Advertisement

Environment: ನಮ್ಮ ಪರಿಸರ ನಮ್ಮ ಭವಿಷ್ಯ : ಮೆಚ್ಚುಗೆ ಗಳಿಸಿದ ಲೇಖನಗಳು

11:27 PM Sep 25, 2023 | Team Udayavani |

ವನಮಹೋತ್ಸವ ಸಪ್ತಾಹದ ಹಿನ್ನೆಲೆಯಲ್ಲಿ “ಉದಯವಾಣಿ’ಯು “ನಮ್ಮ ಪರಿಸರ, ನಮ್ಮ ಭವಿಷ್ಯ’ ವಿಷಯದ ಕುರಿತಂತೆ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಲೇಖನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ‌ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ
ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಪ್ರಕೃತಿ ಅಥವಾ ಪರಿಸರ ಎಂದು ಕರೆಯುತ್ತೇವೆ. ಪ್ರಕೃತಿ ಕೇವಲ ಮಾನವ ಮಾತ್ರವಲ್ಲ ಈ ಭೂಮಿಯ ಮೇಲಣ ಪ್ರತಿಯೊಂದೂ ಜೀವಕ್ಕೂ ಆಸರೆಯಾಗಿದೆ. ಆದರೆ ಮಾನವ ತನ್ನ ದುರಾಸೆಯಿಂದ ನಿಸರ್ಗದ ಮೇಲೆ ಪ್ರತಿನಿತ್ಯ ಎಂಬಂತೆ ಕೌರ್ಯ ಮೆರೆಯುತ್ತಲೇ ಬಂದಿದ್ದಾನೆ. ಇದರ ಪ್ರತಿಫ‌ಲ ಎಂಬಂತೆ ಪ್ರಕೃತಿ ಆಗಾಗ ನಮ್ಮ ಮುನಿಸಿಕೊಳ್ಳುತ್ತಿದೆ. ಮಾನವ ತನ್ನ ತಪ್ಪುಗಳನ್ನು ತಿದ್ದಿ ಕೊಳ್ಳದೇ ಹೋದಲ್ಲಿ ಈ ಭೂಮಿಯ ಮೇಲೆ ಒಂದು ಜೀವವೂ ಉಳಿಯಲಾರದು. ಹೀಗಾಗಿ ಈಗಿನಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.

ಪರಿಸರ ನಾಶಕ್ಕೆ ನಾವೆಲ್ಲರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಭಾಗೀದಾರರು. ಇದು ಎಲ್ಲರಿಗೂ ತಿಳಿದಿದ್ದರೂ ನಮ್ಮಲ್ಲಿ ಇನ್ನೂ ಪರಿಸರ ಪ್ರೇಮ ಮೂಡದಿರುವುದು ಅಚ್ಚರಿಯ ವಿಷಯ. ಪರಿಸರ ರಕ್ಷಣೆಯ ವಿಷಯವನ್ನು ಇನ್ನಾದರೂ ನಾವೆಲ್ಲರೂ ಗಂಭೀರವಾಗಿ ಪರಿಗಣಿಸಿ ಈ ಕೆಳಗಿನ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕಿದೆ.

ಪುನರ್‌ ಬಳಕೆ ವಸ್ತುಗಳ ಬಳಕೆಗೆ ಆದ್ಯತೆ, ಪರಿಸರಸ್ನೇಹಿ ಉತ್ಪನ್ನಗಳ ಬಳಕೆ, ಮನೆಯಲ್ಲಿಯೇ ಜೈವಿಕ, ಹಸಿ ತ್ಯಾಜ್ಯಗಳನ್ನು ಸಂಸ್ಕರಿಸಿ ಪರ್ಯಾಯ ಇಂಧನ ಅಥವಾ ಗೊಬ್ಬರ ತಯಾರಿ, ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ, ತ್ಯಾಜ್ಯಗಳ ಸಮರ್ಪಕ ವಿಲೇವಾರಿ, ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯ ಬಳಕೆಯನ್ನು ಹೆಚ್ಚಿಸುವುದು, ನೈಸರ್ಗಿಕ ಶಕ್ತಿಯ ಬಳಕೆಗೆ ಒತ್ತು, ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳ ಸೇವನೆ, ಗಿಡಗಳನ್ನು ನೆಟ್ಟು ಅವುಗಳ ಪೋಷಣೆ, ಇಂಗುಗುಂಡಿಗಳ ನಿರ್ಮಾಣ ಇವೇ ಮೊದಲಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಪರಿಸರ ರಕ್ಷಣೆಗೆ ನಮ್ಮದೇ ಆದ ಕೊಡುಗೆಯನ್ನು ನೀಡಬಹುದಾಗಿದೆ.

ಮರಗಿಡಗಳ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮರಗಳಿಂದ ನೆಲ, ಜಲ, ವಾಯು ಮಾಲಿನ್ಯವನ್ನು ತಪ್ಪಿಸಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮರಗಿಡಗಳು ಇಲ್ಲವಾದಲ್ಲಿ ನಮ್ಮ ಬದುಕೇ ಬರಡಾಗುತ್ತದೆ. ಪರಿಸರ ಮಾಲಿನ್ಯವನ್ನು ತಡೆಯುವಲ್ಲಿ ಮರಗಿಡಗಳ ಪಾತ್ರ ಅತೀ ಮಹತ್ವದ್ದಾಗಿರುವುದರಿಂದ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅನಿವಾರ್ಯವಾದಲ್ಲಿ ಮಾತ್ರವೇ ಮರಗಳನ್ನು ಕಡಿಯಬೇಕು. ಅಷ್ಟು ಮಾತ್ರವಲ್ಲದೆ ಇದಕ್ಕೆ ಪ್ರತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದ ಪರಿಸರ ಮಾಲಿನ್ಯ ಮತ್ತು ಅದರಿಂದುಂಟಾಗುವ ಬಹುತೇಕ ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜನರ ಸಾಮೂಹಿಕ ಪ್ರಯತ್ನ ಅತ್ಯಗತ್ಯವಾಗಿದೆ.
“ವೃಕ್ಷೋ ರಕ್ಷತಿ ರಕ್ಷಿತಃ’

Advertisement

ಶ್ರೀಜಿತ್‌ ಎಸ್‌.ಎಸ್‌., ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ ಒಡಿಯೂರು

ನಮ್ಮ ಭವಿಷ್ಯ ಸುಸ್ಥಿರ ಪರಿಸರದಲ್ಲಡಗಿದೆ
ಪರಿಸರವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಭೂಮಿಯ ಮೇಲೆ ನಾವು ಕಂಡುಕೊಳ್ಳುವ ನಮ್ಮ ಅನುಕೂಲಕ್ಕಾಗಿ, ಒಳ್ಳೆಯದಕ್ಕಾಗಿ ಬಳಸುವುದೆಲ್ಲವೂ ಪರಿಸರದಿಂದಲೇ ಉಡುಗೊರೆಯಾಗಿ ಬಂದಿದೆ. ಅದಕ್ಕಾಗಿ ಪರಿಸರವನ್ನು ನಾವು ತಾಯಿ ಎಂದು ಕರೆಯುವುದು. ಆದರೆ ಮಾನವ, ಪರಿಸರವಿಲ್ಲದೆ ಯಾವ ಜೀವಿಯೂ ಬದುಕುಳಿಯಲಾರದು ಎನ್ನುವ ಸತ್ಯವನ್ನು ಮರೆತುಬಿಟ್ಟಿದ್ದಾನೆ.

ಅತಿಯಾದ ನಗರೀಕರಣದಿಂದ ನಗರಗಳು ನಿವೇಶನಗಳ ಗೂಡಾಗಿದ್ದರೆ, ಕಸದ ರಾಶಿಯಿಂದಾಗಿ ಗಬ್ಬುನಾರುತ್ತಿದೆ. ಕೈಗಾರಿಕೆಗಳು ಕೃಷಿ ಭೂಮಿಗೆ ಕಾಲಿಟ್ಟಿದೆ. ಅವುಗಳ ತ್ಯಾಜ್ಯ ವಿಷಪೂರಿತ ನೀರು ಜಲಮೂಲಗಳಿಗೆ ಸೇರಿ ಜಲಚರಗಳು ಸಾವನ್ನಪ್ಪುತ್ತಿವೆ. ಓಝೋನ್‌ ಪದರ ಹಾನಿ ಯಾಗಿ ಉರಿಬಿಸಿಲು ಮನುಷ್ಯನ ನೆತ್ತಿ ಸುಡುತ್ತಿದ್ದರೆ, ಭೂಗರ್ಭ ಬಿಸಿಯೇರು ತ್ತಿದೆ. ಹಿಮಪರ್ವತ ಕರಗಿ ಸಮುದ್ರ ಮಟ್ಟ ಏರುತ್ತಿದೆ. ಸ್ವತ್ಛ ಗಾಳಿಯಿಲ್ಲದೆ ಉಸಿರಾ ಡಲು ಪರದಾಡುವ ಸ್ಥಿತಿ ಬಂದಿದೆ. ಮರ ಗಳ ಕಡಿತದಿಂದ ಕಾಡೇ ನಾಶವಾಗಿ ವನ್ಯ ಜೀವಿಗಳು ಕೃಷಿಭೂಮಿ, ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಗುಡ್ಡಗಳು ಅತಿವೃಷ್ಟಿಗೆ ನೆಲಸಮವಾಗುತ್ತಿವೆ. ಕೃಷಿಗೆ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಆಹಾರ ಪದಾರ್ಥಗಳು ವಿಷಕಾರಿಯಾಗಿ ಮಾರ್ಪಡುತ್ತಿವೆ. ಒಟ್ಟಾರೆಯಾಗಿ ನಮ್ಮ ಸುತ್ತಮುತ್ತಲ ಪರಿಸರ ಸಂಪೂರ್ಣ ಮಲಿನಗೊಂಡು ಉಸಿರುಗಟ್ಟಿಸುವ ಹಾಗಾಗಿದೆ. ಇದಕ್ಕೆಲ್ಲ ಕಾರಣ ನಮ್ಮ ದುರಾಸೆಯ ಜೀವನ!

ಮಾನವ ಹೀಗೆಯೇ ಜೀವಿಸಿದರೆ ಭವಿಷ್ಯದಲ್ಲಿ ಇನ್ನಷ್ಟು ಕರಾಳ ದಿನ ಎದುರಿಸುವುದು ಖಂಡಿತ. ನಮ್ಮ ಭವಿಷ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಮತ್ತು ನಮ್ಮ ಸಂತತಿ ಅಳಿಯದಂತೆ ನೋಡಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸುವುದು ಅತೀ ಅಗತ್ಯವಾಗಿದೆ.

ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು, ವಸ್ತುಗಳ ಮರುಬಳಕೆ, ಅಪಾಯಕಾರಿ ತ್ಯಾಜ್ಯದ ಸಮರ್ಪಕ ವಿಲೇವಾರಿ, ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ, ಜಲಮಾಲಿನ್ಯ ತಡೆಗಟ್ಟುವುದರ ಜತೆಯಲ್ಲಿ ನೀರು ಪೋಲಾಗದಂತೆ ಎಚ್ಚರ ವಹಿಸುವುದು, ನೈಸರ್ಗಿಕ ಸಂಪನ್ಮೂಲಗಳ ಮಿತಬಳಕೆ, ಪರಿಸರಕ್ಕೆ ಮಾರಕವಾದ ಕೈಗಾರಿಕೆಗಳಿಗೆ ಕಡಿವಾಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಳಕೆ, ಸಾವಯವ ಕೃಷಿಗೆ ಬೆಂಬಲ, ಮಳೆನೀರು ಕೊಯ್ಲು, ಪರಿಸರ ಸಂರಕ್ಷಣೆಯ ಮೂಲಕ ನಮ್ಮ ಭವಿಷ್ಯವನ್ನು ನಾವು ಉತ್ತಮ ಪಡಿಸಿಕೊಳ್ಳಬೇಕು. ಸರಕಾರ ಪರಿಸರ ಸಂರಕ್ಷಿಸುವ ಎಲ್ಲ ಅಗತ್ಯ ಕ್ರಮಗಳನ್ನು ಜನರು ಕಡ್ಡಾಯವಾಗಿ ಅನುಸರಿಸುವಂತೆ ನೋಡಿಕೊಳ್ಳಬೇಕು. ಪರಿಸರ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಬೇಕು. ಆ ಮೂಲಕ ಸಮರ್ಥನೀಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.

ಗೌರವ್‌ ಜಿ. ಶೆಟ್ಟಿ, 10ನೇ ತರಗತಿ, ಸೈಂಟ್‌ ಫ್ರಾನ್ಸಿಸ್‌ ಆಂಗ್ಲ ಮಾಧ್ಯಮ ಶಾಲೆ, ಮುದರಂಗಡಿ

ಪರಿಸರದೊಂದಿಗೆ ಹೊಂದಿಕೊಂಡು ಬಾಳೋಣ
ನಮ್ಮ ಸುತ್ತಮುತ್ತಲೂ ಇರುವ ಸಸ್ಯಗಳು, ಪ್ರಾಣಿ-ಪಕ್ಷಿಗಳು ಹಾಗೆಯೇ ನೆಲ, ಜಲ, ವಾಯು, ಅಗ್ನಿ, ಆಕಾಶ ಈ “ಪಂಚಭೂತ’ಗಳನ್ನು ಒಳಗೊಂಡ ಈ ವ್ಯವಸ್ಥೆಯನ್ನೇ “ಪರಿಸರ’ ಎನ್ನುತ್ತೇವೆ. ಮಾನವನು ಪರಿಸರದ ಶಿಶು. ಮಾನವನ ಹುಟ್ಟು, ಅವನ ಬದುಕು, ಅವನ ಅಭಿವೃದ್ಧಿ, ಅವನ ಕ್ಷೇಮ, ಅವನ ಆಹಾರ-ವ್ಯವಹಾರ, ಅವನ ಆರೋಗ್ಯ-ನೆಮ್ಮದಿ ಇತ್ಯಾದಿ ಎಲ್ಲವೂ ಈ ಪರಿಸರವನ್ನು ಆಧರಿಸಿದೆ. ಎಲ್ಲಿಯವರೆಗೆ ಈ ಪರಿಸರ ಶುದ್ಧವಾಗಿಯೂ, ಸಮೃದ್ಧವಾಗಿಯೂ, ಯೋಗ್ಯ ವಾಗಿಯೂ, ಇರುತ್ತದೆಯೋ ಅಲ್ಲಿಯವರೆಗೆ ನಾವೂ ಸುಖ-ಸಮೃದ್ಧಿಯಿಂದ ಇರಲು ಸಾಧ್ಯ.

ನಾವು ನಮ್ಮ ಸ್ವಾರ್ಥಕ್ಕಾಗಿ, ನಮ್ಮ ಆಸೆ- ಆಕಾಂಕ್ಷೆಗಳ ಈಡೇರಿಕೆಗಾಗಿ, ಹಣದ ಆಸೆ ಗಾಗಿ, ಪ್ರಕೃತಿ ಹಾಗೂ ಪರಿಸರವನ್ನು ಮಲಿನ ಮಾಡುತ್ತಿದ್ದೇವೆ. ಪ್ರಕೃತಿ ಹಾಗೂ ಪರಿಸರ ದಲ್ಲಿ ತನ್ನಿಂತಾನೆ ಉಂಟಾಗುವ ಮಾಲಿನ್ಯ ಗಳನ್ನು ನಿವಾರಿಸುವ ವ್ಯವಸ್ಥೆ ಸೃಷ್ಟಿ ಯಲ್ಲಿಯೇ ಇದೆ. ಆದರೆ ನಮ್ಮಿಂದಾಗು ತ್ತಿರುವ ಪರಿಸರ ಮಾಲಿನ್ಯವು ಇಂದು ಮಿತಿ ಮೀರಿ ಈ ಭೂಮಿಯ ಮೇಲಣ ಪ್ರತಿ ಯೊಂದು ಜೀವಕ್ಕೆ ಸಂಚಕಾರ ತಂದೊಡ್ಡಿದೆ.

ನಮ್ಮ ಬದುಕಿನ ಅವಿಭಾಜ್ಯ ಅಂಗವಾದ ಪರಿಸರವನ್ನು ನಾವು ಎಗ್ಗಿಲ್ಲದೇ ನಾಶ ಮಾಡುತ್ತಿರುವುದೇ ನಮ್ಮೆಲ್ಲ ದುಃಖ, ಸಂಕಟ ಹಾಗೂ ನೆಮ್ಮದಿರಹಿತ ಜೀವನಕ್ಕೆ ಕಾರಣವಾಗಿದೆ. ಇನ್ನಾದರೂ ನಾವು ಪರಿಸರ ಸಂರಕ್ಷಣೆಗೆ ಮನ ಮಾಡಬೇಕಿದೆ. ನೆಲ, ಜಲ, ವಾಯು ಮಾಲಿನ್ಯವನ್ನು ನಮ್ಮಿಂದ ಸಾಧ್ಯವಾದಷ್ಟು ತಡೆಗಟ್ಟಿ ಈ ಪರಿಸರವನ್ನು ಉಳಿಸಬೇಕಿದೆ. ತನ್ಮೂಲಕ ಮಾನವ ತಾನು ಮಾತ್ರ ವಲ್ಲದೆ ಈ ಭೂಮಿಯಲ್ಲಿರುವ ಸಕಲ ಜೀವರಾಶಿಯನ್ನು ರಕ್ಷಿಸಲು ಸಾಧ್ಯ.

ಯಾರು ಪರಿಸರವನ್ನು ರಕ್ಷಿಸುತ್ತಾರೆಯೋ ಅವರಿಗೆ ಪರಿಸರವೇ ರಕ್ಷಣೆ ಯನ್ನು ಕೊಡುತ್ತದೆ. ಮರದ ಮೇಲೆ ಕುಳಿತು ಕೆಳಗಿನಿಂದ ಕಡಿದರೆ ಮರ ಮಾತ್ರವಲ್ಲದೆ ಕಡಿದವನೂ ಅಧಃಪತನ ಹೊಂದುತ್ತಾನೆಯೋ, ಹಾಗೆಯೇ ತಮ್ಮ ಜೀವನಕ್ಕೆ ಪರಿಸರವನ್ನೇ ಅವಲಂಬಿಸಿರುವ ನಾವು ಪರಿಸರವನ್ನೇ ನಾಶ ಮಾಡಿದರೆ ಅದರೊಂದಿಗೆ ನಮ್ಮ ನಾಶವು ಶತಃಸಿದ್ಧವಾಗಿದೆ. ಪರಿಸರದ ಎಲ್ಲ ಆಗುಹೋಗುಗಳಿಗೆ ನಾವೇ ಒಗ್ಗಿಕೊಂಡು ಹೊಂದಾಣಿಕೆಯಿಂದ ಬದುಕಬೇಕೇ ಹೊರತು ಪರಿಸರ ನಮ್ಮೊಂದಿಗೆ ಹೊಂದಿಕೊಳ್ಳಬೇಕೆಂಬ ಮೂಢತನದಿಂದ ಸರಿಯಲ್ಲ.

ಮಕ್ಕಳಿಗೆ ಎಳವೆಯಲ್ಲಿಯೇ ಪರಿಸರದ ಮಹತ್ವ ಮತ್ತು ಅದರ ಸಂರಕ್ಷಣೆಯ ಬಗೆಗೆ ಅರಿವು ಮೂಡಿಸುವ ಮೂಲಕ ನಮ್ಮ ಭಾವಿ ಪೀಳಿಗೆಯನ್ನು ಪರಿಸರ ಪ್ರೇಮಿಗಳನ್ನಾಗಿಸಬೇಕು. ನಾವೆಲ್ಲರೂ ನಮ್ಮೆಲ್ಲರ ಮುಂದಿನ ಭವಿಷ್ಯಕ್ಕಾಗಿ, ನಮ್ಮ ಏಳಿಗೆಗಾಗಿ, ಪರಿಸರದ ರಕ್ಷಣೆಯ ದೀಕ್ಷೆಯನ್ನು ತೊಟ್ಟು, ಜೀವನದುದ್ದಕ್ಕೂ ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಪಡೋಣ. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯದಿರೋಣ.
ವರಲಕ್ಷ್ಮೀ, ದ್ವಿತೀಯ ಪಿಯುಸಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ, ಪುತ್ತೂರು.

ಪರಿಸರ ರಕ್ಷಣೆಯಲ್ಲಿ ಅಡಗಿದೆ ನಮ್ಮೆಲ್ಲರ ಉಳಿವು-ಅಳಿವು

ನಮ್ಮ ಸುತ್ತಮುತ್ತಲಿನ ಪ್ರಕೃತಿ ಸೇರಿದಂತೆ ಪಂಚಭೂತಗಳಿಂದ ಆವೃತವಾದ ಭೌಗೋಳಿಕ ಪ್ರದೇಶವನ್ನು ಒಟ್ಟಾಗಿ ಪರಿಸರ ಎಂದು ವ್ಯಾಖ್ಯಾನಿಸಬಹುದು. ನಮ್ಮ ಪರಿಸರ ಸ್ವತ್ಛವಾಗಿದ್ದರೆ ಸಹಜವಾಗಿಯೇ ನಾವು ಆರೋಗ್ಯವಂತರಾಗಿ ಜೀವನ ನಡೆಸಬಹುದು.

ಪ್ರಸಕ್ತ ಕಾಲಮಾನದಲ್ಲಿ ಉದ್ಯಮ ಕ್ಷೇತ್ರದಲ್ಲಾದ ಕ್ರಾಂತಿಕಾರಿ ಬದಲಾವಣೆ ಗಳಿಂದಾಗಿ ನಮ್ಮ ಪರಿಸರ ಮಲಿನಗೊಂಡು ವಿಷಮಯವಾಗಿದೆ. ಗಾಳಿ, ನೀರು ಕಲುಷಿತಗೊಂಡು ನಮ್ಮ ಸ್ವಾಸ್ಥ್ಯ ರಕ್ಷಣೆ ಕಷ್ಟಸಾಧ್ಯವಾಗಿದೆ. ಅಷ್ಟು ಮಾತ್ರವಲ್ಲದೆ ನಮ್ಮ ನಿರ್ಲಕ್ಷ್ಯ, ಅಸಡ್ಡೆಯ ಮನೋಭಾವ ದಿಂದಾಗಿ ಪರಿಸರ ಮಾಲಿನ್ಯ ಸಮಸ್ಯೆ ನಮ್ಮನ್ನು ಪೆಡಂಭೂತವಾಗಿ ಕಾಡುತ್ತಿದೆ.

ಅಭಿವೃದ್ಧಿಯ ಭರಾಟೆಯಲ್ಲಿ ವೃಕ್ಷ ಸಂಕುಲಕ್ಕೆ ಕೊಡಲಿಯೇಟು ಬೀಳುತ್ತಿದೆ. ಕೈಗಾರಿಕೆಗಳು ಮತ್ತು ವಾಹನಗಳು ಹೊರ ಸೂಸುವ ಹೊಗೆಯಿಂದಾಗಿ ವಾಯು ಮಾಲಿನ್ಯ ಹೆಚ್ಚುತ್ತಿದೆ. ಇದರ ಪರಿಣಾಮ ತಾಪಮಾನ ವರ್ಷಗಳುರುಳಿದಂತೆ ಹೆಚ್ಚು ತ್ತಲೇ ಸಾಗಿದೆ. ಹವಾಮಾನ ಬದಲಾವ ಣೆಯ ಕಾರಣದಿಂದ ಪ್ರಾಕೃತಿಕ ವಿಕೋಪಗಳು ಸಾಮಾನ್ಯವಾಗಿದ್ದು ಇಡೀ ಜಗತ್ತನ್ನು ತಲ್ಲಣಗೊಳ್ಳುವಂತೆ ಮಾಡಿದೆ.

ಮನುಷ್ಯ ತಾನೇ ನಿರ್ಮಿಸಿದ ವಿಷವರ್ತುಲದಲ್ಲಿ ಬಂಧಿಯಾದಂತೆ ಭಾಸ ವಾಗುತ್ತಿದೆ. ಯಾಕೆಂದರೆ ಈ ಪರಿಸರವನ್ನು ಸ್ವತ್ಛವಾಗಿ ಇರಿಸಿ, ಪರಿಸರ ಸ್ನೇಹಿ ಯಾಗಿ ಬಾಳಬೇಕಾದ ವಿವೇಕವುಳ್ಳ ಮನುಷ್ಯ ತನ್ನ ಸ್ವಾರ್ಥಪರ ನಿಲುವಿನಿಂದ ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾನೆ. ಜೀವನದ ಪ್ರತೀ ಹಂತದಲ್ಲೂ ಈ ಪರಿಸರವನ್ನೇ ಅವಲಂಬಿಸಿರುವ ನಮಗೆ, ಪರಿಸರವನ್ನು ರಕ್ಷಿಸಿ, ತಮ್ಮ ಮತ್ತು ಮುಂದಿನ ಪೀಳಿಗೆಗೆ ಅದನ್ನು ಕಾಪಿಡುವ ಅನಿವಾರ್ಯತೆ ಇದೆ. ಇದನ್ನು ನಾವಿನ್ನೂ ಮನಗಾಣದಿರುವುದು ಅಚ್ಚರಿಯೇ ಸರಿ.

ಸ್ವತ್ಛ ಪರಿಸರ ಮತ್ತು ಸುಂದರ ನಿಸರ್ಗ ರೂಪಿಸುವಲ್ಲಿ ನಮ್ಮೆಲ್ಲರ ಪಾತ್ರ ಬಲು ಹಿರಿದಾದುದಾಗಿದೆ. ಇಂಗುಗುಂಡಿಗಳ ನಿರ್ಮಾಣದಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಡೀಸೆಲ್‌ ಹಾಗೂ ಪೆಟ್ರೋಲ್‌ ಬದಲಿಗೆ ಸಸ್ಯಜನ್ಯ ತೈಲವನ್ನು ಬಳಸುವುದರಿಂದ ಪರಿಸರ ಹೊಗೆ ಮುಕ್ತವಾಗಬಹುದು. ಧೂಳು ಹಾಗೂ ಇತರ ಕಾರಣಗಳಿಂದ ಓಝೋನ್‌ ಪದರ ಶಿಥಿಲವಾಗುತ್ತಿದ್ದು ಇದನ್ನು ತಡೆಯಲು ಮತ್ತು ಸಂರಕ್ಷಿಸಲು ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಅಳವಡಿಸಿ ಕೊಳ್ಳಬೇಕು. ನೈಸರ್ಗಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ.

ನಮ್ಮ ಪರಿಸರ ನಮ್ಮ ಮನೆಯಂತೆ. ಮನುಕುಲ ವಾಸಿಸುವ ಈ ಭೂಪ್ರದೇಶ ನಮಗೆ ದೇವರಿತ್ತ ವರದಾನ. ಇದು ನಮ್ಮ ಭವಿಷ್ಯವೂ ಹೌದು. ಪರಿಸರ ನಮ್ಮ ಉಳಿವು, ಅಳಿವಿನ ಪ್ರಶ್ನೆ. ಇಲ್ಲಿ ನೆಮ್ಮದಿಯಿಂದ ಉಸಿರಾಡಬೇಕಾದರೆ ಪರಿಸರ ಹಸ ನಾಗಿರಬೇಕು. ಪರಿಸರದ ಬಗೆಗೆ ಕಾಳಜಿ ಹಾಗೂ ಜಾಗೃತಿಯನ್ನು ಮುಂದಿನ ಜನಾಂಗವಾಗಿರುವ ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕಿದೆ.

ಅಪೇಕ್ಷಾ ಸಿ. ಶೆಟ್ಟಿ , 8ನೇ ತರಗತಿ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಸುಳ್ಯ

ಪ್ರಕೃತಿಯಿಂದಾಗಿ ನಾವೇ ಹೊರತು, ನಮ್ಮಿಂದ ಪ್ರಕೃತಿಯಲ್ಲ ಎಂಬ ಅರಿವಿರಲಿ
ನಮ್ಮ ಪೂರ್ವಜರ ದೃಷ್ಟಿಯಲ್ಲಿ ಈ ಪರಿಸರವು ಕೇವಲ ವಸ್ತುವಾಗಿರಲಿಲ್ಲ. ಅದೊಂದು ಅದ್ಭುತ ಶಕ್ತಿಯಾಗಿತ್ತು. ಈ ಪ್ರಕೃತಿಯ ಅಂಶಗಳಲ್ಲಿ ಜೀವತುಂಬಿ ಭಕ್ತಿಯಿಂದ ಪೂಜಿಸುತ್ತಿದ್ದರು. ಪ್ರಕೃತಿಯು ದೇವರ ವಾಸಸ್ಥಳ ಎಂದು ನಂಬಿದ್ದರು. ಮನದಲ್ಲಿ ಭಕ್ತಿಯು ತುಂಬಿರುವಾಗ ವಿನಾಶದ ಮಾತೆಲ್ಲಿ? ಅವರ ಮುಗ್ಧ ಹಾಗೂ ನಿಸ್ವಾರ್ಥ ಭಕ್ತಿಯ ಪರಿಣಾಮವೇನೋ, ಪ್ರಕೃತಿ ಮಾತೆ ಸದಾ ಹಸನ್ಮುಖೀಯಾಗಿ ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಹಚ್ಚಹಸುರಿನಿಂದ ಕಂಗೊಳಿಸಿ ಜೀವಜಗತ್ತಿನ ಆವಶ್ಯಕತೆಗಳನ್ನು ಪೂರೈಸುತ್ತಿದ್ದಳು.

ಆದರೆ ಆಧುನಿಕತೆಯ ಸುಳಿವಿಗೆ ಸಿಲುಕಿ ಓದಿದವರೂ ಅವಿದ್ಯಾವಂತ ರಾಗುತ್ತಿದ್ದಾರೆ. ದುರಾಸೆ ಎಂಬ ರಾಕ್ಷಸನನ್ನು ತಮ್ಮಲ್ಲಿ ಪೋಷಿಸಿ ಪ್ರಕೃತಿಯನ್ನೇ ವಿನಾಶದ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಪ್ರಕೃತಿಯ ಮೇಲಿನ ಭಕ್ತಿ, ಪ್ರೀತಿ ಹಾಗೂ ಗೌರವ ಕಡಿಮೆಯಾದಂತೆ ಅದರ ಮಹತ್ವ ಮರೆಯುತ್ತಿದ್ದೇವೆ. ಪರಿಸರದ ಸಮತೋಲನಕ್ಕೆ ಧಕ್ಕೆಯಾದರೆ ಏನಾಗಬಹುದು ಎಂಬುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳು, ನಮ್ಮನ್ನು ಕಾಡುತ್ತಿರುವ ಸಾಂಕ್ರಾಮಿಕ ಕಾಯಿಲೆಗಳೇ ಸಾಕ್ಷಿ.

ನಮ್ಮ ಸುತ್ತಮುತ್ತಲಿನ ಗಾಳಿ ಕಲುಷಿತಗೊಂಡರೆ, ನಾಳೆ ನಾವು ಅದೇ ಕಲುಷಿತ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ನದಿಕೆರೆಗಳ ಶುದ್ಧನೀರನ್ನು ಮಲಿನಗೊಳಿಸಿದರೆ, ಅದೇ ನೀರು ತಾನೆ ನಮಗೆ ಸೇವಿಸಲು ಸಿಗುವುದು? ನಾವು ಪ್ರಕೃತಿಗೆ ಏನನ್ನು ನೀಡುತ್ತೇವೆಯೋ ಪ್ರಕೃತಿಯು ಅದನ್ನೇ ನಮಗೆ ಕೊಡಲು ಸಾಧ್ಯ. ಅದು ಸ್ವತ್ಛತೆಯಿರಲಿ, ಮಲಿನವಿರಲಿ.

ಈಗ ನಮ್ಮ ಪ್ರಕೃತಿ ಮಾತೆಯ ಅಳಿವು-ಉಳಿವಿನ ಪ್ರಶ್ನೆ ನಮ್ಮ ಕೈಯಲ್ಲಿದೆ. ನಮ್ಮ ಮುಂದಿನ ಪೀಳಿಗೆಯನ್ನು ಪ್ರಕೃತಿಯು ಪೋಷಿಸಬೇಕಾದರೆ ಇಂದು ನಾವು ಅವಳನ್ನು ಪೋಷಿಸಬೇಕು. ಪ್ರಕೃತಿಯ ಉಳಿವಿನ ಕಿಡಿಯು ಮಕ್ಕಳು ಮತ್ತು ಯುವ ಸಮೂಹದ ಮನದಲ್ಲಿ ಮೂಡಬೇಕು. ಆ ಕಿಡಿಯು ಸೂರ್ಯನ ಬೆಳಕಿನಂತೆ ಎಲ್ಲೆಲ್ಲೂ ಪ್ರಜ್ವಲಿಸಬೇಕು. ಪ್ರತಿಯೊಬ್ಬರಿಗೂ ತನ್ನ ಚಿಕ್ಕಪುಟ್ಟ ಕರ್ತವ್ಯದ (ಕಸ ಹಾಕದೇ ಇರುವುದು, ಗಿಡ ನೆಡುವುದು) ಅರಿವಿರಬೇಕು ಹಾಗೂ ಅದನ್ನು ಪಾಲಿಸಬೇಕು. ಪ್ರತಿಯೊಬ್ಬರ ಮನ ಸ್ವತ್ಛವಾದರೆ, ಪರಿಸರ ಸಂರಕ್ಷಣೆಯ ಅರಿವು ಮೂಡಿದರೆ ನಮ್ಮ ದೇಶವೇ ಸ್ವತ್ಛವಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಉಳಿವಿಗಾಗಿ, ಮನುಕುಲದ ಉಳಿವಿಗಾಗಿ ಹಾಗೂ ಜೀವಜಗತ್ತಿನ ಉಳಿವಿಗಾಗಿ ಮೊದಲು ನಮ್ಮ ಪ್ರಕೃತಿಮಾತೆ ಉಳಿಯಬೇಕು. ನಾವೆಲ್ಲರೂ ಜಾಗೃತರಾದರೆ ಮಾತ್ರ ಇದು ಸಾಧ್ಯ. ಪ್ರಕೃತಿಯಿಂದಾಗಿ ನಾವು, ನಮ್ಮಿಂದ ಪ್ರಕೃತಿಯಲ್ಲ ಎಂಬ ಅರಿವಿರಬೇಕು ಅಷ್ಟೇ.

ನಮ್ರತಾ ಎಸ್‌., ದ್ವಿತೀಯ ವಾಣಿಜ್ಯ ವಿಭಾಗ ವಾಣಿ ಪದವಿಪೂರ್ವ ಕಾಲೇಜು, ಹಳೆಕೋಟೆ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next