Advertisement

ಸುದಂತ ಚಿಕಿತ್ಸೆ

07:10 PM May 18, 2019 | Sriram |

ಆರ್ಥೊಡಾಂಟಿಕ್ಸ್‌ ಎಂಬ ಪದವು ಗ್ರೀಕ್‌ ಭಾಷೆಯ ಆರ್ಥೊ (ನೇರ) ಮತ್ತು ಓಡೊಂಟ್‌ (ದಂತ) ಎಂಬ ಎರಡು ಪದಗಳಿಂದ ಹುಟ್ಟಿಕೊಂಡಿದೆ. ಕನ್ನಡದಲ್ಲಿ ಇದಕ್ಕೆ ಸುದಂತ ಯೋಜನೆ ಎಂಬ ಸುಂದರ ಹೆಸರಿದೆ. ಇಂದು ಆರ್ಥೊಡಾಂಟಿಕ್ಸ್‌ ಎಂದರೆ ಹಲ್ಲುಗಳನ್ನು ಸರಿಪಡಿಸಿ ನೇರಗೊಳಿಸುವುದು ಮಾತ್ರವಲ್ಲದೆ ಅದರ ವ್ಯಾಪ್ತಿ ಇನ್ನೂ ವಿಶಾಲವಾಗಿ ವಿಸ್ತರಿಸಿದೆ.

Advertisement

ಸುದಂತ ಯೋಜನೆ ಚಿಕಿತ್ಸೆಯು ಹಲ್ಲುಗಳು ಈಗಿರುವ ಕಳಪೆ ಸ್ಥಾನವನ್ನು ಸುಧಾರಿಸುವತ್ತ ಮತ್ತು ಹಲ್ಲುಗಳ ಜಗಿಯುವ ಜೋಡಣೆಯತ್ತ ಗಮನ ಕೇಂದ್ರೀಕರಿಸಬಹುದು ಅಥವಾ ದೀರ್ಘ‌ಕಾಲದಲ್ಲಿ ಮುಖದ ಆಕಾರ ಮತ್ತು ಸ್ವರೂಪದ ಬಗ್ಗೆಯೂ ಗಮನಹರಿಸಬಹುದು. ಸುದಂತ ಯೋಜನೆ ಚಿಕಿತ್ಸೆಯನ್ನು ಸುರೂಪ ಕಾರಣಗಳಿಗಾಗಿ ಪಡೆಯಬಹುದು, ವ್ಯಕ್ತಿಯ ಹಲ್ಲುಗಳು ಮತ್ತು ಮುಖದ ಒಟ್ಟು ಸ್ವರೂಪವನ್ನು ಉತ್ತಮಪಡಿಸುವುದಕ್ಕಾಗಿಯೂ ಉಪಯೋಗಿಸಬಹುದು. ಇದಲ್ಲದೆ, ಜಗಿತದ ಕಾರ್ಯಾಚರಣೆಯನ್ನು ಉತ್ತಮಪಡಿಸುವುದಕ್ಕಾಗಿಯೂ ಚಿಕಿತ್ಸೆ ಅಗತ್ಯವಾಗಬಹುದು. ಸಾಮಾನ್ಯವಾಗಿ ಈ ಎರಡೂ ಉದ್ದೇಶಗಳನ್ನು ಏಕಕಾಲದಲ್ಲಿ ಸಾಧಿಸಬಹುದಾಗಿದೆ.

ಹಲ್ಲುಗಳು ಚಲಿಸುವುದೇಕೆ ಮತ್ತು ಹೇಗೆ?
“ಬ್ರೇಸಸ್‌’ ಎಂದು ಕರೆಯಲ್ಪಡುವ ಸಣ್ಣ ಬ್ರ್ಯಾಕೆಟ್‌ಗಳು ಸುದಂತ ಯೋಜನೆಯ ಮುಖ್ಯ ಪರಿಕರಗಳಲ್ಲಿ ಒಂದು. ಇವುಗಳನ್ನು ಹಲ್ಲುಗಳ ಮೇಲಿರಿಸಿ ಫ್ಲೆಕ್ಸಿಬಲ್‌ ಸೂಕ್ಷ್ಮ ಸರಿಗೆಗಳನ್ನು ಜೋಡಿಸಲಾಗುತ್ತದೆ. ಈ ಸರಿಗೆಗಳು ಹಲ್ಲುಗಳ ಮೇಲೆ ಅಲ್ಪ ಪ್ರಮಾಣದ ಒತ್ತಡವನ್ನು ಹಾಕುವ ಮೂಲಕ ತಮ್ಮೊಡನೆ ಹಲ್ಲುಗಳನ್ನು ಸ್ವಸ್ಥಾನಕ್ಕೆ ಮರಳಿಸುತ್ತವೆ. ಹಲ್ಲುಗಳು ಓರೆಕೋರೆಯಾಗುವುದಕ್ಕೆ ಹಲ್ಲುಗಳನ್ನು ಎಲುಬಿಗೆ ಜೋಡಿಸುವ ಪೆರಿಯೋಡಾಂಟಲ್‌ ಲಿಗಮೆಂಟ್‌ನ ಗುಣಗಳು ಕಾರಣ. ಈ ಅಂಗಾಂಶಗಳು ಸಜೀವವಾಗಿರುವ ಕಾರಣ ಸತತವಾಗಿ ಬದಲಾಗುತ್ತವೆ ಮತ್ತು ಪುನಾರೂಪುಗೊಳ್ಳುತ್ತವೆ.

ಚಿಕಿತ್ಸೆಗೆ ಎಷ್ಟು ಕಾಲ ತಗಲುತ್ತದೆ?
ಬ್ರೇಸ್‌ಗಳನ್ನು ಜೋಡಿಸಿ ನಡೆಸುವ ಚಿಕಿತ್ಸೆಗೆ ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳು ತಗಲುತ್ತವೆ. ಈ ಅವಧಿಯಲ್ಲಿ ಸಾಮಾನ್ಯವಾಗಿ ನೀವು ಮೂರ್ನಾಲ್ಕು ವಾರಗಳಿಗೆ ಒಮ್ಮೆ ಆಥೊìಡಾಂಟಿಸ್ಟ್‌ ವೈದ್ಯರನ್ನು ಸಂದರ್ಶಿಸಬೇಕಾಗುತ್ತದೆ.
ಬ್ರೇಸ್‌ ಚಿಕಿತ್ಸೆಯು ಸರಿಯಾಗಿ ಮುಂದುವರಿಯಬೇಕಿದ್ದರೆ ಬಾಯಿಯ ಆರೋಗ್ಯವನ್ನು ಚೆನ್ನಾಗಿ ಕಾಪಾಡುವುದು ಅಗತ್ಯ. ಪ್ರತೀ ಬಾರಿ ಊಟ- ಉಪಾಹಾರ ಸೇವಿಸಿದಾಗಲೂ ಹಲ್ಲುಗಳನ್ನು ಬ್ರಶ್‌ ಮಾಡಿ ಬಾಯಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಜತೆಗೆ ಅಂಟಾದ, ಜಿಡ್ಡು ಇರುವ ಆಹಾರವನ್ನು ವರ್ಜಿಸುವುದು ಸೂಕ್ತ.

ಬ್ರೇಸ್‌ಗಳನ್ನು ತೆಗೆದುಹಾಕಿದ ಬಳಿಕ ಹಲ್ಲುಗಳನ್ನು ಹೊಸ ಜಾಗದಲ್ಲಿ ಹಿಡಿದಿರಿಸುವುದಕ್ಕಾಗಿ ರಿಟೇನರ್‌ಗಳನ್ನು ಅಳವಡಿಸಲಾಗುತ್ತದೆ. ಹಲ್ಲುಗಳು ಮತ್ತೆ ತಮ್ಮ ಹಿಂದಿನ ಜಾಗಕ್ಕೆ ಮರಳದಂತೆ ತಡೆಯುವ ಈ ರಿಟೇನರ್‌ಗಳನ್ನು ಒಂದರಿಂದ ಎರಡು ವರ್ಷಗಳ ಕಾಲ ಧರಿಸಿರಬೇಕಾಗುತ್ತದೆ.

Advertisement

ಸುದಂತ ಯೋಜನೆ
ಚಿಕಿತ್ಸೆಯ ಪ್ರಯೋಜನಗಳೇನು?
ಹಲ್ಲುಗಳನ್ನು ನೇರಗೊಳಿಸುವುದು ಮತ್ತು ಜಗಿತವನ್ನು ಪುನಾರೂಪಿಸುವುದರಿಂದ ಬಾಯಿಯ ಒಟ್ಟಾರೆ ಆರೋಗ್ಯಕ್ಕೆ ದೀರ್ಘ‌ಕಾಲಿಕ ಪ್ರಯೋಜನಗಳಿವೆ.
– ನೇರವಾಗಿರುವ ಹಲ್ಲುಗಳನ್ನು ಶುಚಿಗೊಳಿಸುವುದು ಮತ್ತು ಉಜ್ಜುವುದು ಸುಲಭ. ಇದರಿಂದ ಹಲ್ಲುಗಳು ಹುಳುಕಾಗುವುದು, ವಸಡಿನ ಕಾಯಿಲೆಗಳು ಉಂಟಾಗುವುದು ಮತ್ತು ದಂತ ಕುಳಿಗಳಾಗುವುದು ತಪ್ಪುತ್ತದೆ.
– ಸರಿಯಾದ ಜಗಿತದಿಂದ ನಿಮ್ಮ ಹಲ್ಲುಗಳು ಮತ್ತು ಬಾಯಿ ಆಹಾರವನ್ನು ಸರಿಯಾದ ರೀತಿಯಲ್ಲಿ ಜಗಿಯುವುದಕ್ಕೆ ಮತ್ತು ಜೀರ್ಣಿಸುವುದಕ್ಕೆ ಸಾಧ್ಯವಾಗುತ್ತದೆ. ಮುಂದೆ ಜಗಿತ, ಅಡ್ಡ ಜಗಿತ, ವಾರೆ ಜಗಿತ ಅಥವಾ ಇನ್ನಿತರ ರೀತಿಯಲ್ಲಿ ಹೊಂದಾಣಿಕೆಯಾಗದ ಜಗಿತಗಳನ್ನು ಸರಿಪಡಿಸುವುದರಿಂದ ಆಹಾರವನ್ನು ಸರಿಯಾಗಿ ಜಗಿಯಲು ಮತು ಜೀರ್ಣ ಮಾಡಿಕೊಳ್ಳಲು ಸುಲಭವಾಗುತ್ತದೆ.
– ಹಲ್ಲುಗಳು ಅವಧಿಪೂರ್ವ ನಶಿಸುವುದು ತಪ್ಪುತ್ತದೆ. ಹಲ್ಲುಗಳು ಸರಿಯಾಗಿ ಹೊಂದಿಕೆಯಾಗಿಲ್ಲದೆ ಇದ್ದಲ್ಲಿ ಅದರಿಂದ ಪಕ್ಕದ ಹಲ್ಲಿನ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಇದರಿಂದ ಆ ಹಲ್ಲು ಬೇಗನೆ ಸವೆಯುತ್ತದೆ.
– ಹಲ್ಲುಗಳು ಸರಿಯಾಗಿ ಹೊಂದಾಣಿಕೆ ಆಗಿದ್ದಲ್ಲಿ ಮಾತನಾಡುವುದು ಕೂಡ ಸರಿಯಾಗುತ್ತದೆ. ಮೇಲಿನ ಸಾಲಿನ ಹಲ್ಲುಗಳು ಮತ್ತು ಕೆಳಗಿನ ಸಾಲಿನ ಹಲ್ಲುಗಳು ಸರಿಯಾಗಿ ಹೊಂದಿಕೆ ಆಗದೆ ಇರುವ ಸಂದರ್ಭದಲ್ಲಿ ಮಾತಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

-ಡಾ| ರಿತೇಶ್‌ ಸಿಂಗ್ಲಾ,
ಅಸೋಸಿಯೇಟ್‌ ಪ್ರೊಫೆಸರ್‌
ಆರ್ಥೊಡಾಂಟಿಕ್ಸ್‌ ವಿಭಾಗ
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next