ಹೈದರಾಬಾದ್ : ನಿನ್ನೆ ಭಾನುವಾರ ಹಾಸ್ಟೆಲ್ ಶೌಚಾಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡನೆನ್ನಲಾದ ವಿದ್ಯಾರ್ಥಿ ಇ ಮುರಳಿ ಎಂಬಾತನ ಶವವನ್ನು ಒಯ್ಯಲು ಪೊಲೀಸರಿಗೆ ಬಿಡದ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಂದು ಸೋಮವಾರ ಉಗ್ರ ಪ್ರತಿಭಟನೆ ನಡೆಸಿದರು.
ಮೊದಲ ವರ್ಷದ ಎಂಎಸ್ಸಿ ಫಿಸಿಕ್ಸ್ ವಿದ್ಯಾರ್ಥಿಯಾಗಿರುವ ಮುರಳಿಯ ಶವ ಹಾಸ್ಟೆಲ್‌ನ ಶೌಚಾಲಯದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
“ನಾನೆಂದೂ ಈ ಹಿಂದೆ ಪರೀಕ್ಷೆಯಲ್ಲಿ ಫೇಲಾದುದಿಲ್ಲ. ಹಾಗೆಯೇ ನಾನು ಈಗಲೂ ಪರೀಕ್ಷೆಯಲ್ಲಿ ಫೇಲಾಗಲು ಬಯಸುವುದಿಲ್ಲ’ ಎಂದು ಮರಳಿ ಬರೆದಿಟ್ಟಿದ್ದ ಎನ್ನಲಾದ ಡೆತ್ ನೋಟ್, ಶವ ನೇತಾಡುತ್ತಿದ್ದ ಸ್ಥಳದಲ್ಲೇ ಪೊಲೀಸರಿಗೆ ಸಿಕ್ಕಿದೆ.
ವಿದ್ಯಾರ್ಥಿ ಮುರಳಿಗೆ ಪರೀಕ್ಷೆ ಸಂಬಂಧ ಮನೋ ಖನ್ನತೆ ಇತ್ತೆಂದು ಕಾಣುತ್ತಿದೆ; ನಾವು ಆತನ ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ ಉಸ್ಮಾನಿಯಾ ವಿವಿ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿಯ ನಾಯಕ ಹಾಗೂ ನಿರುದ್ಯೋಗಿ ಯುವ ಸಂಘದ ಅಧ್ಯಕ್ಷರಾಗಿರುವ ಕೆ ಮಾನವತಾ ರಾಯ್ ಅವರು ಮಾತನಾಡುತ್ತಾ, “ಮುರಳಿ ನಿರುದ್ಯೋಗಿಯಾಗಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ; ಆತನ ಆತ್ಮಹತ್ಯೆಗೆ ಸರಕಾರವೇ ಹೊಣೆ. ಹಾಗಾಗಿ ಸರಕಾರ ಆತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು; ಇಲ್ಲದಿದ್ದರೆ ನಾವು ಇಲ್ಲಿಂದ ಆತನ ಪಾರ್ಥಿವ ಶರೀರವನ್ನು ಒಯ್ಯಲು ಪೊಲೀಸರಿಗೆ ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಮೃತ ವಿದ್ಯಾರ್ಥಿ ಮುರಳಿಯು ಸಿದ್ದಿಪೆಟ್ ಜಿಲ್ಲೆಯ ದೌಲಾಪುರ ಗ್ರಾಮದವನಾಗಿದ್ದಾನೆ.