Advertisement

ಎಲೆಮರೆಯಂತಿರುವ ಸಾಧಕರಿಗೆ ಪ್ರಶಸ್ತಿ ನೀಡಿ

11:33 AM Dec 17, 2018 | |

ಮೈಸೂರು: ವಚನಕಾರರು ಹಾಗೂ ವಚನಗಳ ವಿಷಯದಲ್ಲಿ ಎಲೆ ಮರೆಯ ಕಾಯಂತಿರುವವರನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕಿದೆ ಎಂದು ಸಾಹಿತಿ ಡಾ. ಮಳಲಿ ವಸಂತಕುಮಾರ್‌ ಆಗ್ರಹಿಸಿದರು.

Advertisement

ಮೈಸೂರು ಆರ್ಟ್‌ ಗ್ಯಾಲರಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ದಶಮಾನೋತ್ಸವ ಪ್ರಯುಕ್ತ ಭಾನುವಾರ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದ್ದ ಕಲಾ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ “ಸಾಧಕರ ಸವಿಹೆಜ್ಜೆ’ ಮತ್ತು “ಕಲಾನ್ವೇಷಕ ತ್ರಯರು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಲಾವಿದ ಎಲ್‌.ಶಿವಲಿಂಗಪ್ಪ ಅವರು ವಚನಕಾರರು ಹಾಗೂ ವಚನಗಳ ತಿರುಳಿಗೆ ಪೂರಕವಾಗಿ ಚಿತ್ರ ರಚಿಸಿದ ಶಿವಲಿಂಗಯ್ಯ ಅವರ ಸಾಧನೆ ಎಲ್ಲರೂ ಮೆಚ್ಚುವಂತದ್ದು. ವಚನಗಳಿಗೆ ಚಿತ್ರರೂಪ ನೀಡುವ ವಿಶಿಷ್ಟ ಕಲೆ ಅವರಿಗಿದ್ದು, ತನ್ನ ಮನೆಯನ್ನೇ ಕಲಾ ಗ್ಯಾಲರಿಯಾಗಿ ಮಾಡಿದ್ದಾರೆ. ಹೀಗೆ ಎಲೆ ಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಿದೆ ಎಂದರು.

ವೇದಿಕೆ ಕಲ್ಪಿಸಿ: ಮೈಸೂರು ಆರ್ಟ್‌ ಗ್ಯಾಲರಿ ಸಂಸ್ಥಾಪಕ ಎಲ್‌.ಶಿವಲಿಂಗಯ್ಯ ಮಾತನಾಡಿ, ಸಂಗೀತ, ನೃತ್ಯ ಮತ್ತು ನಾಟಕಗಳಂತ ಕಲೆಗೆ ಸುಸಜ್ಜಿತ ವ್ಯವಸ್ಥೆ ಇರುವ ಕಟ್ಟಡಗಳು ಮೈಸೂರಿನಲ್ಲಿವೆ. ಆದರೆ, ಚಿತ್ರ ಮತ್ತು ಶಿಲ್ಪ ಕಲೆ ಪ್ರದರ್ಶನಕ್ಕೆ ಸರಿಯಾದ ವೇದಿಕೆ ಇಲ್ಲದಂತಾಗಿದ್ದು, ಸರ್ಕಾರದ ಒಡೆತನದಲ್ಲಿರುವ ಕಲಾ ಗ್ಯಾಲರಿಗಳು ವರ್ಷಕ್ಕೊಮ್ಮೆ ಬಾಡಿಗೆ ಏರಿಕೆ ಮಾಡುತ್ತಿರುವುದರಿಂದ ಕಲಾವಿದರಿಗೆ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಚಿತ್ರಕಲೆಯ ಆಕರ್ಷಣೆ: ದಶಮಾನೋತ್ಸವದ ಅಂಗವಾಗಿ ಕಲಾಮಂದಿರದ ಸುಚಿತ್ರ ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿದ್ದ ಕಲಾಕೃತಿ ಮತ್ತು ಚಿತ್ರಕಲೆಗಳು ಅತ್ಯಂತ ಆಕರ್ಷಣೀಯವಾಗಿತ್ತು. ಮೈಸೂರು ಆರ್ಟ್‌ ಗ್ಯಾಲರಿ ಅಧ್ಯಕ್ಷ ಎಲ್‌. ಶಿವಲಿಂಗಪ್ಪ ಅವರ ಚಿತ್ರಕಲೆ ಸೇರಿದಂತೆ ಆರ್ಟ್‌ ಗ್ಯಾಲರಿ ವತಿಯಿಂದ ಸಾಧಕರೊಂದಿಗೆ ಸಂವಾದ ನಡೆಯಿತು.

Advertisement

14 ಸಾಧಕರ ನೂರಾರು ವೈವಿಧ್ಯಮಯ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸಿತು. ಹಳ್ಳಿಯ ಸೊಬಗು, ಪ್ರಕೃತಿ ಸೌಂದರ್ಯ ಹಾಗೂ ಜ್ಞಾನಪೀಠ ಪುರಸ್ಕೃತರ ಚಿತ್ರಕಲೆ, ನವಿಲುಗಳ ಕಲಾಕೃತಿ, ದೊಡ್ಡ ಗಡಿಯಾರದ ಆಕೃತಿ, ಮತ್ಸೆ ಕನ್ಯೆ ಮತ್ತು ಶೃಂಗಾರ ಕನ್ಯೆಯರ ಕಲಾಕೃತಿಗಳು ನೋಡುಗರ ಮನತಣಿಸಿತು. 

ಸನ್ಮಾನ: ಸಮಾರಂಭದ ಅಂಗವಾಗಿ ಕಲಾಪೋಷಕ ಯು.ಜಿ.ಶೆಣೈ, ರಾಜೇಶ್ವರಿ ವಸ್ತ್ರಾಲಂಕಾರದ ಮುಖ್ಯಸ್ಥ ಬಿ.ಎಂ.ರಾಮಚಂದ್ರ, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಆರ್ಟ್‌ ಗ್ಯಾಲರಿಯ ಕಾರ್ಯದರ್ಶಿ ಡಾ. ಜುಮುನಾ ರಾಣಿ ಮಿರ್ಲೆ, ಸಮಾಜ ಸೇವಕ ಕೆ.ರಘುರಾಂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next