ಯಾದಗಿರಿ: “ಕೂಡಲಸಂಗಮದಲ್ಲಿ ಡಿ.19ರಂದು ನಮ್ಮ ಕಾಂಗ್ರೆಸ್ ಪಕ್ಷ ಉದ್ಘಾಟನೆಯಾಗಲಿದೆ’ ಎಂದು ಸಂಸ್ಥಾಪಕ ಹಾಗೂ ಶಾಸಕ ವರ್ತೂರು ಪ್ರಕಾಶ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಡೆಯುವ ಸಮಾರಂಭದಲ್ಲಿ 3ರಿಂದ 4 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಅಹಿಂದ ವರ್ಗವನ್ನು ನಿರ್ಲಕ್ಷ್ಯ ಮಾಡಿದೆ. ಅಹಿಂದ ಪರ ಯಾವುದೇ ಕಾರ್ಯಕ್ರಮ ಜಾರಿಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದ ನಾಯಕರಾದ ಎಚ್. ವಿಶ್ವನಾಥ, ಶ್ರೀನಿವಾಸ ಪ್ರಸಾದ, ಎಸ್.ಎಂ.ಕೃಷ್ಣ ಅವರನ್ನು ಮೂಲೆಗುಂಪು ಮಾಡಿದ ಪರಿಣಾಮ ಅವರೆಲ್ಲರೂ ಪಕ್ಷ ಬಿಟ್ಟು ಹೋಗಿದ್ದಾರೆ. ಆದ್ದರಿಂದ ಅಹಿಂದ ವರ್ಗದ ಕಲ್ಯಾಣಕ್ಕಾಗಿ ಹೊಸ ಪಕ್ಷ ಸ್ಥಾಪಿಸಲಾಗುತ್ತಿದೆ ಎಂದರು.
ಸಿಎಂ ವಿರೋಧ: ಕೋಲಾರ ಜಿಲ್ಲೆಯಲ್ಲಿ ಪಕ್ಷೇತರ ಶಾಸಕನಾಗಿ ಲೋಕಸಭೆ ಹಾಗೂ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಾನು ಶ್ರಮಿಸಿದ್ದೇನೆ. ಆದರೆ ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೆಂಡಕಾರಿದರು. ಮುಂಬರುವ ಚುನಾವಣೆಯಲ್ಲಿ ಎಷ್ಟು ಕ್ಷೇತ್ರದಲ್ಲಿ ಸ್ಪಧಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಮೊದಲು ಪಕ್ಷ ಉದ್ಘಾಟನೆಗೊಂಡು ಅಲ್ಲಿ ಜನರ ನಿರೀಕ್ಷೆ ಏನಿದೆ ಎಂಬುದನ್ನು ತಿಳಿದುಕೊಂಡು ಮುಂದಿನ ತೀರ್ಮಾನ
ತೆಗೆದುಕೊಳ್ಳುತ್ತೇನೆ ಎಂದರು.