Advertisement
ಅನಾಥ ದೇಸೀಗೋವುಗಳಿಗೆಂದೇ ಗೋಶಾಲೆ ಇರುವುದು ಕಾರ್ಕಳದ ಪಟ್ಟಣದೊಳಗಿನ ತೆಳ್ಳಾರು ರಸ್ತೆಯ ಶೇಷಾದ್ರಿ ನಗರದಲ್ಲಿ. ಅಲ್ಲಿ ಎಂಟು ದೇಸೀ ತಳಿಗೆ ಸೇರಿದ 115 ಹಸುಗಳಿವೆ, ಕರುಗಳೂ ಇವೆ. ಗಿರ್, ಸಾವಾಲ್, ಥಾರ್‌ಪಾರ್ಕರ್, ಕಾಂಕ್ರೇಜ್, ಖೀಲಾರಿ, ಮಲೆನಾಡು ಗಿಡ್ಡ ಮೊದಲಾದ ಅಪರೂಪದ, ಅಳಿವಿನಂಚು ಸೇರಿದ ಹಸುಗಳ ಜೊತೆಗೆ ಒಂದೆರಡು ಮಿಶ್ರತಳಿಯ ಜರ್ಸಿ, ಹೋಲ್‌ಸ್ಟೆನ್ ತಳಿಯ ಹಸುಗಳೂ ಇವೆ. ಬಹು ಚಂದದ ವ್ಯವಸ್ಥಿತವಾದ ಗೋಶಾಲೆ ಹೇಗಿರಬೇಕು ಎಂಬುದಕ್ಕೆ ಇದು ಮಾದರಿಯೂ ಆಗುತ್ತದೆ.Related Articles
Advertisement
ಗೋಶಾಲೆಯ ಹೊರಭಾಗದಲ್ಲಿ ಹಣ್ಣು ಮತ್ತು ಹೂಗಳ ತೋಟವಿದ್ದು ಕಣ್ಣುಗಳಿಗೆ ರಮ್ಯವಾದ ನೋಟವಿದೆ. ಹಸುಗಳಿಗೆ ರಾಜೋಪಚಾರವೂ ಸಿಗುತ್ತದೆ. ಹಸಿರುಮೇವು ಅಲ್ಲದೆ ಜೋಳದ ಗಿಡಗಳನ್ನು ಕತ್ತರಿಸಿ ಕೊಡುತ್ತಾರೆ. ಒಣಮೇವನ್ನೂ ನೀಡುತ್ತಾರೆ. ಜೋಳ, ಹೆಸರು, ಎಣ್ಣೆ ಹಿಂಡಿದ ತೌಡು, ಉಪ್ಪು, ಬೆಲ್ಲ, ಶೇಂಗಾ ಹಿಂಡಿ, ಎಳ್ಳಿಂಡಿ, ಅಡುಗೆ ಸೋಡಾ, ಮಿನರಲ್ ಇದೆಲ್ಲ ಮಿಶ್ರಣವಾದ ಅಗತ್ಯ ಪ್ರಮಾಣದ ಆಹಾರವಿದೆ. ಪಶು ವೈದ್ಯರು ಆಗಾಗ ಬಂದು ತಪಾಸಣೆ ಮಾಡಿ ಕಾಲು, ಬಾಯಿ ಜ್ವರ ಮತ್ತಿತರ ಸಮಸ್ಯೆಗಳಿಗೆ ಪೂರ್ವಭಾವಿಯಾಗಿ ಲಸಿಕೆಯನ್ನೋ ಔಷಧಿಯನ್ನೋ ಕೊಡುತ್ತಾರೆ. ಕೆಚ್ಚಲು ಬಾವು ಹೊರತು ಬೇರೆ ಕಾಯಿಲೆಗಳು ಬರುವುದಿಲ್ಲ. ಹಸುಗಳಿಗೆ ಆಯುರ್ವೇದ ಮತ್ತು ಹೋಮಿಯೋಪತಿ ಹೊರತು ಆಲೋಪತಿ ಔಷಧ ನೀಡುವ ಕ್ರಮವಿಲ್ಲ.
ದಿನಕ್ಕೆ ಇನ್ನೂರು ಲೀಟರ್ ಹಾಲು, ಮಾರಾಟಕ್ಕೆ ಸಿಗುತ್ತದೆ. ರೈತರಿಗೆ ಹಸಿ ಸಗಣಿ ಪೂರೈಕೆಯಾಗುತ್ತದೆ. ಗೋಬರ್ ಅನಿಲ ಉತ್ಪಾದಿಸಿದ ಬಗ್ಗಡವನ್ನು ಮೇವಿನ ಬೆಳೆಯ ಕೃಷಿಗೆ ಬಳಸುತ್ತಾರೆ. ಸಗಣಿ, ಗಂಜಲ ಬಳಸಿ ಜೀವಾಮೃತ ತಯಾರಿಸಿ ಕೃಷಿಗೆ ಅಗತ್ಯವಾದ ಜೀವಾಮೃತ ತಯಾರಿಸಿ ಮಾರಾಟ ಮಾಡುತ್ತಾರೆ. ಇನ್ನು ಸಗಣಿ ಮತ್ತು ಬೆಲ್ಲದ ಮಿಶ್ರಣದಿಂದ ತಯಾರಿಸಿದ ಉಂಡೆಗಳನ್ನು ಒಣಗಿಸಿ ಹೂವು ಬೆಳೆಯುವ ಕೃಷಿಕರಿಗಾಗಿ ಉಪಯುಕ್ತವಾದ ಒಣ ಜೀವಾಮೃತವೂ ಮಾರಾಟವಾಗುತ್ತದೆ. ಗೋಮೂತ್ರ, ಬೇವಿನೆಲೆಗಳ ಮಿಶ್ರಣದಿಂದ ಸಿದ್ಧವಾಗುವ ಕೀಟನಾಶಕವಂತೂ ಗೆದ್ದಲು ಸೇರಿದಂತೆ ಹಲವು ಕೀಟಗಳ ನಾಶಕ್ಕೆ ಸಹಕಾರಿಯಾಗಿದ್ದು ತುಂಬ ಬೇಡಿಕೆ ಪಡೆದಿದೆ. ಒಂದು ಲೀಟರ್ ದ್ರಾವಣವನ್ನು ನೂರು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಕೀಟಗಳ ಹುಟ್ಟಡಗುತ್ತದೆ ಎನ್ನುತ್ತಾರೆ ವಿಠಲ ಭಟ್ಟರು. ಇದಲ್ಲದೆ ಸಗಣಿ, ತುಪ್ಪ, ಜೇನುತುಪ್ಪಗಳ ಮಿಶ್ರಣದಿಂದ ತಯಾರಿಸುವ ದ್ರಾವಣವನ್ನು ಬೆಳೆಗಳಿಗೆ ಸಿಂಪಡಿಸಿದರೆ ಉತ್ತಮ ಫಸಲೂ ಸಿಗುತ್ತದೆ, ರಸಗೊಬ್ಬರಗಳನ್ನು ಬಳಸಿ ಹದಗೆಟ್ಟ ಮಣ್ಣನ್ನು ಸುಸ್ಥಿತಿಗೂ ತರುತ್ತದೆಯಂತೆ.
ಗೋಶಾಲೆಯ ಖರ್ಚು ವೆಚ್ಚಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ರೂ. ಬೇಕಾಗುತ್ತದೆ, ಮೂರೂವರೆ ಲಕ್ಷದಷ್ಟು ಹಣ ಗವ್ಯ ಉತ್ಪನ್ನಗಳ ಮಾರಾಟದಿಂದ ಸಿಗುತ್ತದೆ. ಉಳಿದ ಮೊತ್ತವನ್ನು ದಾನಿಗಳು ಕೊಡುತ್ತಾರೆ, ಸಂದರ್ಶಕರು ಗೋವುಗಳಿಗೆ ಆಹಾರ ನೀಡುವ ಗೋಗ್ರಾಸ ಯೋಜನೆಯಿಂದಲೂ ಅನುಕೂಲವಾಗುತ್ತದೆ. ಸಾಕಲು ಇಚ್ಛಿಸುವವರಿಗೆ ದೇಸೀ ತಳಿಯ ಹೆಣ್ಣು ಮತ್ತು ಕೃಷಿಗೆ ಉಪಯೋಗಿಸುವವರಿಗೆ ಗಂಡುಕರುಗಳನ್ನು ಕೊಡುವ ವ್ಯವಸ್ಥೆಯೂ ಇಲ್ಲಿದೆ.
ಸಂದರ್ಶಕರನ್ನು ಆಕರ್ಷಿಸಲು ವನೌಷಧಿ ಗಿಡಗಳ ಉದ್ಯಾನ, ಮಕ್ಕಳ ಆಟದ ಪಾರ್ಕ್ ನಿರ್ಮಾಣವಾಗಿದ್ದು ರಜಾ ದಿನಗಳಲ್ಲಿ ತುಂಬ ಮಂದಿ ಮಕ್ಕಳೊಂದಿಗೆ ಇಲ್ಲಿಗೆ ಭೇಟಿ ನೀಡುತ್ತಾರೆ.
ಪ. ರಾಮಕೃಷ್ಣ ಶಾಸ್ತ್ರಿ