆ ತಂದು ಈ ಭಾಗದಲ್ಲಿನ ಜನರು ಕೆಲಸಕ್ಕಾಗಿ ನೆರೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪುತ್ತದೆ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಬೀದರ-ಔರಾದ ರಸ್ತೆ ನಿರ್ಮಾಣ ಮಾಡುವುದರ ಜೊತೆಗೆ ತಾಲೂಕಿನಲ್ಲಿನ 26 ಕೆರೆಗಳು ತುಂಬಿಸುವ ಯೋಜನೆ ಜಾರಿಗೆ ತರುವ ಪ್ರಯತ್ನ ಮಾಡುತ್ತೇನೆ. ಈ ಯೋಜನೆಯಿಂದ ಮಳೆ ನೀರಿನ ಮೇಲೆ ಬೇಸಾಯ ಪದ್ಧತಿ ಅನುಕರಣೆ ಮಾಡಿಕೊಂಡು ರೈತರ ಭೂಮಿಗೆ ವರ್ಷಪೂರ್ತಿ ನೀರು ಸಿಗುವಂತಹ ಕೆಲಸಗಳು ಮಾಡುತ್ತೇನೆಂದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಠಾಳಕರ, ತಾಲೂಕು ಬಿಜೆಪಿ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ವಿಯಕುಮಾರ ಗಾದಗಿ, ಈಶ್ವರ ಸಿಂಗ್ ಠಾಕೂರ, ವಸಂತ ಬಿರಾದರ, ಜಗದೀಶ ಖೂಬಾ, ಗಣಪತರಾವ ಖೂಬಾ, ಸತೀಶ ಪಾಟೀಲ್, ಶ್ರೀರಂಗ ಪರಿಹಾರ, ಬಂಡೆಪ್ಪ ಕಂಟೆ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.