Advertisement

ಅನಾಥವಾಗಿ ನಿಂತ ಸ್ತ್ರೀ ಶಕ್ತಿ ಭವನ

04:21 PM Feb 05, 2018 | Team Udayavani |

ದೇವದುರ್ಗ: ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ಸ್ತ್ರೀ ಶಕ್ತಿ ಭವನ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸದ್ಬಳಕೆಯಾಗದೆ ಅನಾಥವಾಗಿ ಪಾಳು ಬೀಳುತ್ತಿದೆ. ಇದಲ್ಲದೇ ಭವನದ ಆವರಣದಲ್ಲಿ ಸಿಡಿಪಿಒ ಅಧಿಕಾರಿಗಳಿಗೆ ನೀಡಿದ ಜೀಪ್‌ ಬಳಕೆ ಇಲ್ಲದೇ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದೆ.

Advertisement

ಶಿಶು ಅಭಿವೃದ್ಧಿ ಇಲಾಖೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಈ ಹಿಂದೆ ಸ್ತ್ರೀಶಕ್ತಿ ಭವನ ಸಿಡಿಪಿಒ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಕಟ್ಟಡದ ಛತ್ತು ಉದುರಿ ಅಲ್ಪಸ್ವಲ್ಪ ದುರಸ್ತಿಗೀಡಾದ ನೆಪದಲ್ಲಿ ಸಿಡಿಪಿಒ ಕಚೇರಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಆಗಿಂದ ಸ್ತ್ರೀ ಶಕ್ತಿ ಭವನ ಸದ್ಬಳಕೆಯಾಗದೇ ನಿರುಪಯುಕ್ತವಾಗಿದೆ.

ಈ ಹಿಂದೆ ಇದ್ದ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸುನೀತಾ ಸಿದ್ರಾಮ ಸಿಡಿಪಿಒ ಕಚೇರಿಯನ್ನು ಬಾಡಿಗೆ ಕಟ್ಟಡದಿಂದ ಸ್ತ್ರೀ ಶಕ್ತಿ ಭವನಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈವರೆಗೆ ಕಟ್ಟಡಕ್ಕೆ ಸ್ಥಳಾಂತರವಾಗಿಲ್ಲ. ಅಲ್ಲದೇ ಅಧಿಕಾರಿಗಳ ಆದೇಶಕ್ಕೆ ಇಲ್ಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಸ್ತ್ರೀ ಶಕ್ತಿ ಭವನದಲ್ಲಿ ಅಲ್ಪಸ್ವಲ್ಪ ದುರಸ್ತಿ ಇದ್ದು ಅದನ್ನೂ ಮಾಡುತ್ತಿಲ್ಲ. ಹೀಗಾಗಿ ಕಟ್ಟಡದ ಸಾಮರ್ಥಯ ದಿನೇದಿನೇ ಹಾಳಾಗುತ್ತಿದೆ. ಅಲ್ಲದೇ ಕಟ್ಟಡ ಪುಂಡ, ಪೋಕರಿಗಳ ಅನೈತಿಕ ಚಟುವಟಿಕೆಗಳಿಗೆ ತಾಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕಟ್ಟಡದ ಸುತ್ತಲೂ ಜಾಲಿಗಿಡ, ಕಸಕಡ್ಡಿಗಳು ತುಂಬಿವೆ.

ವಾಹನ ನಿರುಪಯುಕ್ತ: ಸಿಡಿಪಿಒ ಅಧಿಕಾರಿಗಳಿಗೆ ಬಾಡಿಗೆ ವಾಹನ ಒದಗಿಸಲಾಗಿದೆ. ಹೀಗಾಗಿ ಇಲಾಖೆಯ ಜೀಪ್‌ ಬಳಕೆ ಇಲ್ಲದೇ ಸ್ತ್ರೀ ಶಕ್ತಿ ಭವನದ ಆವರಣದಲ್ಲಿ ನಿಂತಲ್ಲೇ ನಿಂತಿದೆ.  ಸಿಡಿಪಿಒ ಇಲಾಖೆ ಬಾಡಿಗೆ ಕಟ್ಟಡ ಮತ್ತು
ವಾಹನಕ್ಕೆ ಪ್ರತಿ ವರ್ಷ ಲಕ್ಷಾಂತರ ರೂ. ವ್ಯಯಿಸುತ್ತಿದೆ. ಇಲಾಖೆಗೆ ಸ್ವಂತ ಕಟ್ಟಡ ಮತ್ತು ವಾಹನ ಇದ್ದರೂ ಅಧಿಕಾರಿಗಳು ಬಳಸಿಕೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ. ಕೂಡಲೇ ಸ್ತ್ರೀ ಶಕ್ತಿ ಭವನ ದುರಸ್ತಿಗೊಳಿಸಿ ಅಲ್ಲಿ ಸಿಡಿಪಿಒ ಕಚೇರಿ ಸ್ಥಳಾಂತರಿಸಬೇಕು ಮತ್ತು ವಾಹನ ಸದ್ಬಳಕೆಗೆ ಮುಂದಾಗಬೇಕು ಎಂದು ಕರವೇ ಅಧ್ಯಕ್ಷ ಬಸವರಾಜ ಗೋಪಳಾಪುರ, ದಲಿತ ಸಂಘಟನೆ ಅಧ್ಯಕ್ಷ ರಂಗನಾಥ ಜಾಲಹಳ್ಳಿ ಇತರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next