ಮಣಿಪಾಲ: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಜನಪ್ರಿಯ ರಾಜಕಾರಣಿಯಾಗಿದ್ದವರು ಆಸ್ಕರ್ ಫೆರ್ನಾಂಡಿಸ್ (80ವರ್ಷ). ಉಡುಪಿಯ ಬ್ರಹ್ಮಗಿರಿಯಲ್ಲಿರುವ ಮನೆಯಲ್ಲಿ ಸದಾ ಜನಜಂಗುಳಿಯಿಂದ ತುಂಬಿರಲು ಕಾರಣ ಆಸ್ಕರ್ ಫೆರ್ನಾಂಡಿಸ್. ಸತತ ಐದು ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದವರು ಆಸ್ಮರ್ ಫೆರ್ನಾಂಡಿಸ್.
1980ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸ್ ಮೊದಲ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸುವ ಮೂಲಕ ಲೋಕಸಭೆಗೆ ಆಯ್ಕೆಯಾಗಿದ್ದರು. ಆ ಬಳಿಕ ಆಸ್ಕರ್ ಸತತವಾಗಿ 1984, 1989, 1991 ಹಾಗೂ 1996ರವರೆಗೂ ಸತತವಾಗಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
1998ರಲ್ಲಿ ಆಸ್ಕರ್ ಫೆರ್ನಾಂಡಿಸ್ ರಾಜ್ಯಸಭೆಗೆ ಆಯ್ಕೆಯಾಗಿದ್ದು, 2004ರಲ್ಲಿಯೂ ರಾಜ್ಯಸಭೆಗೆ ಪುನರಾಯ್ಕೆಗೊಂಡಿದ್ದರು. ಗಾಂಧಿ ಕುಟುಂಬದ ನಿಕಟವರ್ತಿಯಾಗಿದ್ದ ಆಸ್ಕರ್ ಫೆರ್ನಾಂಡಿಸ್ ಕೇಂದ್ರ ಸಾರಿಗೆ, ರಸ್ತೆ ಹಾಗೂ ಕಾರ್ಮಿಕ ಖಾತೆ ಸಚಿವರಾಗಿದ್ದರು. ಯುಪಿಎ ಅವಧಿಯಲ್ಲಿಯೂ ಸಚಿವರಾಗಿದ್ದರು. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಇವರು ಕೂಡಾ ಒಬ್ಬರಾಗಿದ್ದರು. ಅಷ್ಟೇ ಅಲ್ಲ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಕೇಂದ್ರ ಚುನಾವಣಾ ಮಂಡಳಿಯ ಅಧ್ಯಕ್ಷರಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಆಸ್ಕರ್ ಫೆರ್ನಾಂಡಿಸ್ ಕಾರ್ಯ ನಿರ್ವಹಿಸಿದ್ದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಸಂಸದೀಯ ಕಾರ್ಯದರ್ಶಿಯಾಗಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿದ್ದರು. ಅನಿವಾಸಿ ಭಾರತೀಯ ವ್ಯವಹಾರಗಳು, ಯುವ ಮತ್ತು ಕ್ರೀಡಾ ವ್ಯವಹಾರ ಹೀಗೆ ಅನೇಕ ಮಹತ್ವದ ಹುದ್ದೆಗಳನ್ನು ಆಸ್ಕರ್ ಫೆರ್ನಾಂಡಿಸ್ ಅಲಂಕರಿಸಿದ್ದರು.
1987ರಿಂದ 1992ರವರೆಗೆ ಆಸ್ಕರ್ ಫೆರ್ನಾಂಡಿಸ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಸ್ಕರ್ ಅವರು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಉಡುಪಿಗೆ ಪ್ರಾವಿಡೆಂಟ್ ಫಂಡ್ ನ ರೀಜನಲ್ ಕಚೇರಿ ತೆರೆಯಲು ಅವಕಾಶವಾಗಿತ್ತು. ಬರೋಬ್ಬರಿ 26 ವರ್ಷಗಳ ಕಾಲ ಆಸ್ಕರ್ ಅವರು ಎಐಸಿಸಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಲೋಕಸಭಾ ಸದಸ್ಯರಾಗಿದ್ದ ವೇಳೆ ಆಸ್ಕರ್ ಅವರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದರು. ಸುದೀರ್ಘ 45 ವರ್ಷಗಳ ಕಾಲದ ಅವಧಿಯಲ್ಲಿ ರಾಜಕೀಯ ಜೀವನ ಹಾಗೂ ಅವರ ಸಾಧನೆಯನ್ನು ಪರಿಗಣಿಸಿ ನೆಲ್ಸನ್ ಮಂಡೇಲಾ ಪ್ರಶಸ್ತಿ, ಮಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಆಸ್ಕರ್ ಅವರು ಮೌತ್ ಆರ್ಗನ್ ನುಡಿಸುವುದರಲ್ಲಿ ನಿಪುಣರಾಗಿದ್ದರಷ್ಟೇ ಅಲ್ಲ, ಈಜುಪಟು ಕೂಡಾ ಆಗಿದ್ದರು.