Advertisement

ಓಶೋ ರಜನೀಶ್ ಬರಹ; ಹತಾಶೆಯೆಂಬ ಫಲಿತಾಂಶದ ಆಸುಪಾಸಿನಲ್ಲಿ

11:39 AM Jul 23, 2023 | Team Udayavani |

ಪ್ರಿಯ ಓಶೋ

Advertisement

ಪ್ರಪಂಚದಲ್ಲಿ ಏಕಿಷ್ಟು ಹತಾಶೆ?

ಏಕೆಂದರೆ! ಇಲ್ಲಿ ಅಷ್ಟು ನಿರೀಕ್ಷೆಯಿದೆ.

ಒಮ್ಮೆ ನಿರೀಕ್ಷೆ ಮೊಳಕೆಯೊಡೆಯಿತೆಂದರೆ ಅಲ್ಲಿ ಹತಾಶೆ ಸಹಜ. ನೋಡಿ, ನಿರೀಕ್ಷೆಯಿಲ್ಲವಾದರೆ ಹತಾಶೆಯೂ ಇಲ್ಲ. ಈ ಹತಾಶೆ ಎನ್ನುವುದು ಕೇವಲ ಒಂದು ಉಪ-ಉತ್ಪನ್ನವೆನ್ನುವುದನ್ನು ನೀವು ಬಹಳ ಮುಖ್ಯವಾಗಿ ಗಮನಿಸಬೇಕು. ಅಂದಹಾಗೆ ನೀವು ಹೆಚ್ಚು ನಿರೀಕ್ಷಿಸಿದಷ್ಟೂ ಮತ್ತಷ್ಟು ಹತಾಶೆಗೊಳಗಾಗುತ್ತೀರಿ ಎನ್ನುವ ವಿಷಯವನ್ನು ಎಂದಾದರೂ ಆಲೋಚಿಸಿ ದ್ದೀರಾ? ಒಮ್ಮೆ ಯೋಚಿಸಿ. ಅರಿವಾಗುತ್ತದೆ. ಹಾಗಾಗಿ ಹತಾಶೆಯೆನ್ನುವುದು ಸಮಸ್ಯೆಯೇ ಅಲ್ಲ. ಅದು ಕೇವಲ ಫಲಿತಾಂಶವೆನ್ನುವುದು, ನಿರೀಕ್ಷೆಯ ನೆರಳೆನ್ನುವುದು ನಿಮಗೆ ತಿಳಿದಿರಲಿ. ನಿಜ ಹೇಳಬೇಕಾದರೆ ನಿರೀಕ್ಷೆಯ ಬಗ್ಗೆಯೇ ನೀವು ಸದಾ ಆಲೋಚಿಸಬೇಕಾಗುತ್ತದೆ.

ಇದನ್ನು ಗಮನಿಸಿ. ನೀವೊಂದು ಪ್ರಶ್ನೆ ಕೇಳುತ್ತೀರಿ. ನಿಮಗೆ ಖಚಿತವಾಗಿ ಉತ್ತರ ದೊರೆಯುತ್ತದೆ. ಆಗ ತೃಪ್ತಿಯೆನ್ನುವುದು ತನ್ನಂತಾನೇ ಘಟಿಸುತ್ತದೆ. ಆದರೆ ನಿಮ್ಮ ಪ್ರಶ್ನೆಗೆ ನಿರೀಕ್ಷೆ ಅಂಟಿತೆನ್ನಿ. ಆಗ ನಿಮಗೆ ಸಿಗುವ ಉತ್ತರ ನಿಮ್ಮನ್ನು ಹತಾಶರನ್ನಾಗಿಸುವುದು ಶತಸ್ಸಿದ್ಧ! ನೋಡಿ, ನಾವು ಮಾಡುವ ಎಲ್ಲ ಕೆಲಸವನ್ನೂ, ನಾವು ನಿರೀಕ್ಷೆಗಳೊಂದಿಗೇ ಮಾಡುತ್ತೇವೆ. ಉದಾಹರಣೆಗೆ ನಾನು ಯಾರನ್ನಾದರೂ ಪ್ರೀತಿಸಲು ಆರಂಭಿಸಿದ್ದೇನೆನ್ನಿ. ಆಗ ನನಗೇ ತಿಳಿಯದೆ ಒಂದು ನಿರೀಕ್ಷೆಯು ನನ್ನೊಳಗೆ ಪ್ರವೇಶಿಸುತ್ತದೆ. ನಾನು ಪ್ರತಿಯಾಗಿ ಎದುರಿನ ವ್ಯಕ್ತಿಯಿಂದ ಪ್ರೀತಿಯನ್ನು ನಿರೀಕ್ಷಿಸಲು ಪ್ರಾರಂಭಿ ಸುತ್ತೇನೆ. ನಾನೇ ಇನ್ನೂ ಪ್ರೀತಿಸಿಲ್ಲ, ಪ್ರೀತಿ ನನ್ನಲ್ಲಿನ್ನೂ ಬೆಳೆದೇ ಇಲ್ಲ, ಆಗಲೇ ನನ್ನಲ್ಲಿ ನಿರೀಕ್ಷೆ ಆರಂಭವಾಗಿದೆ! ಅದು ಒಂದು ರೀತಿ ಇನ್ನೂ ಪ್ರಯಾಣವನ್ನೇ ಆರಂಭಿಸದ ಸ್ಥಿತಿ. ಆಗಲೇ ವಾಪಸ್ಸು ಬರುವ ಆಲೋಚನೆ ನಿಮ್ಮಲ್ಲಿ ಆರಂಭವಾದ ಹಾಗಾಗಿದೆ. ಇಡೀ ವಿಷಯವನ್ನು ನಾಶ ಮಾಡಲು ಅದಷ್ಟೇ ಸಾಕು. ಹಾಗಾಗಿ ಈ ಪ್ರೀತಿಯೆನ್ನುವುದು ಎಲ್ಲಕ್ಕಿಂತ ಹೆಚ್ಚು ಹತಾಶೆಯನ್ನು ಸೃಷ್ಟಿಸುತ್ತದೆ ಎನ್ನುವುದು. ಏಕೆಂದರೆ, ಅದು, ನಿರೀಕ್ಷೆಯ ಪರಾಕಾಷ್ಠೆ. ಅದರ ಅತ್ಯುತ್ಕೃಷ್ಟ ಸ್ಥಿತಿ! ಉನ್ಮತ್ತೋàತ್ತಮ ಅವಸ್ಥೆ! ಹಾಗಾಗಿ ನಿರೀಕ್ಷೆಯ ಭಾರವೇ ಸಾಕು.. ಪ್ರೀತಿಯೆನ್ನುವ ಸುಕೋಮಲ ಭಾವಕ್ಕೆ ನಿಮ್ಮ ಬಳಿಗೆ ಹರಿಯುವುದೇ ತ್ರಾಸದಾಯಕವಾಗುತ್ತದೆ. ಆಗ ಮುಂದೆ ನಿಂತವನಿಗೆ ನಿಮ್ಮ ಪ್ರೀತಿಯೆನ್ನುವುದು ಬಂಧ ನದ ಸಂಕಟ! ಕರ್ತವ್ಯದ ಯಾತನೆ! ಹೊರಲಾಗದ ಹೊರೆ! ಪ್ರೀತಿ ಕರ್ತವ್ಯವಾದರೆ, ಅದು ಬಂಧನವಾದರೆ ಅರಳುವ ಮೊಗ್ಗಿಗೆ ಉಸಿರಾಟದ ತೊಂದರೆ. ಕೊರಳಿನ ಬಿಗಿತ. ನಿಶ್ಚಿತವಾದ ಅಕಾಲ ಮೃತ್ಯು!

Advertisement

ಹೊರೆಯ ಗುಣವನ್ನು ನೀವು ಎಂದಾದರೂ ಗಮನಿಸಿದ್ದೀರೇನು? ಯಾವುದಾದರೂ ನಿಮಗೆ ಹೊರೆಯಾದ ಮರುಕ್ಷಣವೇ ಅದರ ಸ್ನಿಗ್ಧ ಸೌಂದರ್ಯ ಮರೆಯಾಗುವುದು. ಅಲ್ಲಿನ ಲವಲವಿಕೆ, ಸಂವೇದನೆಗಳು, ಅದರ ಮೂಲಕವಾದ ಕಾವ್ಯಸ್ಪಂದನೆ ಗಳೆಲ್ಲವೂ ಕಾಣೆಯಾಗುವವು. ಕಡೆಗೆ ನಿಮ್ಮಿಂದ ನಿರೀಕ್ಷೆಯ ಪ್ರೀತಿಯನ್ನು ಪಡೆದವರಿಗೆ ಅದರ ಜಡತ್ವದ ಅರಿವು. ಅದರ ಮೂಲಕ ಅವರಿಗೆ ಮರ್ತ್ಯಲೋಕದ ಅನುಭವ! ಅಯಾಚಿತ ಭಾವ-ಗರ್ಭಪಾತ! ಆಗ ಹತಾಶೆಯಲ್ಲದೇ ಇನ್ನೇನಾದರೂ ಉಳಿಯಲು ಸಾಧ್ಯ? ಪ್ರೀತಿಸಿದಿರೋ ಒಂದು ವಿಷಯವನ್ನು ನೀವು ಗಮನದಲ್ಲಿಟ್ಟುಕೊಳ್ಳಲೇ ಬೇಕು. ಅದು ಎಂದಿಗೂ ನಿಮಗೆ ಚೌಕಾಸಿಯಾಗಬಾರದು. ಅದರಿಂದೇನೋ ನೀವು ಪಡೆಯಲು ಬಯಸಬಾರದು. ಬದಲಿಗೆ ಪ್ರೀತಿಸುವುದಷ್ಟೇ ನಿಮ್ಮ ಆನಂದದ ಚರಮಭಾವ ವೆನ್ನುವುದು ನಿಮಗೆ ಅರ್ಥವಾಗಬೇಕು! ನೀವು ಕೇವಲ ನಿಮ್ಮ ಪ್ರೀತಿಸುವ ಸ್ಥೈರ್ಯಕ್ಕೆ ಕೃತಜ್ಞರಾಗಿರಬೇಕು. ಕೊಡುವುದಷ್ಟೇ! ಅದು ಏನಾದರೂ ಹಿಂತಿರುಗಿ ನೀಡಬಹುದಾ ಎಂಬ ಬಗ್ಗೆ ಸಂಪೂರ್ಣ ಮರೆತುಬಿಡಬೇಕು! ಈ ಕೊಸರಾಟವೆನ್ನುವುದು ನಿಮ್ಮಲ್ಲಿ ನಿಲ್ಲುತ್ತಾ ಬಂದಲ್ಲಿ ಹತಾಶೆಗೆ ಕೆಲಸ ಕಡಿಮೆಯಾಗುತ್ತಾ ಹೋಗುತ್ತದೆ.

ಹತಾಶೆ ಕಡಿಮೆಯಾಗುತ್ತಾ ಸಾಗಿದಲ್ಲಿ ಒಂದು ನಿರ್ವಾಜ್ಯ ಪ್ರೀತಿ ನಿಮ್ಮನ್ನು ಆವರಿಸಿಕೊ ಳ್ಳತೊಡಗುತ್ತದೆ. ಆಗ ನೀವು ಪರಮಸುಖವೊಂದರ ಕಡೆ ಮುಖಮಾಡಿ ನಿಲ್ಲುತ್ತೀರಿ! ಆನಂದದ ಉತ್ಕರ್ಷ ಸ್ಥಿತಿಯನ್ನು ಅನುಭವಿಸಬಲ್ಲವರಾಗುತ್ತೀರಿ. ನೆನಪಿಡಿ. ಇದು ಸರ್ವವ್ಯಾಪಿಯಾದ ಸೂತ್ರ..! ಇಲ್ಲಿ ಕೇವಲ ಅನುರಾಗವೆನ್ನುವುದು ಕೇವಲ ಒಂದು ನೆಪವಷ್ಟೇ!

ಗಮನಿಸಿ. ಈ ಜಗತ್ತು ಎಷ್ಟು ಹತಾಶೆಯಿಂದ ತುಂಬಿದೆಯೆಂದರೆ, ಹತಾಶರಾಗದವರನ್ನು ಇಲ್ಲಿ ಹುಡುಕುವುದೇ ಕಡುಕಷ್ಟ. ನೀವು ಸಂತರೆಂದು ಭಾವಿಸುವವರೇ ಇಲ್ಲಿ ಹತಾಶರಾಗಿದ್ದಾರೆ ಎನ್ನುವುದನ್ನು ಸಹ ನೀವು ಗಮನಿಸಬಹುದು. ಅವರು ಹತಾಶರಾಗಿರುವುದೂ ನಿಮ್ಮಂತಹ ಅನುಯಾಯಿಗಳ ಕಾರಣವೇ ಎನ್ನುವುದು ನಿಮಗೆ ಗೊತ್ತೇ! ಅವರು ಹೀಗಿರಬೇಕು, ಹಾಗಿರಬೇಕು, ಅವರು ಅದು ಮಾಡಬೇಕು, ಇದು ಮಾಡಬೇಕೆಂಬ ನಿಮ್ಮ ನಿರೀಕ್ಷೆಗಳ ಭಾರಕ್ಕೆ ಅವರು ಬಗ್ಗುವುದು ಅನಿವಾರ್ಯ! ನಿಮ್ಮ ನಿರೀಕ್ಷೆಗಳು ಅವರನ್ನು ಪರಿವರ್ತಿಸುತ್ತವೆ. ಸುಖ ಅವರನ್ನು ಹತಾಶರಾಗಿಸುತ್ತದೆ! ಸಂತತ್ವದಿಂದ ಹತಾಶೆಯತ್ತ ಅವರ ಚಿತ್ತದೃಷ್ಟಿ!

ಇನ್ನು, ತಾವು ಕ್ರಾಂತಿಕಾರರೆಂಬ ಅಮಲೇರಿದವರನ್ನು ಕೂಡಾ ನೀವು ಗಮನಿಸಬೇಕು. ಪ್ರಾಯಶಃ ಅವರಷ್ಟು ಹತಾಶರನ್ನು ನೀವು ಕಾಣಲು ಸಾಧ್ಯವೇ ಇಲ್ಲ. ಏಕೆಂದರೆ ಅವರ ನಿರೀಕ್ಷೆಗಳಿಗೆ ಪಾರವೇ ಇಲ್ಲ. ಅನುಕ್ಷಣವೂ ಅವರು ತಮ್ಮ ಆದರ್ಷಗಳು, ಧ್ಯೇಯಗಳ ಕುರಿತಂತೆಯೇ ಚಿಂತಿತರಾಗಿರುತ್ತಾರೆ. ಇಡೀ ವಿಶ್ವವು ತಮ್ಮ ಆದರ್ಶಗಳನ್ನು ಅನುಸರಿಸಬೇಕೆಂಬ ಮಹತ್ವದ ಹಂಬಲ ಅವರದ್ದಾಗಿರುತ್ತದೆ. ತಮ್ಮ ಅಣತಿಯಂತೆಯೇ ವಿಶ್ವವು ರೂಪಾಂತರಗೊಳ್ಳಬೇಕೆಂಬ ಮಹದಾಸೆ ಅವರದು.

ಅವರ ಆಲೋಚನಾ ಲಹರಿಗಳಂತೂ ಸಾಮಾಜಿಕ ಪರಿವರ್ತನೆಯ ಬಿರುಮಾರುತಗಳಾಗಿ ಪಲ್ಲವಿಸ ಬೇಕೆಂದು ಭಾವಿಸಿ ದಣಿಯುತ್ತಾರೆ. ಆದರೆ ಯಾರ ನಿರೀಕ್ಷೆಗಳು ಏನೇ ಇರಲಿ, ಜಗತ್ತು ತನ್ನದೇ ಲಯದಲ್ಲಿ ಮುಂದುವರೆಯುತ್ತದಲ್ಲ! ಆ ಲಯ ಬದಲಾವಣೆಯ ಹರಿಕಾರರಿಗೆ ಪಥ್ಯವಾಗದು.. ಹೋಗಲಿ ಎಂದರೆ ಅವರ ನಿರಂತರ ಅಸಹನೆಗೆ ಆ ಲಯವೂ ಬದಲಾಗದು! ಹಾಗಾಗಿ ಆಶಾಭಂಗ! ನಿದ್ರಾಹೀನತೆ! ಕೋಪತಾಪ! ರಾಗದ್ವೇಷ! ಹೇಳಿ! ಕ್ರಾಂತಿಕಾರರಷ್ಟು ಹತಾಶರು ಯಾರಾದರೂ ಇರಲು ಸಾಧ್ಯವೇ? ಭಗವಂತನೇ ಅವನ ಬಳಿ ಬರಬೇಕೆಂಬ ಅಪೇಕ್ಷೆ! ಹಾಗೆಂಬ ನಿರೀಕ್ಷೆಯಲ್ಲಿಯೇ ಅವನ ಹಠ-ಧ್ಯಾನ!

ಇನ್ನು, ಕೆಲವರು ನನ್ನ ಬಳಿ ಬರುತ್ತಾರೆ. ಪ್ರತಿದಿನ ಹದಿನೈದು ನಿಮಿಷ ಏಳು ದಿನದ ಧ್ಯಾನದ ನಂತರ! “ಪ್ರತಿ ದಿನ ಧ್ಯಾನಿಸುತ್ತೇನೆ. ವಿಪರ್ಯಾಸವೆಂದರೆ ದೈವಿಕತೆಯೆನ್ನುವುದು ಇನ್ನೂ ಸಿದ್ಧಿಸಿಯೇ ಇಲ್ಲ. ಈ ಎಲ್ಲ ಪ್ರಯತ್ನವೂ ವ್ಯರ್ಥವಾಗುತ್ತಿದೆ.” ಎಂದು ನನ್ನಲ್ಲಿ ಅಲವತ್ತುಕೊಳ್ಳುತ್ತಾರೆ. ಹದಿನೈದು ನಿಮಿಷದ, ಏಳು ದಿನಗಳ ಧ್ಯಾನಕ್ಕೆ ಭಗವಂತನಿನ್ನೂ ಅವರ ಮುಂದೆ ಪ್ರತ್ಯಕ್ಷವಾಗಿಲ್ಲ! “ಅವನ ಬಳಿ ನಮಗೆ ಇನ್ನೂ ತಲುಪಲಾಗಿಲ್ಲ. ಏನು ಮಾಡಬೇಕು?” ದೈವಿಕತೆಯ ಹುಡುಕಾಟದಲ್ಲಿಯೂ ನಮ್ಮನ್ನು ಬಿಡದ ನಿರೀಕ್ಷೆ!

ನಿರೀಕ್ಷೆ ಹತಾಶೆಯಾಗಲೇ ಬೇಕು! ಹತಾಶೆಯ ಮೂಲಕವೇ ಹೊಸ ಅರ್ಥ ಹೊಳೆಯಬೇಕು! ಅದು ಸಾಕ್ಷಿಯಾಗುವ ಅರ್ಥ! ಹಿನ್ನೆಲೆಗೆ ಸರಿಯುವ ಅರ್ಥ! ನೀವು ಹಿನ್ನೆಲೆಗೆ ಸರಿದಾಗಲಷ್ಟೇ ಹತಾಶೆ ನಿಮ್ಮಿಂದ ದೂರ ಸರಿಯಲು ಆರಂಭಿಸುವುದು.. ಸುಮ್ಮನೇ ನಿಂತರಷ್ಟೇ ಅದು ಮರೆಯಾಗುವುದು. ಪ್ರಪಂಚದಲ್ಲಿ ಹತಾಶೆಯಿದೆ. ಅದು ನಿಜ ಹಾಗೂ ಸಹಜ. ಹಾಗಾಗಿ, ಪ್ರಪಂಚದಲ್ಲೇಕಿಷ್ಟು ಹತಾಶೆ ಎಂಬ ಪ್ರಶ್ನೆಯನ್ನು ಕೇಳಲೇಬೇಡಿ. ಅದು ಅರ್ಥಹೀನ. ಬದಲಿಗೆ ಅದನ್ನು ಪರಿಪೂರ್ಣವಾಗಿ ಒಪ್ಪಿಕೊಂಡು ನಾನು ಏಕಿಷ್ಟು ಹತಾಶನಾಗಿದ್ದೇನೆ ಎಂದೇ ಪ್ರಶ್ನಿಸಿಕೊಳ್ಳಿ. ಆಗ, ನಿಮ್ಮ ಆಲೋಚನೆಯ ಇಡೀ ಆಯಾಮವೇ ಬದಲಾಗುತ್ತದೆ. ನಿಮ್ಮದೇ ನಿರೀಕ್ಷೆ ಉಗಮಕಾರಣವೆನ್ನುವ, ಮೂಲಧಾತುವೆನ್ನುವ ಪರಮಸತ್ಯದ ಅರಿವು, ನಿಮ್ಮಲ್ಲಿ ಜಾಗೃತವಾದಾಗ ಹೊಸದೊಂದು ದೃಷ್ಟಿಕೋನ ನಿಮ್ಮಲ್ಲಿ ಅವಿರ್ಭವಿಸುತ್ತದೆ.

ಅದನ್ನು ಬಿಟ್ಟು ಪ್ರಪಂಚದಲ್ಲಿನ ಹತಾಶೆಯ ಕುರಿತು ನೀವು ಆಲೋಚಿಸಿದಿರೆಂದರೆ ಅದು ಕಡಿಮೆಯಾಗಬಹುದಲ್ಲವೇ ಎಂಬ ನಿರೀಕ್ಷೆಯೇ ನಿಮ್ಮನ್ನು ಕಾಡ ತೊಡಗುತ್ತದೆ. ಆಗ ಪ್ರಪಂಚ ಹತಾಶಗೊಂಡಿ ದೆಯೋ ಇಲ್ಲವೋ ಎನ್ನುವುದಕ್ಕಿಂದ ಮಿಗಿಲಾಗಿ ನೀವೇ ಮತ್ತಷ್ಟು ಹತಾಶರಾಗುತ್ತೀರಿ. ಅದೊಂದು ವಿಷ ವರ್ತುಲ! ಹಾಗಾಗಿ ಪ್ರಪಂಚದ ಬಗ್ಗೆ ಯೋಚಿಸಲೇ ಬೇಡಿ.

ನಿಮ್ಮ ಬಗ್ಗೆಯಷ್ಟೇ ಆಲೋಚಿಸಿ. ನೀವೇ ನಿಮ್ಮ ಪ್ರಪಂಚ, ನೀವೇ ಒಂದು ಅಸೀಮ ವಿಶ್ವ. ನೀವು ಈ ಮಾದರಿಯ ಹೊಸದೃಷ್ಟಿಕೋನವೊಂದನ್ನು ಹೊಂದಿದರಾದಲ್ಲಿ ನಿಮ್ಮ ಆಂತರ್ಯದ ಭಾಗವೊಂದು ಬದಲಾಗತೊಡಗುತ್ತದೆ. ಆಗ ನಿಮ್ಮ ಸುತ್ತಲಿನ ಇಡೀ ವಿಶ್ವವೂ ಬದಲಾವಣೆಗೆ ತೆರೆದುಕೊಳ್ಳುತ್ತದೆ. ಹಾಗಾಗಿಯೇ ನಿರೀಕ್ಷೆಗಳು ನಿಲ್ಲಬೇಕು, ಮೂಲ ಆಕರವೊಂದು ಅದೃಶ್ಯವಾಗಬೇಕು. ಆಗಷ್ಟೇ ಪರಮಸತ್ಯದ ಅರಿವು.

ಕನ್ನಡಕ್ಕೆ: ಫಣಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next