Advertisement
ವರ್ಷದ ಹಿಂದಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಪಾರ ನಿರೀಕ್ಷೆಯನ್ನಿಟ್ಟುಕೊಂಡು ಜಿಲ್ಲೆಯ ಜನರು ಜೆಡಿಎಸ್ ಕೈ ಹಿಡಿದಿದ್ದರು. ಏಳು ಕ್ಷೇತ್ರಗಳಲ್ಲೂ ದಳಪತಿಗಳು ವಿಜಯದುಂಧುಬಿ ಮೊಳಗಿಸಿ ಭರ್ಜರಿ ಜಯ ದಾಖಲಿಸಿದ್ದರು. ಹತ್ತು ವರ್ಷಗಳ ಬಳಿಕ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದ್ದು ಮಂಡ್ಯ ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ಪರ್ವ ಶುರುವಾಗಲಿದೆ ಎಂಬ ಆಶಾಕಿರಣ ಎಲ್ಲರಲ್ಲೂ ಮೂಡಿತ್ತು.
Related Articles
Advertisement
ಮುಖ ಮಾಡದ ಸಿಎಂ: ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖೀಲ್ ಸೋತ ಬಳಿಕ ಸಿಎಂ ಕುಮಾರಸ್ವಾಮಿ ಜಿಲ್ಲೆಯ ಕಡೆ ಮುಖ ಮಾಡಲೇ ಇಲ್ಲ. 8500 ಕೋಟಿ ರೂ. ಅಭಿವೃದ್ಧಿಯ ಚಿತ್ರಣ ಕಾಗದದಲ್ಲೇ ಉಳಿಯುವಂತಾಯಿತು. ಹೊಸ ಕಾರ್ಖಾನೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕೆರೆ-ಕಟ್ಟೆಗಳೆಲ್ಲಾ ನೀರಿಲ್ಲದೆ ಭಣಗುಡುತ್ತಿದ್ದರೂ ಅವುಗಳನ್ನು ತುಂಬಿಸುವುದಕ್ಕೆ ಯಾರಿಗೂ ಆಸಕ್ತಿ ಇದ್ದಂತಿಲ್ಲ. ಮುಂಗಾರು ಮಳೆ ಕೊರತೆಯಿಂದ ಬರಗಾಲ ಜಿಲ್ಲೆಯನ್ನು ಆವರಿಸುತ್ತಿದೆ. ಮಳೆ ಇಲ್ಲದೆ ಕೃಷಿ ಚಟುವಟಿಕೆಯನ್ನೇ ನಡೆಸಲಾಗದಂತಹ ಘನಘೋರ ಸ್ಥಿತಿಯಲ್ಲಿ ರೈತರಿದ್ದಾರೆ. ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿಲ್ಲದೆ ಅಣೆಕಟ್ಟೆಯ ನೀರಿನ ಮಟ್ಟ ಏರುತ್ತಿಲ್ಲ. ಕುಡಿಯಲು ಸಾಲುವಷ್ಟು ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹವಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಶಾಸಕರೆಲ್ಲರೂ ರೆಸಾರ್ಟ್ ಸೇರಿಕೊಂಡು ಮೋಜು-ಮಸ್ತಿ ನಡೆಸುತ್ತಿದ್ದಾರೆ. ದಳಪತಿಗಳ ನಡೆಯ ವಿರುದ್ಧ ಅನ್ನದಾತರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಜಿಲ್ಲೆಯ ಜನರ ಋಣ ತೀರಿಸುವ ಮಾತನಾಡುತ್ತಿದ್ದ ಸಿಎಂ ಕುಮಾರಸ್ವಾಮಿ ಕೂಡ ಜನರ ಕಷ್ಟದಿಂದ ದೂರವೇ ಉಳಿದು ಅಧಿಕಾರದ ಉಳಿವಿನ ಬೆನ್ನೇರಿರುವುದು ಜನರ ಸ್ಥಿತಿ ಕೇಳ್ಳೋರು ಯಾರು ಎನ್ನುವಂತಾಗಿದೆ.
ರೈತರ ಆತ್ಮಹತ್ಯೆ ನಿಲ್ಲಲಿಲ್ಲ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಒಂದಂಶದೊಂದಿಗೆ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನೂ ಗೊಂದಲವಿಲ್ಲದೆ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಋಣಮುಕ್ತ ಪ್ರಮಾಣಪತ್ರ ನೀಡುವ ಮೂಲಕ ರೈತರ ಮನಗೆಲ್ಲುವ ಪ್ರಯತ್ನ ನಡೆಸಿದರಾದರೂ ಬ್ಯಾಂಕುಗಳು ಆ ಋಣಮುಕ್ತ ಪ್ರಮಾಣಪತ್ರಕ್ಕೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡದೆ ಸಾಲ ಮರುಪಾವತಿಸದ ರೈತರಿಗೆ ನೋಟೀಸ್ ಜಾರಿ ಮಾಡುತ್ತಲೇ ಇವೆ. ರೈತರ ಸರಣಿ ಆತ್ಮಹತ್ಯೆ ಎಂದಿನಂತೆ ಮುಂದುವರೆದರೂ ಸತ್ತ ರೈತರಿಗೆ ಪರಿಹಾರ ಕೊಟ್ಟರೇ ವಿನಃ ಆತ್ಮಹತ್ಯೆ ತಡೆಯುವುದಕ್ಕೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ದಳ ನಾಯಕರಿಂದ ಸಾಧ್ಯವಾಗಲೇ ಇಲ್ಲ. ಇದೂ ಸಹ ಜೆಡಿಎಸ್ ವರ್ಚಸ್ಸು ಕುಸಿಯುವುದಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯ: ಏಳು ಕ್ಷೇತ್ರಗಳಲ್ಲಿ ಒಂದು ವರ್ಷ ಜೆಡಿಎಸ್‌ನ ಶಾಸಕರೇ ಇದ್ದರೂ ಯಾರೂ ತಮ್ಮ ಕ್ಷೇತ್ರಗಳನ್ನು ಪರಿಣಾಮಕಾರಿಯಾಗಿ ಪ್ರಗತಿಯತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ. ಒಂದೊಂದು ಕ್ಷೇತ್ರಕ್ಕೆ ಕನಿಷ್ಠ 300ರಿಂದ 600 ಕೋಟಿ ಘೋಷಣೆಯಾದರೂ ಯಾವುದೇ ಕಾಮಗಾರಿಗಳು ಕಾರ್ಯರೂಪಕ್ಕೆ ಬರಲಿಲ್ಲ. ಕಾಗದದೊಳಗೆ, ಗುದ್ದಲಿಪೂಜೆಗಳಿಗಷ್ಟೇ ಎಲ್ಲವೂ ಸೀಮಿತವಾಗಿವೆ.
ಸರ್ಕಾರದ ನೇತೃತ್ವವನ್ನು ಜೆಡಿಎಸ್ ವಹಿಸಿದ್ದರೂ ಏಳಕ್ಕೆ ಏಳು ಕ್ಷೇತ್ರಗಳನ್ನು ಕೊಡುಗೆಯಾಗಿ ನೀಡಿದ ಮಂಡ್ಯ ಜಿಲ್ಲೆಗೆ ಕಿಂಚಿತ್ ಕೊಡುಗೆಯನ್ನು ನೀಡದಿರುವ ಬಗ್ಗೆ ಜನರಲ್ಲಿ ಅಸಮಾಧಾನ ಮೂಡಿಸಿದೆ. ಒಣಗುತ್ತಿರುವ ಬೆಳೆಗಳಿಗೆ ನೀರು ಕೇಳಿದರೂ ಸಕಾಲದಲ್ಲಿ ನೀಡದೆ ಸತಾಯಿಸಿ ಬೆಳೆ ಒಣಗಿದ ಬಳಿಕ ನೀರು ಬಿಡುಗಡೆ ಮಾಡಿರುವ ದಳಪತಿಗಳ ನಿರ್ಲಕ್ಷ್ಯ ಧೋರಣೆ ಬಗ್ಗೆಯೂ ಜಿಲ್ಲೆಯ ಜನರಲ್ಲಿ ಆಕ್ರೋಶವಿದೆ.
● ಮಂಡ್ಯ ಮಂಜುನಾಥ್