ವರದಿ : ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಲ್ಲಿ ಪೊಲೀಸರು ಪಾತ್ರ ಪ್ರಮುಖವಾಗಿದ್ದು, ದಿನ ಕಳೆದಂತೆ ಇಲಾಖೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಡಳಿತ ಇತರೆ ಇಲಾಖೆಯ ಸಮವಸ್ತ್ರಧಾರಿ ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಬಳಕೆಗೆ ಮುಂದಾಗಿದೆ.
ದಿನ ಕಳೆದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರ, ತಾಲೂಕು ಕೇಂದ್ರಗಳಲ್ಲಿ ಹೆಚ್ಚಾಗಿದ್ದ ಸೋಂಕು ಹಳ್ಳಿಗೂ ಒಕ್ಕರಿಸಿದೆ. ಇಂತಹ ಸಂದರ್ಭದಲ್ಲಿ ಸೋಂಕು ಹರಡಂತೆ ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಿನ ಕಾರ್ಯವಾಗಿದೆ. ಸೋಂಕು ನಿಯಂತ್ರಣಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಪರಿಣಾಮಕಾರಿಯಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲನೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕಾಗಿ ವಿವಿಧ ಇಲಾಖೆಯಲ್ಲಿರುವ ಸಮವಸ್ತ್ರಧಾರಿ ಸಿಬ್ಬಂದಿ ನಿಯೋಜಿಸುವುದು ಅಗತ್ಯವಾಗಿರುವ ಕಾರಣಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 26 ಪದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿವಿಧ ಇಲಾಖೆ ಸಿಬ್ಬಂದಿ ನಿಯೋಜನೆಗೆ ಮುಂದಾಗಿದ್ದಾರೆ.
ಪೊಲೀಸರಲ್ಲಿ ಹೆಚ್ಚುತ್ತಿದೆ ಸೋಂಕು: ಕಳೆದೊಂದು ತಿಂಗಳಿಂದ ಮಹಾನಗರ ಪೊಲೀಸ್ ಕಮೀಷ°ರೇಟ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಲಾಕ್‌ಡೌನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೆಕ್‌ಪೋಸ್ಟ್, ಗ್ರಾಮಗಳಲ್ಲಿ ಜಾಗೃತಿ ಕಾರ್ಯ ಸೇರಿದಂತೆ ಇಲಾಖೆಯ ಕರ್ತವ್ಯದಲ್ಲಿದ್ದಾರೆ. ಆದರೆ ಕಮೀಷ°ರೇಟ್ ವ್ಯಾಪ್ತಿಯಲ್ಲಿ 121, ಜಿಲ್ಲಾ ವ್ಯಾಪ್ತಿಯಲ್ಲಿ 57 ಪೊಲೀಸರು ಸೋಂಕಿತರಾಗಿದ್ದಾರೆ. ಠಾಣೆಯಲ್ಲಿ 506 ಸಿಬ್ಬಂದಿ ಎಂದರೂ ವಿವಿಧ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸೋಂಕಿತ ಸಿಬ್ಬಂದಿ ಕನಿಷ್ಠ 15-30 ದಿನಗಳ ಕಾಲ ವಿಶ್ರಾಂತಿ ಅಗತ್ಯವಿದ್ದು, ಹೀಗಾಗಿ ಉಳಿದ ಸಿಬ್ಬಂದಿ ಮೇಲೆ ಒತ್ತಡ ಬೀಳಬಾರದು. ಅವರ ಆರೋಗ್ಯದ ಹಿತ ಕಾಪಾಡುವುದು, ಲಾಕ್‌ಡೌನ್ ಕಾರ್ಯಕ್ಕೆ ಧಕ್ಕೆಯಾಗಬಾರದೆನ್ನುವ ಕಾರಣಕ್ಕೆ ಇತರೆ ಇಲಾಖೆ ಸಮವಸ್ತ್ರ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಪೊಲೀಸ್ ಇಲಾಖೆ ಸುಪರ್ದಿಗೆ: ವಾಯವ್ಯ ಸಾರಿಗೆ ಸಂಸ್ಥೆಯಿಂದ ಹು.ಧಾ.ನಗರ-ಗ್ರಾಮೀಣ ಹಾಗೂ ಧಾರವಾಡ ವಿಭಾಗದಿಂದ 40 ವರ್ಷದೊಳಗಿನ 126 ಪುರುಷ ಸಿಬ್ಬಂದಿಯನ್ನು ಜಿಲ್ಲಾಡಳಿತ ಪಡೆದು ಹು-ಧಾ ಕಮಿಷ°ರೇಟ್‌ಗೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸುಪರ್ದಿಗೆ ನೀಡಲಾಗಿದೆ. ಸಿಬ್ಬಂದಿ ಕೊರತೆ ಇರುವ ಆಯಾ ಠಾಣೆಗೆ ನಿಯೋಜಿಸಲಾಗಿದೆ. ಸಿಬ್ಬಂದಿಗೆ ಊಟ-ಭತ್ಯೆಯನ್ನು ಸಂಬಂಧಪಟ್ಟ ಅ ಧಿಕಾರಿಗಳು, ಇಲಾಖೆಗಳು ಭರಿಸಬೇಕು. ಸಿಬ್ಬಂದಿಯನ್ನು ಕೇವಲ ಕೋವಿಡ್ ಕರ್ತವ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕು. ಸಿಬ್ಬಂದಿಗೆ ಲಸಿಕೆ ಕೊಡಿಸಬೇಕೆಂದು ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಮೊದಲ ಹಂತದಲ್ಲಿ ವಿವಿಧ ಇಲಾಖೆಯಿಂದ ಪಡೆದ ಸಿಬ್ಬಂದಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆಯ ಇಬ್ಬರು ವಲಯ ಅರಣ್ಯಾಧಿಕಾರಿಗಳು, ಮೋಜಣಿದಾರ ಹಾಗೂ ಅರಣ್ಯ ರಕ್ಷಕ ಸೇರಿ 33 ಸಿಬ್ಬಂದಿ, ಅಬಕಾರಿ ಇಲಾಖೆಯಿಂದ 12 ಅಬಕಾರಿ ಪೊಲೀಸರನ್ನು ಲಾಕ್ ಡೌನ್ ಕರ್ತವ್ಯಕ್ಕೆ ಪಡೆಯಲಾಗಿದೆ.