ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಹುಬ್ಬಳ್ಳಿ ತಾಲೂಕು ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಹೊಂದಲಿದ್ದು, ಇಂತಹ ಸೌಕರ್ಯ ಇರುವ ದೇಶದ ಮೊದಲ ನ್ಯಾಯಾಲಯ ಕಟ್ಟಡವಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಹೇಳಿದರು.
ಮಂಗಳವಾರ ಇಲ್ಲಿನ ವಿದ್ಯಾನಗರದ ಎಂ. ತಿಮ್ಮಸಾಗರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ವೀಕ್ಷಿಸಿದ ನಂತರ ಮಾತನಾಡಿದ ಅವರು, 5 ಎಕರೆ 15 ಗುಂಟೆ ಜಾಗದಲ್ಲಿ ಅಂದಾಜು 129 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ ಸುಸುಜ್ಜಿತ ಕಟ್ಟಡವು 24525 ಚ.ಮೀ ವಿಸ್ತೀರ್ಣದಲ್ಲಿ ಬಿ+ಜಿ+5 ಅಂತಸ್ತು ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ.
ಕಟ್ಟಡದ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇಲೆಕ್ಟ್ರಿಕಲ್ ವರ್ಕ್, ಹೀಟಿಂಗ್ ವೆಂಟಿಲೇಟರ್ ಎಸಿ, ಲೈಟಿಂಗ್, ಕಟ್ಟಡ ನಿರ್ವಹಣಾ ವ್ಯವಸ್ಥೆ ಸೇರಿದಂತೆ ಇನ್ನಿತರೆ ಕೆಲಸ ಬಾಕಿಯಿದೆ. ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸಮಯ ನಿಗದಿ ಪಡಿಸಲಾಗಿದೆ ಎಂದರು. ಕಾಮಗಾರಿಯನ್ನು ಹೈದರಾಬಾದ್ ನ ಕೆಎಂವಿ ಪ್ರೊಜೆಕ್ಟ್ ಸಂಸ್ಥೆಯವರು ಕೈಗೆತ್ತಿಕೊಂಡಿದ್ದಾರೆ.
2014ರ ಮಾರ್ಚ್‌ನಲ್ಲಿ ಆರಂಭವಾದ ಈ ಕಾಮಗಾರಿಯನ್ನು 2016ರಲ್ಲಿ ಮುಗಿಸಲು ಸೂಚಿಸಲಾಗಿತ್ತು. ಅದಕ್ಕಾಗಿ 1ನೇ ಹಂತದಲ್ಲಿ 75 ಕೋಟಿ ರೂ. ಬಿಡುಗಡೆಯಾಗಿತ್ತು. ಕೇಂದ್ರೀಕೃತ ಎಸಿ ಸೇರಿಸಿದ ಮೇಲೆ ಪರಿಷ್ಕೃತವಾಗಿ 98 ಕೋಟಿ ರೂ. ಆಯಿತು. 20 ಕೋರ್ಟ್ ಹಾಲ್, ಕಕ್ಷಿದಾರರ ವಿಶ್ರಾಂತಿ ಕೊಠಡಿ ಮತ್ತು ಕುಳಿತುಕೊಳ್ಳಲು ಸ್ಥಳ, ವಿಶಾಲವಾದ ವಾಹನ ನಿಲುಗಡೆ ಸೌಲಭ್ಯ ಸೇರಿದಂತೆ ಇನ್ನಿತರೆ ಎಲ್ಲ ಸೌಕರ್ಯ ಸಂಕೀರ್ಣದಲ್ಲಿದೆ.
1ನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. 2ನೇ ಹಂತದಲ್ಲಿ 24 ಕೋಟಿ ರೂ. ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿ ವಕೀಲರ ಸಂಘದ ಕಟ್ಟಡವನ್ನು ಈಗ ನಿರ್ಮಿಸಲಾದ ಕ್ಯಾಂಟೀನ್ ಕಟ್ಟಡದ ಮೇಲೆ ನಿರ್ಮಿಸಲಾಗುವುದು. ಅದಕ್ಕಾಗಿ 9 ಕೋಟಿ ರೂ. ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ.
ಕೋರ್ಟ್ ಸಂಕೀರ್ಣ ಜೊತೆ ವಕೀಲರ ಸಂಘವು ಉದ್ಘಾಟನೆಗೊಂಡರೆ ಪರಿಪೂರ್ಣ ನ್ಯಾಯಾಲಯ ಸಂಕೀರ್ಣವಾಗಲಿದೆ. ಆದಷ್ಟು ಬೇಗ ಕಟ್ಟಡ ಉದ್ಘಾಟನೆಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಧೀಶರೊಂದಿಗೆ ಸಮಾಲೋಚನೆ ಮಾಡಲಾಗುವುದು. ಉದ್ಘಾಟನೆ ದಿನ ನಿಗದಿಗೆ ಮುಂದಾಗಲಾಗುವುದು ಎಂದರು.