Advertisement

ಅನಾಥವಾಗಿ ಬಿದ್ದ ಶಿಲಾನ್ಯಾಸ ಫಲಕಗಳು!

02:33 PM Nov 30, 2018 | |

ಸಿಂಧನೂರು: ನ.25ರಂದು ಪಟ್ಟಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ನಡೆಯಬೇಕಿದ್ದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆಗಾಗಿ ಸಿದ್ಧಪಡಿಸಲಾಗಿದ್ದ ಶಿಲಾನ್ಯಾಸದ ಕಲ್ಲುಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಪಿಡಬ್ಲ್ಯೂಡಿ ಕ್ಯಾಂಪ್‌ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣಲ್ಲಿ ಬಿದ್ದು ಮಣ್ಣುಪಾಲಾಗುತ್ತಿವೆ.

Advertisement

ನ.25ರಂದು ಪಟ್ಟಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭಕ್ಕೆ ಸಿದ್ಧತೆ ಮಾಡಲಾಗಿತ್ತು. ವಿವಿಧ ಇಲಾಖೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಿನ್ನೆಲೆಯಲ್ಲಿ ಶಿಲಾನ್ಯಾಸ ಫಲಕಗಳನ್ನು ತಂದಿರಿಸಲಾಗಿತ್ತು. ಆದರೆ ನ.24ರಂದು ಚಿತ್ರನಟ, ಮಾಜಿ ಸಚಿವ ಅಂಬರೀಷ್‌ ನಿಧನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು.

ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲು ಸಿದ್ಧಪಡಿಸಿದ್ದ ಶಿಲಾನ್ಯಾಸದ ಕಲ್ಲುಗಳನ್ನು ನಾಲ್ಕು ದಿನವಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬೇರೆಡೆ ಸಂಗ್ರಹಿಸಿಡದ್ದರಿಂದ ಆವರಣದಲ್ಲಿ ಅನಾಥವಾಗಿ ಬಿದ್ದಿವೆ. ಕೆಲ ಫಲಕಗಳು ನಿಂತಿದ್ದರೆ ಮತ್ತೆ ಕೆಲವು ಬಿದ್ದಿವೆ. ಎಪಿಎಂಸಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಎಚ್‌ಕೆಆರ್‌ಡಿಬಿ ಹಾಗೂ ವಿವಿಧ ಇಲಾಖೆಗೆಳಿಗೆ ಸೇರಿದ ವಿವಿಧ ಯೋಜನೆಯ ಕಾಮಗಾರಿ ಶಿಲಾನ್ಯಾಸದ ಕಲ್ಲುಗಳು ಇಲಾಖೆಯ ಕಟ್ಟಡ ಸೇರದೇ ಅನಾಥವಾಗಿ ಆವರಣದಲ್ಲಿ ಬಿದ್ದಿವೆ. ಮಕ್ಕಳ ಕ್ರೀಡಾಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುತ್ತಿವೆ. ಈಗಾಗಲೇ ಒಂದು ಕಲ್ಲು ಮಣ್ಣು ಪಾಲಾಗಿದ್ದು, ಇನ್ನುಳಿದ ನಾಲ್ಕಾರು ಕಲ್ಲುಗಳು ಶಿಲಾಶಾಸನದಂತೆ ನಿಂತಿವೆ. ಇವು ಕೂಡ ಮಣ್ಣು ಪಾಲಾಗುವ ಸನಿಹದಲ್ಲಿವೆ. 

ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಶಿಲಾನ್ಯಾಸದ ಕಲ್ಲುಗಳನ್ನು ಸಂಬಂಧಿಸಿದ ಇಲಾಖೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next