ಸುನಾದ ಸಂಗೀತ ಕಲಾ ಶಾಲೆಯ ಕೊಯಿಲ ಶಾಖೆಯು ತನ್ನ ವಾರ್ಷಿಕ ಸಂಗೀತೋತ್ಸವವನ್ನು ನ.19 ರಂದು ವಿಜೃಂಭಣೆಯಿಂದ ಆಚರಿಸಿಕೊಂಡಿತು. ಸಂಗೀತ ಶಾಲೆಯ ನಿರ್ದೇಶಕರಾದ ವಿ| ಕಾಂಚನ ಈಶ್ವರ ಭಟ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರು ವಂದನೆಯ ಬಳಿಕ “ಸುನಾದ’ದ ಶಿಷ್ಯರಿಂದ ಸಂಗೀತ ಸೇವೆ ನಡೆಯಿತು. ಸಂಜೆ ಮೇರು ಕಲಾವಿದ ವಿ| ಒ. ಎಸ್. ತ್ಯಾಗರಾಜನ್, ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.
ಕಲ್ಯಾಣಿ ರಾಗದ ವನಜಾಕ್ಷಿ ವರ್ಣದೊಂದಿಗೆ ಕಛೇರಿ ಯನ್ನು ಆರಂಭಿಸಿದ ಕಲಾವಿದರು ಅನಂತರ ತ್ಯಾಗರಾಜರ ಜಯಮನೋಹರಿ ರಾಗದ ನೀ ಭಕ್ತಿ ಭಾಗ್ಯಸುಧಾ ಕೃತಿಯನ್ನು ನಿರೂಪಿಸಿದರು. ಮುಂದೆ ಬೃಂದಾವನ ಸಾರಂಗದ ಕಮಲಾಪ್ತ ಕುಲ ಭಾವಸ್ಪರ್ಶಿಯಾಗಿ ಹೊರಹೊಮ್ಮಿತು. ಮೋಹನ ರಾಗದ ಆಲಾಪನೆಯೊಂದಿಗೆ ಎವರೂರ ಕೃತಿಯು ಪ್ರಸ್ತುತಗೊಂಡಿತು. ಮುಂದೆ ಅಸಾವೇರಿ ರಾಗದ ಲೇಖನಾ ನಿನ್ನು ಹಾಗೂ ಸಾರಮತಿ ರಾಗದ ಮೋಕ್ಷಮುಗಲದಾ ಕೃತಿಯು ಹೃದ್ಯವಾಗಿ ಮೂಡಿಬಂತು. ಅನಂತರ ಯದುಕುಲ ಕಾಂಭೋಜಿಯ ಹೆಚ್ಚರಿಕೆಗಾರಾರ ನಿರೂಪಿತವಾಯಿತು.
ಪ್ರಧಾನ ರಾಗವಾಗಿ ತೋಡಿಯ ಸವಿಸ್ತಾರವಾದ ಆಲಾಪನೆಯು ಕಲಾವಿದರ ಕಲಾಪ್ರೌಢಿಮೆಯನ್ನು ಎತ್ತಿ ತೋರಿಸಿತು. ತೋಡಿಯ ಸ್ವರ ಸಂಚಾರ, ರಾಗ ಭಾವ ಹಾಗೂ ಒಳಹು ಹೊರಹುಗಳು ಸ್ಪಷ್ಟವಾಗಿ ನಿರೂಪಿಸಿದ ಪರಿ ಮನೋಜ್ಞವಾಗಿತ್ತು. ಕದ್ದನು ವಾರಿಕಿ ಕೃತಿಯು ವಿದ್ವತೂ³ರ್ಣವಾಗಿ ಮೂಡಿಬಂದು ನೆರವಲ್ ಹಾಗೂ ಸ್ವರ ಪ್ರಸ್ತಾರದೊಂದಿಗೆ ಅಲಂಕೃತಗೊಂಡಿತು. ಕೃತಿಯ ಭಾವಾರ್ಥ ವಿವರಿಸಿದುದು ಪ್ರೇಕ್ಷಕರಿಗೆ ಆನಂದವನ್ನುಂಟುಮಾಡಿತು.
ವಯಲಿನ್ ಸಾಥಿಯಾಗಿ ಕಲಾವಿದರನ್ನು ಅನುಸರಿಸುತ್ತಾ ಬಹಳ ಸಮರ್ಥವಾಗಿ ಕಾರ್ಯಕ್ರಮವನ್ನು ಕಳೆಗಟ್ಟಿಸಿದವರು ವಿ| ಟಿ. ಎಚ್. ಸುಬ್ರಹ್ಮಣ್ಯನ್ ತ್ರಿಶೂರ್. ಸುಂದರವಾದ ಲಯವಿನ್ಯಾಸಗಳು, ಮತ್ತೆ ಮತ್ತೆ ಕಿವಿಯಲ್ಲಿ ಗುನುಗುನಿಸುವ ಮೃದಂಗದ ನಾದ ಹಾಗೂ ತನಿಯಲ್ಲಿನ ವಿಶಿಷ್ಟತೆಯ ಮೂಲಕ ಕಛೇರಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಲಯಕಲಾವಿದರುಗಳಾದ ವಿ| ಕಾಂಚನ ಎ. ಈಶ್ವರ ಭಟ್ ಹಾಗೂ ವಿ| ವಿ. ಎಸ್. ರಮೇಶ್ ಮೈಸೂರು ಇವರದು. ಅನಂತರ ನೀನೇ ಅನಾಥ ಬಂಧು, ತುಂಗಾತೀರ ವಿರಾಜಂ ದೇವರನಾಮಗಳು ಭಾವಪೂರ್ಣವಾಗಿ ಮೂಡಿಬಂದವು.
ಸುನಾದಕ್ಕೀಗ 25ರ ಹರೆಯ. ತೀರಾ ಗ್ರಾಮೀಣ ಪ್ರದೇಶ ಉಪ್ಪಿನಂಗಡಿ ಸನಿಹದ ಕುಂತೂರು ಎಂಬಲ್ಲಿ ಹುಟ್ಟಿದ “ಸುನಾದ’ವು ಈಗ ಹೆಮ್ಮರವಾಗಿ ನಿಂತಿದೆ. ವಿ| ಕಾಂಚನ ಎ. ಈಶ್ವರ ಭಟ್ ಅವರ ಸಮರ್ಥ ಸಾರಥ್ಯ, ನಿಷ್ಠೆ, ಧ್ಯೇಯ, ತ್ಯಾಗದ ಫಲವಾಗಿ ಹೊರಹೊಮ್ಮಿದ “ಸುನಾದ’ ಮುಂಬರುವ ಎಪ್ರಿಲ್‌ನಲ್ಲಿ ತನ್ನ ರಜತ ಮಹೋತ್ಸವವನ್ನು “ಸುನಾದ ರಜತ ಕಲರವ’ವಾಗಿ ಆಚರಿಸಿಕೊಳ್ಳಲಿದೆ. ಇದರ ಮುನ್ನುಡಿ ಯಾಗಿ “ಲಾಂಛನ’ದ ಲೋಕಾರ್ಪಣೆಯನ್ನು ವಿ| ಒ. ಎಸ್. ತ್ಯಾಗರಾಜನ್ ನೆರವೇರಿಸಿದರು. ವಿ| ಟಿ. ಎಚ್. ಸುಬ್ರಹ್ಮಣ್ಯನ್, ವಿ| ಕಾಂಚನ ಎ. ಈಶ್ವರ ಭಟ್, ವಿ| ವಿ. ಎಸ್. ರಮೇಶ್ ಹಾಗೂ ಸುನಾದದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಟಿ. ನಾರಾಯಣ ಭಟ್ ಹಾಗೂ ಮಾಲತಿ ಡಿ. ಕಾರ್ಯಕ್ರಮ ನಿರೂಪಿಸಿದರು. ಸಂಗೀತಾಭಿಮಾನಿಗಳ ಚಿತ್ತದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮೂಡಿಬಂದುದು ಕಾರ್ಯಕ್ರಮದ ಹೆಗ್ಗಳಿಕೆ.
ಧನ್ಯತಾ