Advertisement

MODI 3 ; ಜೂನ್‌ನಿಂದ ನಮ್ಮ 3ನೇ ಅವಧಿ ಆರಂಭ: ಪ್ರಧಾನಿ ಮೋದಿ

11:56 PM Feb 26, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಒಂದೇ ದಿನ ದೇಶಾದ್ಯಂತ 41 ಸಾವಿರ ಕೋಟಿ ರೂ. ವೆಚ್ಚದ ಬರೋಬ್ಬರಿ 2 ಸಾವಿರ ರೈಲ್ವೇ ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿದ್ದಾರೆ. ಜತೆಗೆ, ಇದು “ನವ ಭಾರತ’ದ ಕಾರ್ಯವೈಖರಿಗೆ ಸಾಕ್ಷಿ ಎಂದೂ ಅವರು ಬಣ್ಣಿಸಿದ್ದಾರೆ.

Advertisement

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಡಿರುವ ವಿವಿಧ ಯೋಜನೆಗಳಿಗೆ ವರ್ಚುವಲ್‌ ಆಗಿ ಚಾಲನೆ ನೀಡಿ ಮಾತನಾಡಿದ ಮೋದಿ, “ಇಂದಿನ ಕಾರ್ಯಕ್ರಮವು ನವ ಭಾರತದ ಕಾರ್ಯವೈಖರಿ ಮತ್ತು ಕಾರ್ಯನೀತಿಗೆ ಸಾಕ್ಷಿಯಾಗಿದೆ. ಈಗ ಭಾರತವು ಹಿಂದೆಂದೂ ಕಂಡಿರದಂಥ ವೇಗದಲ್ಲಿ ಮತ್ತು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದೆ ಮತ್ತು ಅಷ್ಟೇ ವೇಗವಾಗಿ ಅದನ್ನು ಸಾಕಾರಗೊಳಿಸುತ್ತಿದೆ’ ಎಂದಿದ್ದಾರೆ.

ನಿಮ್ಮ ಕನಸುಗಳೇ ನನ್ನ ಸಂಕಲ್ಪ
ಅಭಿವೃದ್ಧಿ ಹೊಂದಿದ ಭಾರತವು ದೇಶದ ಯುವಜನರ ಕನಸಾಗಿದೆ. ಭವಿಷ್ಯದಲ್ಲಿ ಭಾರತವು(ವಿಕಸಿತ ಭಾರತ) ಯಾವ ರೂಪ ಪಡೆಯಬೇಕು ಎಂಬುದನ್ನು ನಿರ್ಧರಿಸುವವರು ಇವರೇ ಆಗಿದ್ದಾರೆ. ನಾನು ದೇಶದ ಯುವಜನತೆಗೆ ಹೇಳುವುದಿಷ್ಟೆ- ನಿಮ್ಮ ಕನಸುಗಳೇ ನನ್ನ ಸಂಕಲ್ಪ. ನಿಮ್ಮ ಕನಸುಗಳು, ನಿಮ್ಮ ಪರಿಶ್ರಮ ಮತ್ತು ಮೋದಿಯ ಸಂಕಲ್ಪವೇ ವಿಕಸಿತ ಭಾರತದ ಗ್ಯಾರಂಟಿಯಾಗಿದೆ ಎಂದು ಮೋದಿ ನುಡಿದಿದ್ದಾರೆ.

ಜೂನ್‌ನಿಂದ ನಮ್ಮ 3ನೇ ಅವಧಿ ಆರಂಭ: ಮೋದಿ
ನಮ್ಮ ಸರಕಾರದ 3ನೇ ಅವಧಿಯು ಜೂನ್‌ನಲ್ಲಿ ಆರಂಭವಾಗಲಿದೆ. ಆದರೆ ನಮ್ಮ ಕೆಲಸದ ವೇಗ ಮತ್ತು ಪ್ರಮಾಣವು ದೇಶವಾಸಿಗಳನ್ನು ಅಚ್ಚರಿಗೆ ನೂಕಿದೆ. ಕಳೆದ 10 ವರ್ಷಗಳಲ್ಲಿ ನವಭಾರತ ನಿರ್ಮಾಣ ಆಗುತ್ತಿರುವುದನ್ನು ಜನ ನೋಡುತ್ತಿದ್ದಾರೆ ಎಂದೂ ಹೇಳುವ ಮೂಲಕ ಮೋದಿಯವರು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರವಿವಾರ ನಡೆದ ಮನ್‌ ಕೀ ಬಾತ್‌ನಲ್ಲೂ ಅವರು ಇದೇ ಮಾತುಗಳನ್ನಾಡಿದ್ದರು.

ಯಾವ್ಯಾವ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ?
ಅಮೃತ ಭಾರತ ಸ್ಟೇಷನ್‌ ಯೋಜನೆ ಅನ್ವಯ 553 ನಿಲ್ದಾಣಗಳ ಪುನರಾಭಿವೃದ್ಧಿಗೆ ಶಿಲಾನ್ಯಾಸ
24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,500 ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ನಿರ್ಮಾಣಕ್ಕೆ ಶಿಲಾನ್ಯಾಸ: 21,520 ಕೋಟಿ ರೂ. ವೆಚ್ಚ
19 ಸಾವಿರ ಕೋಟಿ ರೂ. ವೆಚ್ಚದಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ ಅಮೃತ ಭಾರತ ಸ್ಟೇಷನ್‌ಗಳ ಮರು ಅಭಿವೃದ್ಧಿ
ಗುರುಗ್ರಾಮ ರೈಲ್ವೇ ನಿಲ್ದಾಣ ಮೇಲ್ದರ್ಜೆ
ಗೇರಿಸುವ ಕಾಮಗಾರಿಗೆ ಶಿಲಾನ್ಯಾಸ (ಮೊದಲ ಹಂತಕ್ಕೆ 295 ಕೋಟಿ ರೂ. ವೆಚ್ಚ)
ಉತ್ತರಪ್ರದೇಶದಲ್ಲಿ 385 ಕೋಟಿ ರೂ. ವೆಚ್ಚದಲ್ಲಿ ಮರುನವೀಕರಣಗೊಂಡಿರುವ ಗೋಮತಿ ನಗರ ಸ್ಟೇಷನ್‌ ಉದ್ಘಾಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next