Advertisement
ಅದು ನಮ್ಮ ಜೀವನದ ವಿಧಾನ, ಬದುಕಿನ ಒಂದು ಕ್ರಮ.
Related Articles
Advertisement
ಸಂವಿಧಾನ ಇಡೀ ರಾಷ್ಟ್ರವನ್ನು ನಡೆಸುವ ಶಕ್ತಿಯನ್ನು ಹೊಂದಿರುವ ಒಂದು ನೀತಿ ಸಂಹಿತೆ. ಪ್ರತಿಯೊಬ್ಬ ವ್ಯಕ್ತಿಯ ಜೀವಿಸುವ ಹಕ್ಕಿನಿಂದ ಪ್ರಾರಂಭವಾಗಿ, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಹೀಗೆ ಆ ವ್ಯಕ್ತಿಯ ಮೂಲ ಕರ್ತವ್ಯದ ವರೆಗೂ ಸಂಪೂರ್ಣ ಜ್ಞಾನವನ್ನು ನೀಡುವ ಲಿಖೀತ ರೂಪದ ದೇಶದ ಸರ್ವೋಚ್ಚ ಕಾನೂನೇ ಭಾರತ ಸಂವಿಧಾನ.
ಒಬ್ಬ ಪ್ರಜೆ ದೇಶದ ನೀತಿ ನಿಯಮಗಳ ಬಗ್ಗೆ ಅರಿವನ್ನು ಹೊಂದಿದಾಗ, ಸರಕಾರದ ರಚನೆಯ ಬಗ್ಗೆ ತಿಳಿವಳಿಕೆ ಇದ್ದಾಗ, ತನ್ನ ಹಕ್ಕು ಮತ್ತು ಕರ್ತವ್ಯಗಳ ಅರಿವಿದ್ದಾಗ ಮಾತ್ರ ಆತ ತನ್ನ ಹಕ್ಕನ್ನು ಚಲಾಯಿಸಲು ಸಾಧ್ಯ, ತನ್ನ ಕರ್ತವ್ಯವನ್ನು ನಿಭಾಯಿಸಲು ಸಾಧ್ಯ, ಸರಕಾರದ ರಚನೆಯಲ್ಲಿ ಭಾಗವಹಿಸಲು ಸಾಧ್ಯ, ಸರಿಯಾದ ವ್ಯಕ್ತಿಯನ್ನು ಚುನಾಯಿಸಲು ಸಾಧ್ಯ. ಇವೆಲ್ಲವನ್ನೂ ಸಂವಿಧಾನ ವಿವರಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನದ ಅರಿವಿದ್ದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ. ಯಾವುದೇ ವ್ಯಕ್ತಿ ಕಾನೂನಿನ ತಿಳಿವಳಿಕೆಯನ್ನು ಹೊಂದಿರಲಿ ಅಥವಾ ಇಲ್ಲದೇ ಇರಲಿ, ಕಾನೂನಿನ ಚೌಕಟ್ಟಿನ ಹೊರತು ಜೀವಿಸಲು ಸಾಧ್ಯವಿಲ್ಲ. ಹಾಗಾಗಿ ಕಾನೂನಿನ ಜ್ಞಾನ ಪ್ರತಿಯೊಬ್ಬ ಪ್ರಜೆಗೂ ಅತ್ಯಂತ ಅವಶ್ಯ. ಭಾರತ ಸಂವಿಧಾನ ನಮ್ಮ ದೇಶದ ಉಚ್ಚ ಕಾನೂನಾಗಿದ್ದು, ಅದರ ತಿಳಿವಳಿಕೆಯಿಂದ ಮಾತ್ರ ಪ್ರಜಾಪ್ರಭುತ್ವದ ಗುರಿ ತಲುಪಲು ಸಾಧ್ಯ.
ಭಾರತ ಸಂವಿಧಾನದ ಪ್ರಸ್ತಾವನೆಯೇ ಹೇಳುವಂತೆ ಭಾರತ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ವಿಶ್ವಾಸ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರÂವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸೋದರ ಭಾವನೆಯನ್ನು ಮೂಡಿಸುವುದಕ್ಕಾಗಿ ದೃಢ ಸಂಕಲ್ಪ ಮಾಡಿ ಸಂವಿಧಾನವನ್ನು ಅಂಗೀಕರಿಸಿದೆ.
ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಯ ಸೊತ್ತು. ಪ್ರತಿಯೊಬ್ಬ ವ್ಯಕ್ತಿ ಸಂವಿಧಾನವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡಾಗ ಮಾತ್ರ ಆತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಪಡೆಯಬಹುದು. ಪ್ರತಿಯೊಬ್ಬ ಪ್ರಜೆ ಸಂವಿಧಾನದಲ್ಲಿ ಮಂಡಿಸಲಾದ ತನ್ನ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಡೆಸುವಂತಾದಾಗ, ಪ್ರತಿಯೊಬ್ಬ ಪ್ರಜೆಯೂ ತನ್ನ ಹಕ್ಕನ್ನು ಅರಿತು ಅದನ್ನು ಚಲಾಯಿಸುವಂತಾದಾಗ ಸಂವಿಧಾನದ ರಚನೆಯ ಮೂಲ ಉದ್ದೇಶದ ಸಾಧನೆ ಸಾಧ್ಯ. ಆಗ ಮಾತ್ರ ದೇಶದ ಏಕತೆ ಮತ್ತು ದೇಶದ ಸಮಗ್ರತೆ ಸಾಧ್ಯ.
ಹಾಗಾಗಿ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಸಂವಿಧಾನವನ್ನು ಓದಲೇಬೇಕಾದ ಅಗತ್ಯವಿದೆ. ಇದೇ ಕಾರಣದಿಂದಲೇ ಶಾಸಕಾಂಗ “ಸಂವಿಧಾನ ಓದು’ ಕಾರ್ಯಕ್ರಮ ಹಮ್ಮಿಕೊಂಡು ಸಂವಿಧಾನದ ಪ್ರಾಮುಖ್ಯದ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದೆ. ಸರಕಾರ ಎಲ್ಲ ಪದವಿ ವಿದ್ಯಾರ್ಥಿಗಳಿಗೂ ಭಾರತ ಸಂವಿಧಾನವನ್ನು ಒಂದು ವಿಷಯವಾಗಿ ಪರಿಚಯಿಸಿದೆ. ಆದ್ದರಿಂದ ಒಬ್ಬ ವ್ಯಕ್ತಿ ದೇಶದ ಪ್ರಜ್ಞಾವಂತ ಪ್ರಜೆಯೆನಿಸಿಕೊಳ್ಳಬೇಕಾದರೆ ಸರಕಾರ ರಚನೆಯ ತಿಳಿವಳಿಕೆ ಹೊಂದುವುದು, ಸರಕಾರ ರಚನೆಯಲ್ಲಿ ಭಾಗವಹಿಸುವುದು, ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವುದು, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ನಡುವಿನ ಸಂಬಂಧ ಅರಿತು ಅವುಗಳ ಕಾರ್ಯವೈಖರಿಯನ್ನು ಅರಿಯುವುದು ಮುಖ್ಯ. ಇವೆಲ್ಲವುಗಳ ಜ್ಞಾನ ಕೇವಲ ಸಂವಿಧಾನದಿಂದ ಸಾಧ್ಯ. ಆದುದರಿಂದ ದೇಶದ ಸರ್ವೋಚ್ಚ ಕಾನೂನಾದ ಸಂವಿಧಾನವನ್ನು ಓದುವುದು ಅವಶ್ಯ.