Advertisement

ಶ್ರಮಿಕ ವರ್ಗದಿಂದ ನಮ್ಮ ಸಂಸ್ಕೃತಿ ಜೀವಂತ

08:20 PM Feb 02, 2020 | Lakshmi GovindaRaj |

ಚಾಮರಾಜನಗರ: ಶ್ರಮಿಕ ವರ್ಗದವರಿಂದ ನಮ್ಮ ಸಂಸ್ಕೃತಿ ಜೀವಂತವಾಗಿದೆ. ಸಮಾಜ ಕಟ್ಟುವಲ್ಲಿ ಮತ್ತು ಸಮಾಜದ ಅನಿಷ್ಠಗಳ ನಿವಾರಣೆ ಮಾಡುವಲ್ಲಿ ಇವರ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅಭಿಪ್ರಾಯಪಟ್ಟರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಮಡಿವಾಳ ಮಾಚಿದೇವ ಮತ್ತು ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಕಾಯಕ ಮಾಡಿಕೊಂಡು ಬಂದಂತಹ ಜನರು ಶ್ರಮಿಕ ವರ್ಗದವರು.

ಸ್ವಾರ್ಥವೇ ಗೊತ್ತಿಲ್ಲದೇ ಇತರರಿಗಾಗಿ ದುಡಿದು ತಮ್ಮ ಸಂತೋಷವನ್ನು ತ್ಯಾಗಮಾಡುವವರು ಶ್ರಮಿಕವರ್ಗ ಮತ್ತು ಕಾಯಕ ವರ್ಗದವರು. ದೈಹಿಕ ಕೊಳಕುಗಳನ್ನು ತೆಗೆಯುವುದರ ಜೊತೆಗೆ ಮನಸ್ಸಿನ ಕೊಳಕುಗಳನ್ನು ನಿರ್ಮೂಲನಾ ಮಾಡುವ ಕೆಲಸವನ್ನು ಶ್ರಮಿಕ ವರ್ಗ ಶ್ರದ್ಧೆಯಿಂದ ಮಾಡುತ್ತಿದೆ ಎಂದರು.

ನಾಡಿಗೆ ಮಹನೀಯರ ಕೊಡುಗೆ ಅಪಾರ: ನಮ್ಮ ದೇಶ ಮಹಾತ್ಮರ ದೇಶ. ನಾಡಿಗೆ ಮಹನೀಯರ ಕೊಡುಗೆ ಅಪಾರವಾಗಿದ್ದು, ಎಲ್ಲರು ಸ್ಮರಣೆ ಮಾಡಬೇಕು. ಸವಿತಾ ಸಮಾಜ, ಮಡಿವಾಳ ಸಮಾಜಕ್ಕೆ ಸಿಗಬೇಕಾದ ಪ್ರಾತಿನಿಧ್ಯ, ಗೌರವಗಳು ನೀಡಬೇಕಾದ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಕೊಳ್ಳಬೇಕಿದೆ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಿದಾಗ ನಾಗರಿಕ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಶರಣರ ಬದುಕು ನಮಗೆ ಆದರ್ಶ: ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿಗಳಂತಹ ಶರಣರು ಅವರ ಬದುಕಿನಲ್ಲೇ ಸತ್ಯವನ್ನು ಕಂಡು ಕೊಂಡಿದ್ದರು. ಸಮಾಜಕ್ಕೆ ಉದಾತ್ತ ಚಿಂತನೆಗಳನ್ನು ಕಾಯಕ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಜೀವನ ಸರಳವಾಗಿರಬೇಕು ಚಿಂತನೆಗಳು ಉದಾತ್ತವಾಗಿರಬೇಕು. ಶರಣರ ಮತ್ತು ಮಹನೀಯರ ಬದುಕು ನಮಗೆ ಆದರ್ಶ ಪ್ರಾಯವಾಗಿದೆ. ಇಂತಹ ಮಹನೀಯರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ ಇರಬೇಕು ಎಂದು ತಿಳಿಸಿದರು.

Advertisement

ಕೆಲಸದಲ್ಲಿ ಪ್ರೀತಿ, ವಿಶ್ವಾಸ ಬಹಳ ಮುಖ್ಯ: ಮಡಿವಾಳ ಮಾಚಿದೇವ, ಸವಿತ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಮಾತನಾಡಿ, ಯಾವುದೇ ಕೆಲಸ, ಕಾರ್ಯಗಳಲ್ಲಿ ಪ್ರೀತಿ ವಿಶ್ವಾಸ ಬಹಳ ಮುಖ್ಯವಾಗಿದೆ. ಯಾವ ಕೆಲಸವನ್ನೂ ಮೇಲು ಕೀಳು ಎಂದು ಭಾವಿಸದೇ ಶ್ರದ್ಧೆಯಿಂದ ಕಾಯಕ ನಿರ್ವಹಿಸುವುದೆ ಮುಖ್ಯವಾಗಿದೆ ಎಂದು ಮಹನೀಯರ ಬದುಕಿನಿಂದ ತಿಳಿಯಲಿದೆ.

ಇಂತಹ ಮೇರು ಪುರುಷರ ಶರಣರ ಜಯಂತಿಯನ್ನು ಎಲ್ಲರು ಮುಂದೆಯೂ ಸಹಾ ಇದೇ ರೀತಿ ಒಗ್ಗೂಡಿ ಆಚರಿಸೋಣ ಎಂದು ಶುಭ ಹಾರೈಸಿದರು. ರಾಜ್ಯದ ಹಲವು ಜಿಲ್ಲೆಗಳು ಇತ್ತೀಚೆಗೆ ನೆರೆ‌ ಹಾವಳಿಗೆ ಒಳಗಾದ ಹಿನ್ನೆಲೆಯಲ್ಲಿ ಮಡಿವಾಳ ಮಾಚಿದೇವ, ಸವಿತ ಮಹರ್ಷಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಡಿವೈಎಸ್‌ಪಿ ಜಿ.ಮೋಹನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ‌ ಎಚ್‌.ಕೆ. ಗಿರೀಶ್‌, ಜಿಲ್ಲಾ ಪಂಚಾಯ್ತಿ ಉಪಕಾರ್ಯದಶಿ ಧರಣೇಶ್‌, ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷರಾದ ಸಿದ್ದಯ್ಯ, ದುಂಡುಮಾದು, ಸಿದ್ಧಶೆಟ್ಟಿ, ಸವಿತಾ ಮಹರ್ಷಿ ಸಂಘದ ಜಿಲ್ಲಾ ಅಧ್ಯಕ್ಷ ಚಿನ್ನಸ್ವಾಮಿ,

ತಾಲೂಕು ಅಧ್ಯಕ್ಷ ಬಸವಣ್ಣ, ಸೋಮಶೇಖರ್‌, ಕನ್ನಡ ಪರ ಸಂಘಟನೆಯ ಮುಖಂಡರಾದ ಚಾ.ರಂ.ಶ್ರೀನಿವಾಸ್‌ಗೌಡ, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ್‌, ಜಿ.ಬಂಗಾರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next