Advertisement

ಕೆರೆ ಸಂರಕ್ಷಣೆ ನಮ್ಮ ಕರ್ತವ್ಯ: ಮಹನ್ಯಾ

10:21 AM Nov 18, 2019 | Suhan S |

ಹುಬ್ಬಳ್ಳಿ: ನಮ್ಮ ಕೆರೆ, ನಮ್ಮ ಹಕ್ಕಾಗಿದ್ದು, ಅದನ್ನು ಸುರಕ್ಷಿತವಾಗಿ ಕಾಪಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ ಹೇಳಿದರು.

Advertisement

ಇಲ್ಲಿನ ಉಣಕಲ್ಲ ಕೆರೆ ಅಭಿವೃದ್ಧಿ ಸಂಘದಿಂದ ನಡೆಯುತ್ತಿರುವ ಉಣಕಲ್ಲ ಕೆರೆ ಸ್ವತ್ಛತಾ ಶ್ರಮದಾನದಲ್ಲಿ ರವಿವಾರ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮದ ಕೆರೆ ಎಂದಾಗ ಅದು ಇಡೀ ಗ್ರಾಮದ ಆಸ್ತಿಯಾಗಿರುತ್ತದೆ. ಇದನ್ನು ಹಾಳು ಮಾಡುವ ಹಕ್ಕು ಯಾರಿಗೂ ಇರಲ್ಲ. ಹೀಗಾಗಿ ಇಡೀ ಗ್ರಾಮದ ಜನರು ಒಗ್ಗೂಡಿಕೊಂಡು ಕೆರೆ ಸಂರಕ್ಷಣೆ ಮಾಡಬೇಕು ಎಂದರು.

ಕೆರೆಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಕೆರೆಗಳು ಇಲ್ಲದಂತಾಗುತ್ತಿವೆ. ಪೂರ್ವಜರು ಗ್ರಾಮಕ್ಕೊಂದು ಕೆರೆ ನಿರ್ಮಿಸುವುದರ ಹಿಂದೆ ವೈಜ್ಞಾನಿಕ ಅಂಶವಿದೆ. ಕೆರೆಯಿಂದ ಅಂತರ್ಜಲ ವೃದ್ಧಿಸುವುದರ ಜತೆಗೆ ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆ ನೀಗಿಸುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಅದೆಷ್ಟೋ ಕೆರೆಗಳು ಲೇಔಟ್‌ ಗಳಾಗಿ ಮಾರ್ಪಾಡಾಗಿವೆ. ಒಂದಿಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳನ್ನು ಕಾಣಬಹುದಾಗಿದ್ದರೂ ಸಂರಕ್ಷಣೆ ಕಾರ್ಯಗಳು ಆಗುತ್ತಿಲ್ಲ. ಕೆರೆಗಳು ಮುಂದಿನ ಜನಾಂಗಕ್ಕೂ ಅಗತ್ಯವಾಗಿವೆ ಎಂಬುದನ್ನು ಅರಿತು ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಪಣ ತೊಡಬೇಕು ಎಂದರು.

ಕಲಾವಿದ ಬಸವರಾಜ ಯಾದವಾಡ ಮಾತನಾಡಿ, ಗ್ರಾಮದ ಕೆರೆ, ಹಳ್ಳ, ಕೊಳ್ಳಗಳನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಪ್ರತಿಯೊಬ್ಬರು ಅನುಭವಿಸಬೇಕಾಗುತ್ತದೆ. ಕೆರೆಗಳನ್ನು ಕಲುಷಿತಗೊಳ್ಳದಂತೆ ಕಾಪಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಉಣಕಲ್ಲ ಅಭಿವೃದ್ಧಿ ಸಂಘದ ಮೂಲಕ ಯುವಕರು ಕೆರೆ ಸ್ವತ್ಛಗೊಳಿಸುವ ಕಾರ್ಯ ಮಾದರಿಯಾಗಿದ್ದು, ಇಂತಹ ಕಾರ್ಯಗಳು ಪ್ರತಿ ಗ್ರಾಮದಲ್ಲಿ ಆಗಬೇಕು ಎಂದರು.

ಯುವಕರ ಕಾರ್ಯಕ್ಕೆ ಮೆಚ್ಚುಗೆ: ಉಣಕಲ್ಲ ಕೆರೆ ಅಭಿವೃದ್ಧಿ ಸಂಘದ ಮೂಲಕ ಯುವಕರ ಪಡೆಯೊಂದು ಕೆರೆಯಲ್ಲಿ ಬೆಳೆದಿರುವ ಜಲಕಳೆ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಕಳೆದ 15 ದಿನಗಳಿಂದ ಬೆಳಗ್ಗೆ ಹಾಗೂ ರಜಾದಿನಗಳಲ್ಲಿ ಇಡೀ ದಿನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ರೂಪದ ಮೂಲಕ ನೆರವು ನೀಡುತ್ತಿದ್ದಾರೆ.ಜಿಲ್ಲಾಡಳಿತ, ಪಾಲಿಕೆಯಿಂದಲೂ ಅಗತ್ಯ ನೆರವು ನೀಡುವ ಭರವಸೆ ದೊರೆತಿವೆ. ಕೆಲವರು ರವಿವಾರ ಹಾಗೂ ರಜಾ ದಿನಗಳಲ್ಲಿ ಯುವಕರೊಂದಿಗೆ ಕೈ ಜೋಡಿಸಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಮಹೇಶ ಚಿಕ್ಕವೀರಮಠ, ಸಿದ್ದ ಕೆಂಚಣ್ಣವರ, ಜಯಪ್ರಕಾಶ ಉಡುಪಿ, ಶಿವಕುಮಾರ ಸಾಲಿ, ಸಂಗಮೇಶ ಗೌರಿಮಠ, ಸತೀಶ, ಮಂಜುನಾಥ ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next