ಇತ್ತೀಚೆಗಿನ ವರ್ಷಗಳಲ್ಲಿ ವಯಸ್ಕರ ಆರ್ಥೋಡಾಂಟಿಕ್ಸ್ ತನ್ನ ಹದಿಹರಯದಿಂದ ಹೊರಬಂದಿದ್ದು, ತನ್ನ ಬಗೆಗಿನ ಅಪನಂಬಿಕೆಗಳಿಂದ ಕಳಚಿಕೊಂಡು ತಮ್ಮ ಮುಖ ಸೌಂದರ್ಯ, ಮೋಹಕ ನಗು ಮತ್ತು ಬಾಯಿಯ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಬಯಸುವ ವ್ಯಕ್ತಿಗಳಲ್ಲಿ ಜನಪ್ರಿಯಗೊಳ್ಳಲಾರಂಭಿಸಿದೆ. ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿ ಮತ್ತು ಆರ್ಥೋಡಾಂಟಿಕ್ ಕಾರ್ಯವಿಧಾನಗಳು ನೇರ, ಸುಂದರ, ಆರೋಗ್ಯಪೂರ್ಣ ನಗುವಿನ ಮೇಲೆ ಬಿರಬಹುದಾದ ಸಕಾರಾತ್ಮಕವಾದ ಪರಿಣಾಮದ ಬಗ್ಗೆ ತಿಳಿವಳಿಕೆ ಹೆಚ್ಚುತ್ತಿದ್ದು, ಹೆಚ್ಚು ಹೆಚ್ಚು ಮಂದಿ ವಯಸ್ಕರು ಆರ್ಥೋಡಾಂಟಿಕ್ ಚಿಕಿತ್ಸೆಯನ್ನು ಬಯಸುತ್ತಿದ್ದಾರೆ. ಇದು ಯಾವುದೇ ವಯಸ್ಸಿನಲ್ಲಿ ಸಮಗ್ರ ಕಲ್ಯಾಣ ಮತ್ತು ಆರೋಗ್ಯ ಹಾಗೂ ಆತ್ಮವಿಶ್ವಾಸವನ್ನು ಹೊಂದಲು ಬಯಸುವ ವಿಸ್ತೃತ ಸಾಮಾಜಿಕ ಬದಲಾವಣೆಯನ್ನು ಪ್ರತಿಫಲಿಸುತ್ತಿದೆ.
ಸೌಂದರ್ಯಾತ್ಮಕ ಮತ್ತು ಆರೋಗ್ಯ ಲಾಭಗಳು
ಅನೇಕ ವಯಸ್ಕರು ಆರ್ಥೋಡಾಂಟಿಕ್ಸ್ ಚಿಕಿತ್ಸೆಯನ್ನು ಪಡೆದುಕೊಳ್ಳಲು ಬಯಸುವುದಕ್ಕೆ ಮೂಲ ಕಾರಣ ಸೌಂದರ್ಯವರ್ಧನೆ. ನೇರ, ಮುಖಕ್ಕೆ ಚೆನ್ನಾಗಿ ಹೊಂದಿಕೊಳ್ಳುವ ಸುಂದರ ನಗು ಆತ್ಮ ವಿಶ್ವಾಸ ಮತ್ತು ವ್ಯಕ್ತಿ ಘನತೆಯನ್ನು ಬಹುವಾಗಿ ವೃದ್ಧಿಸುತ್ತದೆ. ಆದರೆ ವಯಸ್ಕರ ಆರ್ಥೋಡಾಂಟಿಕ್ಸ್ ಚಿಕಿತ್ಸೆಯ ಪ್ರಯೋಜನಗಳು ಸೌಂದರ್ಯವರ್ಧನೆಗೆ ಮಾತ್ರ ಸೀಮಿತವಾಗಿಲ್ಲ. ಅಸಮರ್ಪಕವಾಗಿ ಜೋಡಣೆಯಾಗಿರುವ ಹಲ್ಲುಗಳು ಹಲ್ಲು ಶುಚಿಗೊಳಿಸಲು ಕಷ್ಟ, ಹಲ್ಲು ಹುಳುಕಾಗುವುದು ಮತ್ತು ವಸಡಿನ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚುವುದು, ಹಲ್ಲಿನ ಎನಾಮಲ್ ಅಸಹಜವಾಗಿ ನಾಶವಾಗುವುದು ಹಾಗೂ ದವಡೆ ನೋವು ಮತ್ತು ತಲೆನೋವಿನಂತಹ ತೊಂದರೆಗಳಿಗೆ ಕಾರಣವಾಗಬಹುದು.
ಆರ್ಥೋಡಾಂಟಿಕ್ ಚಿಕಿತ್ಸೆಯಿಂದ ಈ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ. ಆ ಮೂಲಕ ಬಾಯಿಯ ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ. ಸರಿಯಾಗಿ ಜೋಡಣೆಗೊಂಡಿರುವ ಹಲ್ಲುಗಳನ್ನು ಶುಚಿಗೊಳಿಸುವುದು ಮತ್ತು ನಿರ್ವಹಿಸುವುದು ಸುಲಭ; ಇದರಿಂದ ದಂತವೈದ್ಯಕೀಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಮಾತ್ರವಲ್ಲದೆ ಭವಿಷ್ಯದಲ್ಲಿ ಹೆಚ್ಚು ಕಠಿನವಾದ ಚಿಕಿತ್ಸಾ ಪ್ರಕ್ರಿಯೆಗಳನ್ನು ಅವಲಂಬಿಸಬೇಕಾದ ಸಾಧ್ಯತೆಗಳು ಕಡಿಮೆಯಾಗುತ್ತವೆ.
ವಯಸ್ಕರ ಆರ್ಥೋಡಾಂಟಿಕ್ಸ್ ಚಿಕಿತ್ಸೆ
ಸಾಮಾನ್ಯ ಪ್ರಶ್ನೆಗಳು ವಯಸ್ಕರ ಆರ್ಥೋಡಾಂಟಿಕ್ ಚಿಕಿತ್ಸೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವಂತೆಯೇ ಈ ಚಿಕಿತ್ಸೆಗೆ ಒಳಗಾಗಲು ಬಯಸುವ ವ್ಯಕ್ತಿಗಳಲ್ಲಿ ಕೆಲವು ಸಾಮಾನ್ಯ ಪ್ರಶ್ನೆಗಳು ಇರುವುದು ಕಂಡುಬರುತ್ತಿದೆ. ಈ ಕಾಳಜಿಗಳನ್ನು ಅರ್ಥ ಮಾಡಿಕೊಂಡು ಪರಿಹರಿ ಸುವುದರಿಂದ ವಯಸ್ಕರು ತಮ್ಮ ಬಾಯಿಯ ಆರೋಗ್ಯದ ಬಗ್ಗೆ ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಡಾ| ರಮ್ಯಾ ವಿಜೇತಾ ಜತ್ತನ್ನ ರೀಡರ್, ಆರ್ಥೋಡಾಂಟಿಕ್ಸ್ ಮತ್ತು ಡೆಂಟೊಫೇಶಿಯಲ್ ಆರ್ಥೋಪೆಡಿಕ್ಸ್ ವಿಭಾಗ, ಎಂಸಿಒಡಿಎಸ್, ಮಾಹೆ, ಮಣಿಪಾಲ