Advertisement

ನೂತನ ಅಣ್ಣಿಗೇರಿ ತಾಲೂಕಿಗೆ ಅನಾಥ ಪ್ರಜ್ಞೆ

02:27 PM Dec 03, 2019 | Suhan S |

ಅಣ್ಣಿಗೇರಿ: ನೂತನ ಅಣ್ಣಿಗೇರಿ ತಾಲೂಕು ಅಸ್ತಿತ್ವಕ್ಕೆ ಬಂದು ಒಂದುವರೆ ವರ್ಷವಾದರೂ ತಾಲೂಕು ಮಟ್ಟದ ಇಲಾಖಾ ಕಚೇರಿಗಳಿಗೆ ಮೂಲಸೌಲಭ್ಯ ಕಲ್ಪಿಸದ ಪರಿಣಾಮ, ಹಲವು ಇಲಾಖಾ ಕಚೇರಿಗಳ ಸ್ಥಾಪನೆಯೇ ಆಗದ ಪರಿಣಾಮ ಜನರು ಪರದಾಡುವಂತಾಗಿದೆ.

Advertisement

ಹಲವು ವರ್ಷಗಳ ಹೋರಾಟದ ಫಲವಾಗಿ 6 ವರ್ಷಗಳ ಹಿಂದೆ ನೂತನ ತಾಲೂಕು ಘೋಷಣೆಯಾಗಿದ್ದು, 2018ರ ಮಾ. 5ರಂದು ಅಸ್ತಿತ್ವಕ್ಕೆ ಬಂದಿದೆ. ತಾಲೂಕಾದರೂ ವಿವಿಧ ಇಲಾಖೆಗಳುಇನ್ನೂ ಕಾರ್ಯ ಆರಂಭಿಸದ ಪರಿಣಾಮ ಜನರು ಹಿಡಿಶಾಪ ಹಾಕುವಂತಾಗಿದೆ. ಇದುವರೆಗೂ ಯಾವುದೇ ವಿಶೇಷ ಅನುದಾನದ ಪ್ಯಾಕೇಜ್‌ ಘೋಷಣೆಯಾಗದೆ ಸೌಲಭ್ಯಗಳ ಕೊರತೆಯಿಂದ ನರಗುವಂತಾಗಿದೆ.

ಪ್ರಾರಂಭವೇ ಆಗಿಲ್ಲ: ಹತ್ತು ಹಾಸಿಗೆಯ ಆಸ್ಪತ್ರೆ ವೈದ್ಯರ ಕೊರತೆಯಿಂದ ಬಳಲುತ್ತಿದೆ. ತಾಪಂ, ನ್ಯಾಯಾಲಯ, ಲೋಕೋಪಯೋಗಿಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ತಾಲೂಕು ಆರೋಗ್ಯ ಮತ್ತು ಕುಟುಂಬ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಖಜಾನೆ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಸೇರಿ ಒಟ್ಟು 22ಕಚೇರಿಗಳು ಇನ್ನೂ ಪ್ರಾರಂಭವಾಗಿಲ್ಲ. ಸದ್ಯಕ್ಕೆ ಉಪನೋಂದಣಿ ಅಧಿಕಾರಿ ಕಚೇರಿ, ಪುರಸಭೆ, ಎಪಿಎಂಸಿ, ಅಗ್ನಿಶಾಮಕ ದಳ, ಸರಕಾರಿ ಕಟ್ಟಡಗಳು ಇವೆ. ಆದರೂ ಇಲ್ಲಿಯ ಯಾವುದೇ ಇಲಾಖೆಯ ಆದೇಶ ಪಡೆಯಬೇಕಾದರೆ ನವಲಗುಂದ ತಾಲೂಕಿನ ಅಧಿಕಾರಿಗಳ ಅಪ್ಪಣೆ ಪಡೆಯಬೇಕಾಗಿದೆ.

ಹೀಗಾಗಿ ಎಷ್ಟೋ ಇಲಾಖೆಗಳ ಕೆಲಸಕ್ಕೆ 20 ಕಿಮೀ ದೂರದ ನವಲಗುಂದಕ್ಕೆ ಸಾರ್ವಜನಿಕರು ಅಡ್ಡಾಡುವುದು ಇನ್ನೂ ತಪ್ಪಿಲ್ಲ. ನೂತನ ತಾಲೂಕಿನ ಕಚೇರಿಗಳನ್ನು ತೆರೆಯಲು ಎಪಿಎಂಸಿಯಲ್ಲಿ ಹಲವಾರು ಕೊಠಡಿಗಳು ಖಾಲಿ ಇವೆ. ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸೈದಾಪುರ ಕ್ರಾಸ್‌ ಬಳಿ ಸರ್ಕಾರಿ ಜಮೀನು ಇದೆ. ಇಲ್ಲಿ ಶಿಕ್ಷಣ ಇಲಾಖೆ, ಉಪ ಖಜಾನೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಎಸ್ಸೆನ್ನೆಲ್‌ ಕಚೇರಿ ಹಾಗೂ ಇತರೆ ಕಚೇರಿಗಳನ್ನು ತೆರೆಯಬೇಕಾಗಿದೆ. ಆದಷ್ಟು ಬೇಗ ಎಲ್ಲ ಇಲಾಖೆಗಳ ಕಚೇರಿ ಪ್ರಾರಂಭವಾಗಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ. ಆಳುವವರು ಎಚ್ಚೆತ್ತುಕೊಳ್ಳುವುದು ಯಾವಾಗ? ಎಲ್ಲ ಇಲಾಖೆಗಳ ಸೇವೆ ಸಮರ್ಪಕವಾಗಿ ಇಲ್ಲಿಯೇ ದೊರೆ ಯುವಂತಾಗುವುದು ಯಾವಾಗ? ಎಂಬುದು ಯಕ್ಷಪ್ರಶ್ನೆಯಾಗಿದೆ.

ಅಡ್ಡಾಡುವುದೇ ಸಮಸ್ಯೆ : ಪಟ್ಟಣದಿಂದ 2 ಕಿಮೀ ದೂರದಲ್ಲಿರುವ ವೆಂಕಟೇಶ್ವರ ಕೋ ಆಪರೇಟಿವ್‌ ಟೆಕ್ಸ್‌ಟೈಲ್ಸ್‌ ಮಿಲ್ಲಿನ ಹಳೆಯ ಕಟ್ಟಡದಲ್ಲಿ ತಹಶೀಲ್ದಾರ್‌ ಕಚೇರಿ ತೆರೆಯಲಾಗಿದೆ. ಕೆಲಸ ಕಾರ್ಯಗಳಿಗೆ ಜನರಿಗೆ ಇಲ್ಲಿಗೆ ಹೋಗಿ ಬರುವುದೇ ಸಮಸ್ಯೆಯಾಗಿದೆ. ಅಲ್ಲದೇ ತಹಶೀಲ್ದಾರ್‌ ಕಚೇರಿಗೂ ಸರಿಯಾದ ಸೌಕರ್ಯಕಲ್ಪಿಸಿಲ್ಲ. ತಹಶೀಲ್ದಾರ್‌ಗೆ ವಾಹನದ ವ್ಯವಸ್ಥೆಯೂ ಇಲ್ಲ.ಸಾರ್ವಜನಿಕರಿಗೆ ಕಚೇರಿಯಲ್ಲಿ ಕುಳಿತುಕೊಳ್ಳಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಟ್ಟಣದ ಬಸ್‌ನಿಲ್ದಾಣದಿಂದ ತಹಶೀಲ್ದಾರ್‌ ಕಚೇರಿ ವರೆಗೆ ಮಿನಿಬಸ್‌ ಓಡಾಟ ಆರಂಭಿಸಬೇಕೆಂಬುದು ಜನರ ಆಗ್ರಹವಾಗಿದೆ.

Advertisement

ಇಂದಿನ ಎಲ್ಲಾ ತರಹದ ಕೆಲಸಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ.ಆದರೆ ಅಣ್ಣಿಗೇರಿಯಲ್ಲಿ ಆಧಾರ್‌ ನೋಂದಣಿ ಕೇಂದ್ರ ಬಂದ್‌ ಆಗಿರುವುದರಿಂದ ಪಟ್ಟಣ ಹಾಗೂಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತುಂಬಾತೊಂದರೆಯಾಗುತ್ತಿದೆ. ಆದಷ್ಟು ಬೇಗ ಆಧಾರ್‌ ನೋಂದಣಿ ಕೇಂದ್ರವನ್ನು ಪುನಾರಂಭಿಸಬೇಕು .ಬಸವರಾಜ ಮರಡ್ಡಿ, ಸಮಾಜ ಸೇವಕ

 

-ಪ್ರಭು ದುಂದೂ

Advertisement

Udayavani is now on Telegram. Click here to join our channel and stay updated with the latest news.

Next